ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲ: ಬರದ ಬೆಂಗಾಡಿನಲ್ಲಿ ಕಣ್ಮನ ಸೆಳೆವ ಜಲ ವೈಭವ

ಹತ್ತು ವರ್ಷದ ನಂತರ ತುಂಬಿದ ಕೆರೆಗಳು; ಹೇಮಾವತಿ ಜಲಾಶಯದಿಂದ ಹರಿದ ನೀರು
Last Updated 15 ಅಕ್ಟೋಬರ್ 2020, 5:15 IST
ಅಕ್ಷರ ಗಾತ್ರ

ನಾಗಮಂಗಲ: ಪ್ರತಿ ವರ್ಷವೂ ಬರಗಾಲಕ್ಕೆ ತುತ್ತಾಗುವ ಮೂಲಕ ಬರದ ಛಾಯೆಯಲ್ಲಿರುತ್ತಿದ್ದ ತಾಲ್ಲೂಕಿಗೆ ಈ ಬಾರಿ ಉತ್ತಮ ಮಳೆಯಾಗಿದ್ದು, ಜಲವೈಭವ ಕಣ್ಮನ ಸೆಳೆಯುತ್ತಿದೆ. ಜೊತೆಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಿದ ಹಿನ್ನೆಲೆಯಲ್ಲಿಬತ್ತಿ ಹೋಗಿದ್ದ ಕೆರೆಕಟ್ಟೆಗಳು ಜೀವಕಳೆ ತುಂಬಿಕೊಂಡಿದ್ದು, ಬರದ ಬೆಂಗಾಡಿನಲ್ಲಿ ಈಗ ಜಲ ವೈಭವ ಸೃಷ್ಟಿಯಾಗಿದೆ.

ಜಿಲ್ಲೆಯ 7 ತಾಲ್ಲೂಕುಗಳ ಪೈಕಿ ನಾಗಮಂಗಲವೂ ಕಾವೇರಿ ನದಿಯ ಕೂಗಳತೆಯಲ್ಲಿದ್ದರೂ ಬರದ ಕಾರ್ಮೋಡ ಪ್ರತಿ ವರ್ಷವೂ ಆವರಿಸುತ್ತಿರುತ್ತದೆ. ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲೂ ಇರುವ ಕೆರೆಗಳೇ ತಾಲ್ಲೂಕಿನ ಜನರ ಜೀವನಾಡಿಗಳಾಗಿದ್ದು,‌ ಮಳೆರಾಯನ ಕೃಪೆಯಿಂದಾಗಿ ಈ ಬಾರಿ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿದ್ದು ತಾಲ್ಲೂಕಿನ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಕಟ್ಟೆಗಳ ಹೂಳೆತ್ತಿ ಪುನಶ್ಚೇತನ ಮಾಡಿರುವುದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯವೂ ಹೆಚ್ಚಾಗಿದೆ. ಅಲ್ಲದೇ ಅಂತರ್ಜಲ ಕುಸಿತದಿಂದ ನಿಂತು ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಬರುವಂತಾಗಿದೆ. ತಾಲ್ಲೂಕಿನ ದಾಸನಕೆರೆ, ಹಿರಿಕೆರೆ, ಸೂಳೆಕೆರೆ, ಸಿಂಗರಸನಕೆರೆ, ಪಾಲಕೆರೆ, ಮೈಲಾರಪಟ್ಟಣ ಕೆರೆ, ಮದಲಹಳ್ಳಿ ಕೆರೆ, ತೊಳಲಿಕೆರೆ, ಹೆರಗನಹಳ್ಳಿ ಕೆರೆ, ಮುಳಕಟ್ಟೆ ಕೆರೆ, ದೇವರಮಲ್ಲನಾಯಕನಹಳ್ಳಿ ಕೆರೆ, ತೂಬಿನಕೆರೆ, ದೇವಲಾಪುರ‌ ಕೆರೆ ಸೇರಿದಂತೆ ಬಹುತೇಕ ಕೆರೆಗಳು ಕೋಡಿಯಾಗಿದ್ದು, ಕೆರೆಯ ಅಟ್ಟುಕಟ್ಟು ಪ್ರದೇಶದ ರೈತರು ವ್ಯವಸಾಯದಲ್ಲಿ ನಿರತರಾಗಿದ್ದಾರೆ.ಅಲ್ಲದೇ ಮಳೆಗಾಲದ ಒಂದು ಬೆಳೆಗೆ ಸೀಮಿತವಾಗುತ್ತಿದ್ದ ಕೆರೆ ಬಯಲುಗಳು ಈ ಬಾರಿ ಎರಡು ಮೂರು ಬೆಳೆ ಮಾಡಬಹುದಾದ ಮುನ್ಸೂಚನೆಯನ್ನು ನೀಡಿವೆ.

ತಾಲ್ಲೂಕಿನಲ್ಲಿರುವ ಕೆರೆಕಟ್ಟೆಗಳು ತುಂಬಿ ತುಳುಕತ್ತಿರುವುದರಿಂದ ಸ್ಥಳೀಯರು ಸೇರಿದಂತೆ ಹೊರಗಿನಿಂದ ಬಂದವರು ಸಹ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಅಲ್ಲದೇ ಕೆರೆಗಳಲ್ಲಿ ಗುಂಪುಗೂಡಿ ಜಲಕ್ರೀಡೆಗಳನ್ನಾಡುವ ಮೂಲಕ ಸಮಯ ಕಳೆಯುತ್ತಿದ್ದರೆ. ಜೊತೆಗೆ ಸೆಲ್ಫಿ ಪ್ರಿಯರು ತುಂಬಿದ ಕೆರೆಯ ಹೇರಿ, ಕೋಡಿಗಳಲ್ಲಿ ನೀರು ಹರಿಯುತ್ತಿರುವೆಡೆ ಸೆಲ್ಫಿ ಸಾಮಾನ್ಯವಾಗಿದೆ. ಸೆಲ್ಫಿ ತೆಗೆದುಕೊಳ್ಳುವ ಆತುರದಲ್ಲಿ ಅಪಾಯ ಲೆಕ್ಕಿಸದೇ ವರ್ತಿಸುತ್ತಿರುವುದು ಕಂಡುಬರುತ್ತಿದೆ.

ತಾಲ್ಲೂಕು ಕೇಂದ್ರದಿಂದ ಸುಮಾರು ಕಿ.ಮೀ ದೂರದಲ್ಲಿರುವ ದುಮ್ಮಸಂದ್ರ ಗ್ರಾಮದ ಬಳಿ ವೀರ ವೈಷ್ಣವಿ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈಗ ಮಳೆಗಾಲದ ಜೊತೆಗೆ ಹೇಮಾವತಿ ನಾಲೆಯಿಂದ‌ ನೀರು ಹರಿದ ಹಿನ್ನೆಲೆಯಲ್ಲಿಅಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗಿದ್ದು, ಬೆಳ್ಳನೆಯ ಹಾಲ್ನೊರೆಯ ಜಲಧಾರೆ ಸೃಷ್ಟಿಯಾಗಿದ್ದು, ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಸ್ಥಳೀಯರು ಒಂದು ದಿನದ ಪ್ರವಾಸ ಕೈಗೊಂಡು ಸಂಭ್ರಮಿಸುತ್ತಿದ್ದಾರೆ.

ಹತ್ತು ವರ್ಷದಲ್ಲಿ ಈ ಬಾರಿ ಉತ್ತಮವಾದ ಮಳೆಯ ಜೊತೆಗೆ ಹೇಮಾವತಿ ನಾಲೆಯಿಂದ ನೀರು ಹರಿಸಿದ್ದರಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿದ್ದು ಉತ್ತಮ ಮಳೆಯಾಗುವ ಭರವಸೆ ಮೂಡಿದೆ. ಅಲ್ಲದೇ ಕೆರೆಕಟ್ಟೆಗಳು ತುಂಬಿರುವುದರಿಂದ ಬೇಸಿಗೆಯನ್ನು ಈ ಬಾರಿ ಉತ್ತಮವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಜಾನುವಾರುಗಳಿಗೂ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ ಎಂದು ರೈತ ಡಿ.ಜಿ.ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT