ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೇಮಾವತಿನಾಲೆ ಬದಿ ಕುಸಿತ: ಆತಂಕದಲ್ಲಿ ಅನ್ನದಾತ ದುರಸ್ತಿಗೆ ರೈತರ ಆಗ್ರಹ

Published 13 ಜೂನ್ 2024, 14:38 IST
Last Updated 13 ಜೂನ್ 2024, 14:38 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಹರಿಹರಪುರ ವ್ಯಾಪ್ತಿಯ ಹೇಮಗಿರಿ ನಾಲೆ ಏರಿಯ 14 ನೇ ಕಿ.ಮೀ ಆರಂಭದ ಸ್ಥಳದಲ್ಲಿ ನಾಲೆಯ ಎರಡೂ ಬದಿಗಳೂ ಕುಸಿಯುತ್ತಿದ್ದು ಯಾವಗಲಾದರೂ ಒಡೆಯುವ ಸ್ಥಿತಿಯಲ್ಲಿವೆ

ಲೈನಿಂಗ್ ತಳಭಾಗದಿಂದ ಕಾಲುವೆ ನೀರು ಸೋರಿಕೆಯಾಗುತ್ತಿದೆ. ಸದರಿ ನಾಲೆಯಿಂದ ಇದುವರೆಗೂ ಮುಂಗಾರು ಹಂಗಾಮಿನ ಬೇಸಾಯಕ್ಕೆ ನೀರು ಹರಿಸಿಲ್ಲ. ಈಗಾಗಲೇ ಜೂನ್ ತಿಂಗಳ ಮದ್ಯ ಭಾಗಕ್ಕೆ ಬಂದಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಈ ಕಾಲುವೆ ಮೂಲಕ ನೀರು ಹರಿಸುವ ಸಮಯ ಹತ್ತಿರವಾಗಿದೆ. ಆದರೆ 14 ನೇ ಕಿ.ಮೀ ಬಳಿ ಕುಸಿದಿರುವ ನಾಲಾ ಏರಿಯನ್ನು ಸರಿಪಡಿಸದಿದ್ದರೆ ನಾಲೆ ಒಡೆದು ರೈತರು ಬೆಳೆನಷ್ಠಕ್ಕೆ ಒಳಗಾಗುತ್ತಾರೆ. ಜೊತೆಗೆ ನಾಲೆಯ ಮುಂದಿನ ಹಂತದ ರೈತರು ನೀರಿಲ್ಲದ ಸಂಕಷ್ಠಕ್ಕೆ ಒಳಗಾಗುತ್ತಾರೆ. ಹೇಮಗಿರಿ ನಾಲೆಯನ್ನು 2010 ರಲ್ಲಿ ಆಧುನೀಕರಣ ಮಾಡಲಾಗಿತ್ತು. ಆಧುನೀಕರಣದ ಸಂದರ್ಭದಲ್ಲಿ ನಾಲೆಯ ಎರಡೂ ಬದಿಗಳನ್ನೂ ಸಿಮೆಂಟ್ ಲೈನಿಂಗ್ ಮಾಡಲಾಗಿತ್ತು. ಸದ್ಯ ಕಾಲುವೆ ಏರಿ 14 ಕಿ.ಮೀ ವ್ಯಾಪ್ತಿಯಲ್ಲಿ ಕುಸಿದಿದ್ದರೂ ಲೈನಿಂಗ್ ಆಧಾರದ ಮೇಲೆ ನಾಲೆ ಒಡೆಯದೆ ನಿಂತಿದ್ದು ಸಂಭಂದಿಸಿದವರು ತುರ್ತು ಗಮನಹರಿಸಬೇಕಿದೆ. ಈ ನಾಲೆಯು ಬಂಡೀಹೊಳೆ ಗ್ರಾಮದಿಂದ ಹಿಡಿದು ವಿಠಲಾಪುರದ ವರೆಗೆ 37 ಕಿ.ಮೀ ಉದ್ದವಿದ್ದು ಸುಮಾರು 4500 ಎಕರೆ ಭೂ ಪ್ರದೇಶಕ್ಕೆ ನೀರುಣಿಸುತ್ತದೆ. ಈ ನಾಲಾ ವ್ಯಾಪ್ತಿಯ ಶೇ 90 ರಷ್ಟು ಪ್ರದೇಶ ಭತ್ತದ ಬೆಳೆಗೆ ಹೆಸರಾಗಿದೆ. ಶತಮಾನದ ಇತಿಹಾಸ ಹೊಂದಿರುವ ಈ ನಾಲೆಯನ್ನು 2010 ರಲ್ಲಿ ನಾಲೆಯ ಎರಡೂ ಬದಿಗಳನ್ನು ಸಿಮೆಂಟ್ ಹಾಗೂ ಕಬ್ಬಿಣ ಬಳಕೆ ಮಾಡಿ ಲೈನಿಂಗ್ ಮಾಡಲಾಗಿತ್ತಾದರೂ ನಾಲಾ ಏರಿಯ ಆಧುನೀಕರಣ ಮಾಡಲಿಲ್ಲ. ಇದರ ಪರಿಣಾಮ ಹೇಮಗಿರಿ ನಾಲಾ ಏರಿ ಹಲವು ಕಡೆ ದುರ್ಬಲಗೊಂಡಿದ್ದು ಸುಧಾರಣೆಗಾಗಿ ಕಾಯುತ್ತಿದೆ. ತಕ್ಷಣವೇ ನೀರಾವರಿ ಇಲಾಖೆ ನಾಲಾ ಏರಿಯ ಉದ್ದಕ್ಕೂ ಸಂಚರಿಸಿ ದುರ್ಭಲ ಭಾಗಗಳನ್ನು ಗುರಿತಿಸಿ ಸರಿಪಡಿಸಬೇಕಾಗಿದೆ.

ಕೃಷಿ ಚಟುವಟಿಕೆ ಚುರುಕು: ಕಳೆದ ವರ್ಷ ನದಿ ಅಣೆಕಟ್ಟೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಮತ್ತು ಹೇಮಗಿರಿ ನದಿ ಅಣೆಕಟ್ಟೆ ನಾಲಾ ವ್ಯಾಪ್ತಿಯಲ್ಲಿ ನೀರು ಹರಿಯದೆ ಕಂಗಾಲಾಗಿದ್ದ ರೈತರು ಈ ವರ್ಷ ಬೇಸಾಯಕ್ಕಾಗಿ ಕಾಲುವೆಗಳಲ್ಲಿ ನೀರು ಹರಿಯುವುದನ್ನು ಕಾಯುತ್ತಾ ಕುಳಿತಿದ್ದು ಕಾಲುವೆಯ ಬದಿ ಕುಸಿದಿರುವದು ಚಿಂತೆಗೀಡು ಮಾಡಿದೆ. ನೀರಾವರಿ ಇಲಾಖೆ ಅಧಿಕಾರಿಗಳು ನೀರು ಬಿಡುವ ಮುನ್ನ ನಾಲಾ ಏರಿಗಳ ಮೇಲೆ ಸಂಚರಿಸಿ ಕಾಲುವೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

 ಕೆ.ಆರ್.ಪೇಟೆ ತಾಲ್ಲೂಕಿನ  ಹರಿಹರಪುರ ಗ್ರಾಮ ವ್ಯಾಪ್ತಿಯ ಹೇಮಗಿರಿ ನಾಲೆ ಏರಿಯ  ಬದಿಗಳು ಕುಸಿದಿರುವುದು.
 ಕೆ.ಆರ್.ಪೇಟೆ ತಾಲ್ಲೂಕಿನ  ಹರಿಹರಪುರ ಗ್ರಾಮ ವ್ಯಾಪ್ತಿಯ ಹೇಮಗಿರಿ ನಾಲೆ ಏರಿಯ  ಬದಿಗಳು ಕುಸಿದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT