ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಂಡವಪುರದ ಸೀತಾಪುರ ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ಎಚ್‌ಡಿಕೆ

Published : 11 ಆಗಸ್ಟ್ 2024, 11:40 IST
Last Updated : 11 ಆಗಸ್ಟ್ 2024, 11:40 IST
ಫಾಲೋ ಮಾಡಿ
Comments

ಪಾಂಡವಪುರ (ಮಂಡ್ಯ): ಸೀತಾಪುರ ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ಭಾನುವಾರ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಭತ್ತದ ಪೈರು ನಾಟಿ ಮಾಡಿ ಕೃಷಿ ಚಟುವಟಿಕೆಯನ್ನು ಹುರಿದುಂಬಿಸಿದರು.

ಬಿಳಿ ಅಂಗಿ, ಬಿಳಿ ಪಂಚೆ ತೊಟ್ಟಿದ್ದ ಕುಮಾರಸ್ವಾಮಿ, ಪಂಚೆ ಎತ್ತಿಕಟ್ಟಿ ರೈತ ಲಕ್ಷ್ಮಣ ಅವರ ಗದ್ದೆಯಲ್ಲಿ 15 ನಿಮಿಷ ಭತ್ತ ನಾಟಿ ಮಾಡಿ, ರೈತರ ಗಮನಸೆಳೆದರು.

ಜೆಡಿಎಸ್ ಯುವ ಘಟಕದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಅವರು ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದರು. 100 ಹೆಣ್ಣಾಳು ಮತ್ತು 30 ಗಂಡಾಳುಗಳು ಕುಮಾರಸ್ವಾಮಿ ಅವರೊಂದಿಗೆ ನಾಟಿ ಕಾರ್ಯದಲ್ಲಿ ಪಾಲ್ಗೊಂಡರು.

ನಾಟಿ ಕಾರ್ಯಕ್ಕೂ ಮುನ್ನ ಸಮೀಪದಲ್ಲಿ ಹರಿಯುತ್ತಿದ್ದ ಕಾವೇರಿ ನದಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಈಶ್ವರ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ನಾಟಿ ಯಂತ್ರವನ್ನು ಚಾಲನೆ ಮಾಡಿ, ರೈತರನ್ನು ಬೆರಗುಗೊಳಿಸಿದರು. ನಂತರ ರೈತರೊಂದಿಗೆ ಬದುವಿನ ಮೇಲೆ ಕುಳಿತು ಊಟ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು.

2018ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆಗಸ್ಟ್ 11ರಂದು ಇದೇ ರೈತ ಲಕ್ಷ್ಮಣ ಅವರ ಗದ್ದೆಯಲ್ಲಿ ನಾಟಿ ಮಾಡಿದ್ದರು. ಈ ಬಾರಿಯೂ ಆ.11ರಂದು ನಾಟಿ ಮಾಡಿದ್ದು ಕಾಕತಾಳೀಯವಾಗಿತ್ತು.

ಈ ವೇಳೆ ಮಾತನಾಡಿದ ಸಚಿವ ಕುಮಾರಸ್ವಾಮಿ, ‘2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕೆಆರ್‌ಎಸ್ ಜಲಾಶಯ ತುಂಬಿತ್ತು. ಈ ವರ್ಷವೂ ಅಣೆಕಟ್ಟೆ ಭರ್ತಿಯಾಗಿದೆ. ಈ ಸಂತಸ ಸಮಯದಲ್ಲಿ ಅನ್ನದಾತರಿಗೆ ಆತ್ಮಸ್ಥೈರ್ಯ ತುಂಬಲು ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದೇನೆ. ರೈತರೊಂದಿಗೆ ನಾನು ಸದಾ ಇರುತ್ತೇನೆ’ ಎಂದರು.

ಶಾಸಕ ಎಚ್‌.ಟಿ. ಮಂಜು, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕ ಕೆ.ಅನ್ನದಾನಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್‌ ಹಾಗೂ ಮುಖಂಡರು ಪಾಲ್ಗೊಂಡಿದ್ದರು.

-----

‘ಕುರ್ಚಿ ಅಲುಗಾಡಲ್ಲ, ಕುಳಿತವರು ಅಲುಗಾಡುವರು’

ಮಂಡ್ಯ: ‘ಮುಖ್ಯಮಂತ್ರಿ ಕುರ್ಚಿ ಎಂದಿಗೂ ಅಲುಗಾಡಲ್ಲ, ಅದು ಕೆಂಗಲ್‌ ಹನುಮಂತಯ್ಯನವರು ಕಟ್ಟಿರುವ ವಿಧಾನಸೌಧದ ಕುರ್ಚಿ. ಅದರಲ್ಲಿ ಕುಳಿತವರು ಅಲುಗಾಡುತ್ತಾರೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನನ್ನ ಕುರ್ಚಿ ಅಲುಗಾಡಲ್ಲ’ ಎಂಬ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು. 

‘ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸಲು ಪಾದಯಾತ್ರೆ ಮಾಡಿದ್ದೇವೆ. ಮುಂದೆ ಕಾನೂನು ರೀತಿಯ ಹೋರಾಟವೂ ನಡೆಯುತ್ತದೆ. ಸಂಪದ್ಭರಿತ ಖಜಾನೆಯನ್ನು ಈ ಸರ್ಕಾರ ಲೂಟಿ ಮಾಡುತ್ತಾ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT