ಶನಿವಾರ, ಸೆಪ್ಟೆಂಬರ್ 18, 2021
28 °C
ಗ್ರಾಮಗಳಿಗೆ ಅಶುದ್ಧ ನೀರು ಪೂರೈಕೆ, ಕೊಳವೆಬಾವಿ ಮೊರೆ ಹೋದ ಜನ; ಕೆರೆ ಕಟ್ಟೆಗಳು ಶೇ 60ರಷ್ಟು ಖಾಲಿ

ನೀರು ಸಂಸ್ಕರಣಾ ಘಟಕದ ನಿರ್ವಹಣೆ ಇಲ್ಲ

ವಿಜಯ್‌ಕುಮಾರ್‌ ಬೆಳಕವಾಡಿ Updated:

ಅಕ್ಷರ ಗಾತ್ರ : | |

Prajavani

ಬೆಳಕವಾಡಿ: ಬಿ.ಜಿ.ಪುರ ಹೋಬಳಿಯ ಹಲವು ಗ್ರಾಮಗಳು ಕುಡಿಯುವ ನೀರಿನ ಲಭ್ಯತೆಯಿದ್ದರೂ, ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಜನರು ಕೊಳವೆಬಾವಿ ನೀರನ್ನೇ ಆಶ್ರಯಿಸುವಂತಾಗಿದೆ.

ಬಿ.ಜಿ.ಪುರ ಹೋಬಳಿಯಲ್ಲಿ ಕಾವೇರಿ ನದಿ ಹಾಗೂ ಕೊಳವೆಬಾವಿ ನೀರು ಲಭ್ಯವಿದ್ದರೂ ಜನರು ಬಾಯಾರಿಕೆ ತೀರಿಸಿಕೊಳ್ಳದಂತಾಗಿದೆ. ಇದಕ್ಕೆ ಕಾರಣ ನೀರು ಶುದ್ಧೀಕರಣ ಘಟಕಗಳ ನಿರ್ವಹಣೆ ಕೊರತೆಯಿಂದ ಅಶುದ್ಧ ನೀರು ಜನರಿಗೆ ಸರಬರಾಜು ಆಗುತ್ತಿದೆ. ಇದರಿಂದ ಕೊಳವೆಬಾವಿಗಳ ಮೊರೆ ಹೋಗಿದ್ದಾರೆ. ಆದರೆ, ಕೆಲ ಕೊಳವೆಬಾವಿಗಳಲ್ಲಿ ಫ್ಲೋರೈಡ್‌ಯುಕ್ತ ನೀರನ್ನು ಜನರು ಕುಡಿಯುತ್ತಿದ್ದಾರೆ. ಇದರಿಂದ ಜನರು ಅನಾರೋಗ್ಯದಿಂದ ಬಳಲುವಂತಾಗಿದೆ.

ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮುಡುಕುತೊರೆ ಬಳಿ ₹22.96 ಕೋಟಿ ವೆಚ್ಚದಲ್ಲಿ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಇಲ್ಲಿಂದ ಬಿ.ಜಿ.ಪುರ ಹೋಬಳಿಯ 56 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕಾವೇರಿ ನೀರನ್ನು ಶುದ್ಧೀಕರಣ ಮಾಡಬೇಕಾದ ಸಂಸ್ಕರಣಾ ಘಟಕದ ನೀರು ಪಾಚಿಗಟ್ಟಿದೆ. ಜನರು ಈ ನೀರನ್ನು ಬಳಕೆ ಮಾಡುವುದನ್ನು ಬಿಟ್ಟು ವರ್ಷಗಳೇ ಕಳೆದಿವೆ.

ಬೆಳಕವಾಡಿಯ ಸುರ್ಗಿತೋಪು ಬಳಿ ಇರುವ ಮತ್ತೊಂದು ಸಂಸ್ಕರಣಾ ಘಟಕವಿದ್ದು, 5 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ, ಈ ನೀರನ್ನು ಜಾನುವಾರುಗಳಿಗೆ ಮಾತ್ರ ಬಳಸಲಾಗುತ್ತಿದೆ. ಜೊತೆಗೆ ಹೋಬಳಿಯಲ್ಲಿ ಒಟ್ಟು 9 ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾಗಿವೆ. ಎ.ಪಿ.ದೊಡ್ಡಿ, ಉತ್ತೂರು, ಮಂಚನಕೊಪ್ಪಲು ಗ್ರಾಮ ಸೇರಿ ವಿವಿಧೆಡೆ ನೀರಿನ ಸಂಗ್ರಹಣಾ ಟ್ಯಾಂಕ್‌ಗಳು ನಿರ್ಮಾಣವಾಗಿವೆ. ಆದರೆ, ಕೆಲ ಗ್ರಾಮಗಳಲ್ಲಿ ನೀರಿನ ಟ್ಯಾಂಕ್‌ಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು ತೆರವುಗೊಳಿಸಿ ಹೊಸ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಬೇಕಿದೆ.

ಹೋಬಳಿಯಲ್ಲಿ 30ಕ್ಕೂ ಹೆಚ್ಚು ಕೆರೆಗಳಿದ್ದು, ಮಳೆ ಕೊರತೆಯಿಂದ ಶೇ 60ರಷ್ಟು ಭಾಗ ಖಾಲಿಯಾಗಿವೆ. ಬರಗಾಲ ಮತ್ತಷ್ಟು ತೀವ್ರವಾದರೆ ಜನ, ಜಾನುವಾರುಗಳಿಗೆ ನೀರಿಲ್ಲದೆ ಬಳಲುವ ಸ್ಥಿತಿ ನಿರ್ಮಾಣವಾಗಲಿದೆ. ಕಿರು ನೀರು ಯೋಜನೆಯಡಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿರುವ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳಿಗೆ ನೀರನ್ನು ಪೂರೈಸಲಾಗುತ್ತಿದೆ. 

ಸಂಸ್ಕರಣಾ ಘಟಕದಲ್ಲಿ ಸ್ವಚ್ಛತೆಯಿಲ್ಲ: ‘ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಸಂಸ್ಕರಣಾ ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆ ಆಗುತ್ತಿದೆ. ನಾವು ಕೊಳವೆಬಾವಿ ನೀರನ್ನು ಕುಡಿಯಲು ಬಳಕೆ ಮಾಡುತ್ತಿದ್ದೇವೆ’ ಎಂದು ಕಗ್ಗಲಿಪುರ ಗ್ರಾಮಸ್ಥ ವೀರಣ್ಣ ಹೇಳಿದರು.

ಸಂಸ್ಕರಣಾ ಘಟಕದ ಸ್ವಚ್ಛತೆಗೆ ಕ್ರಮ
ಮಳವಳ್ಳಿ ತಾಲ್ಲೂಕಿನಲ್ಲಿ 56 ಹಳ್ಳಿಗಳಿಗೆ ನೀರು ಪೂರೈಸುವ ಸಂಸ್ಕರಣಾ ಘಟಕವನ್ನು ನಿರ್ವಹಣೆ ಮಾಡದ ಕಾರಣ ಶುದ್ಧ ಕುಡಿಯುವ ನೀರು ಜನರಿಗೆ ಸಿಗುತ್ತಿಲ್ಲ. ಈ ವಿಷಯ ನನ್ನ ಗಮನಕ್ಕೂ ಬಂದಿದೆ. ಸಂಸ್ಕರಣಾ ಘಟಕ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ತಾಂತ್ರಿಕ ದೋಷಗಳಿದ್ದರೆ ಅದನ್ನು ಸರಿಪಡಿಸಿ ಜನರಿಗೆ ಶುದ್ಧ ನೀರು ಒದಗಿಸಲಾಗುವುದು. ಸದ್ಯ, ಚುನಾವಣಾ ನೀತಿ ಸಂಹಿತೆ ಇದ್ದು, ಅದು ಮುಗಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.