ಬುಧವಾರ, ಆಗಸ್ಟ್ 4, 2021
23 °C
ಡಿಎಲ್‌ಗೆ 8ನೇ ತರಗತಿ ಕನಿಷ್ಠ ವಿದ್ಯಾರ್ಹತೆ ರದ್ದು, ಕಚೇರಿ ಮುಂದೆ ನಿಲ್ಲುವುದಕ್ಕೂ ಜಾಗವಿಲ್ಲ

ಭಾರಿ ದಂಡ: ಆರ್‌ಟಿಒ ಕಚೇರಿ ಮಂದೆ ಜನಸಾಗರ

ಶರತ್‌ ಎಂ.ಆರ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಸಂಚಾರ ನಿಯಮಗಳ ಉಲ್ಲಂಘನೆಗೆ ಭಾರಿ ದಂಡ ವಿಧಿಸುತ್ತಿರುವುದಕ್ಕೆ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ದಂಡದಿಂದ ತಪ್ಪಿಸಿಕೊಳ್ಳಲು ಡಿಎಲ್‌ ಸೇರಿ ವಾಹನಗಳ ಇತರ ದಾಖಲಾತಿ ಸರಿಪಡಿಸಿಕೊಳ್ಳಲು ಆರ್‌ಟಿಒ ಕಚೇರಿಗೆ ಎಡತಾಕುತ್ತಿದ್ದಾರೆ. ಹೀಗಾಗಿ ಕಳೆದೊಂದು ವಾರದಿಂದ ಆರ್‌ಟಿಒ ಕಚೇರಿ ಮುಂದೆ ಜನಸಾಗರವೇ ಸೇರಿದೆ.

ಚಾಲನಾ ಪರವಾನಗಿ,  ನವೀಕರಣ, ಮಾಲೀಕತ್ವ ವರ್ಗಾವಣೆ, ವಾಯುಮಾಲಿನ್ಯ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲಾತಿ ಪಡೆಯಲು ಕಚೇರಿಯ ಕೌಂಟರ್‌ಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಡಿಎಲ್ ಮಾಡಿಸಲು ಈ ಹಿಂದೆ ಇದ್ದ ಕನಿಷ್ಠ 8ನೇ ತರಗತಿ ವಿದ್ಯಾರ್ಹತೆಯನ್ನು ಕೇಂದ್ರ ಸಾರಿಗೆ ಇಲಾಖೆ ತೆಗೆದು ಹಾಕಿದ್ದು, ಪ್ರತಿಯೊಬ್ಬರೂ ಡಿಎಲ್‌ ಮಾಡಿಸಿಕೊಳ್ಳಬಹುದಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಹೆಚ್ಚು ಮಂದಿ ಡಿಎಲ್‌ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೆಚ್ಚಿನ ಮಂದಿ ಒಮ್ಮೆಲೇ ಕಚೇರಿಗೆ ಧಾವಿಸುತ್ತಿದ್ದು, ಶುಲ್ಕ ಪಾವತಿ ಕೌಂಟರ್‌, ಎಲ್‌ಎಲ್‌ ಪರೀಕ್ಷೆ, ಚಾಲನಾ ಪರೀಕ್ಷಾ ಸ್ಥಳಗಳು ಜನಜಾತ್ರೆಯೇ ಆಗಿವೆ.

ಅತ್ಯಧಿಕ ಜನರು ಒಮ್ಮೆಲೇ ಬಂದಿರುವ ಕಾರಣ ಆರ್‌ಟಿಒ ಕಚೇರಿ ಸುತ್ತ ವಾಹನಗಳನ್ನು ನಿಲ್ಲಿಸುವುದಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಧ್ಯಾಹ್ನ 2 ವೇಳೆಗೆ ಶುಲ್ಕ ಪಾವತಿಸುವ ಕೌಂಟರ್‌ ಮುಚ್ಚುತ್ತದೆ. ಅಷ್ಟರೊಳಗೆ ಪಾವತಿಸುವ ಧಾವಂತ ಎಲ್ಲರಿಗೂ ಎದುರಾಗಿದೆ. ಕೆಲವರು ತಮ್ಮ ವಾಹನಗಳ ಡಿಎಲ್‌ ಹಾಗೂ ಇತರ ದಾಖಲೆಗಳ ಅವಧಿಯನ್ನು ಗಮನಿರುವುದೇ ಇಲ್ಲ. ಅವು ಮುಗಿದು ಹೋಗಿ ವರ್ಷಗಳೇ ಕಳೆದಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ಭಾರೀ ದಂಡ ತೆರಬೇಕಾದೀತು ಎಂಬ ಭಯದಲ್ಲಿ ಮನೆಯಲ್ಲಿ ಎಲ್ಲೋ ಇಟ್ಟಿದ್ದ ದಾಖಲೆ ಹುಡುಕಿ ಜೆರಾಕ್ಸ್‌ ಮಾಡಿಸಿ ವಾಹನದಲ್ಲಿ ಇಟ್ಟುಕೊಳ್ಳುತ್ತಿದ್ದಾರೆ.

ಮಂಡ್ಯ ಆರ್‌ಟಿಒ ಕಚೇರಿ ವ್ಯಾಪ್ತಿಗೆ ಮಂಡ್ಯ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ ತಾಲ್ಲೂಕು ಸೇರುತ್ತವೆ. ನಾಗಮಂಗಲ ಎಆರ್‌ಟಿಒ ವ್ಯಾಪ್ತಿಗೆ ನಾಗಮಂಗಲ, ಕೆ.ಆರ್‌.ಪೇಟೆ ತಾಲ್ಲೂಕುಗಳು ಬರುತ್ತವೆ.

ಡಿಎಲ್‌, ಆರ್‌ಸಿ, ವಿಮೆ, ವಾಯುಮಾಲಿನ್ಯ ಪ್ರಮಾಣ ಪತ್ರ, ಹೆಲ್ಮೆಟ್‌, ಕನ್ನಡಿ ಕಡ್ಡಾಯವಾಗಿ ಇರಲೇಬೇಕು. ಇವ್ಯಾವು ಇಲ್ಲದೆ ರಾಜಾರೋಷವಾಗಿ ಸವಾರಿ ಮಾಡುತ್ತಿದ್ದವರಿಗೆ ಪೊಲೀಸರು ಇತ್ತೀಚಿನ ದಿನಗಳಲ್ಲಿ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ಹೀಗಾಗಿ ಜನರು ಈಗ ತಮ್ಮ ದಾಖಲಾತಿಗಳತ್ತ ಕಣ್ಣು ಹಾಯಿಸುತ್ತಿದ್ದಾರೆ.

‘‌ನಾನು ಹೊಸದಾಗಿ ಡಿಎಲ್‌ ಮಾಡಿಸಲು ಬಂದಿದ್ದು, ಕಚೇರಿಯ ಸಮಯಕ್ಕಿಂತ ತಡವಾಗಿ ಇನ್‌ಸ್ಪೆಕ್ಟರ್‌ ಬರುತ್ತಾರೆ. ಒಂದು ಸಣ್ಣ ಕೆಲಸಕ್ಕೂ ಮಧ್ಯಾಹ್ನದವರೆಗೂ ಕಾಯುವಂತಾಗಿದೆ’ ಎಂದು ಪಾಂಡವಪುರದ ರಘು ದೂರಿದರು.

‘ಆರ್‌ಟಿಒ ಸೇವೆಗಳ ಶುಲ್ಕಗಳು ಕಳೆದರಡು ವರ್ಷಗಳಿಂದ ದುಬಾರಿಯಾಗಿದೆ.  ಪಡೆದ ಶುಲ್ಕಕ್ಕೆ ಸರಿಯಾದ ರೀತಿಯಲ್ಲಿ ಸೇವೆಗಳು ಸಿಗದೆ ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಬೇಕು’ ಎಂದು ಹಿಟ್ಟನಹಳ್ಳಿಕೊಪ್ಪಲು ಮಂಜುನಾಥ್‌ ಆಗ್ರಹಿಸಿದರು.

ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ಮಂಡ್ಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 31 ಹುದ್ದೆಗಳಿದ್ದು ಇದರಲ್ಲಿ 15 ಹುದ್ದೆಗಳು ಖಾಲಿ ಇವೆ. 16 ಹುದ್ದೆಗಳಲ್ಲೂ ಕೆಲವರಿಗೆ ಪದೋನ್ನತಿಯಾಗಿ ಬೇರೆಡೆಗೆ ವರ್ಗಾವಣೆಯಾಗಿದ್ದಾರೆ. ಕೆಲವರು ದೀರ್ಘಾವಧಿ ರಜೆಯಲ್ಲಿದ್ದಾರೆ. ಕೇವಲ ಬೆರಳೆಣಿಕೆ ಮಂದಿ ಇದ್ದು, ಕೆಲಸಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಸಕಾಲದ ಅವಧಿ ಮುಗಿದು ಎಷ್ಟೋ ದಿನ ಕಳೆದರೂ ಸಂಬಂಧ ಪಟ್ಟ ಪ್ರಮಾಣಪತ್ರಗಳು ಅರ್ಜಿದಾರರಿಗೆ ತಲುಪಿರುವುದೇ ಇಲ್ಲ.

‘ಸಿಬ್ಬಂದಿ ನೇಮಕಾತಿ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಇನ್ನೂ ಸಿಬ್ಬಂದಿ ನೇಮಕವಾಗಿಲ್ಲ’ ಎಂದು ಆರ್‌ಟಿಒ ಟಿ.ಎಸ್‌.ಪುರುಷೋತ್ತಮ್‌ ಹೇಳಿದರು.

15ದಿನದಲ್ಲಿ 1,478 ಎಲ್‌ಎಲ್‌ಆರ್‌

ಸೆ. 1ರಿಂದ 15ರವರೆಗೆ 1,478 ಹೊಸ ಕಲಿಕಾ ಪರವಾನಗಿ ನೀಡಿದ್ದು, ಹೊಸದಾಗಿ 691 ಡಿಎಲ್‌ಗಳನ್ನು ನೀಡಲಾಗಿದೆ. ಒಟ್ಟಾರೆ ವಿವಿಧ 21ಬಗೆಯ ಸೇವೆಗಳಿಂದಾಗಿ 15ದಿನದಲ್ಲಿ ಆರ್‌ಟಿಒಗೆ ₹ 15.36ಲಕ್ಷ ಆದಾಯ ಬಂದಿದೆ ಎಂದು ಆರ್‌ಟಿಒ ಕಚೇರಿ ಮೂಲಗಳು ಇಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು