ಮಂಡ್ಯ: ‘ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಉದ್ಯಮಗಳು ಯಶಸ್ವಿಯಾಗುತ್ತಿಲ್ಲ. ಆದರೆ ಪರಿಸರಕ್ಕೆ ಮಾರಕವಾದ ಉದ್ದಿಮೆಗಳು ಯಶಸ್ವಿಯಾಗುತ್ತಿರುವುದು ನೋವಿನ ವಿಚಾರವಾಗಿದೆ’ ಎಂದು ರಂಗಕರ್ಮಿ ಪ್ರಸನ್ನ ವಿಷಾದ ವ್ಯಕ್ತಪಡಿಸಿದರು.

ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ನಡೆದ ‘ಪರಿಸರ ಸ್ನೇಹಿ ಉದ್ದಿಮೆಗಳು’ ಕುರಿತ ಎರಡು ದಿನಗಳ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘25 ವರ್ಷದ ಹಿಂದೆ ನಾನು ದೆಹಲಿಯಿಂದ ಸಾಗರ ತಾಲ್ಲೂಕಿನ ಹೆಗ್ಗೋಡಿಗೆ ಬಂದೆ. ಗ್ರಾಮ ಸ್ವರಾಜ್ಯ ಪರಿಕಲ್ಪನೆ ಅಡಿ ಗ್ರಾಮೀಣ ಕೈಗಾರಿಕೆ ಸ್ಥಾಪನೆ ಮಾಡಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿ ಕಾಣಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವದೇಶಿ ಚಳವಳಿ ಹುಟ್ಟಿಕೊಂಡಿತ್ತು. ವಿದೇಶಿ ವಸ್ತು, ವಿದೇಶಿ ಸಂಸ್ಕೃತಿ ದೇಶವನ್ನು ಆಳುತ್ತಿವೆ ಎಂಬ ಕೂಗು ಇತ್ತು. ಈ ಹೋರಾಟಕ್ಕೆ ಮಹಾತ್ಮಾ ಗಾಂಧೀಜಿ ಬೆಂಬಲ ನೀಡಿದ್ದರು. ಆದರೆ ಸ್ವರಾಜ್ಯ ಕಲ್ಪನೆಯಿಂದ ಸ್ಥಾಪನೆಯಾದ ಉದ್ದಿಮೆಗಳು ಗೆಲುವು ಕಾಣಲು ಸಾಧ್ಯವಾಗಲಿಲ್ಲ’ ಎಂದರು.

‘ಪಾರಂಪರಿಕ ಉದ್ದಿಮೆಗಳಿಗೆ ಉಳಿಗಾಲವಿಲ್ಲದ ಪರಿಸ್ಥಿತಿ ಇದೆ. ಗ್ರಾಮೀಣ ಜನರಲ್ಲಿ ಕೌಶಲ, ತಜ್ಞತೆ ಇದೆ. ಆದರೆ ಸರ್ಕಾರಗಳು ಅದನ್ನು ಗುರುತಿಸುವ ಕೆಲಸ ಮಾಡುತ್ತಿಲ್ಲ. ಸರ್ಕಾರದ ನೀತಿಗಳಲ್ಲಿ ಗ್ರಾಮೀಣ ಭಾಗದ ಗುಡಿ ಕೈಗಾರಿಕೆಗಳನ್ನು ಉಳಿಸುವ ಕಾಳಜಿ ಇಲ್ಲ, ಕೇವಲ ಢಾಂಬಿಕತೆಯೇ ತುಂಬಿದೆ. ಹಳ್ಳಿಯ ಸಂಸ್ಕೃತಿ, ವೃತ್ತಿಯನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಪರಿಸರ ಸಂರಕ್ಷಣೆ, ನೈರ್ಮಲ್ಯ, ನೀರಿನ ಸದ್ಬಳಕೆ ಕುರಿತು ಹಳ್ಳಿ ಜನರಲ್ಲಿ ಇರುವ ಅರಿವನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ’ ಎಂದು ಹೇಳಿದರು.

‘ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಮುಂತಾದ ಉದ್ದಿಮೆದಾರರ ಮುಂದೆ ಗ್ರಾಮೀಣ ಗುಡಿ ಕೈಗಾರಿಕೆಗಳು ಸೊರಗಿವೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ತಲೆಎತ್ತಿದ ಗ್ರಾಮೀಣ ಉದ್ದಿಮೆದಾರರು ಶ್ರೀಮಂತ ಉದ್ದಿಮೆದಾರರಿಂದ ಪಾಠ ಕಲಿಯುವ ಸ್ಥಿತಿ ಉಂಟಾಗಿದೆ. ನಗರ ಕೇಂದ್ರಿತವಾದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿರುವ ಕಾರಣ ಗುಡಿ ಕೈಗಾರಿಕೆಗಳಿಗೆ ಪುನಶ್ಚೇತನ ಸಿಗುತ್ತಿಲ್ಲ’ ಎಂದು ಹೇಳಿದರು.

‘ಹಳ್ಳಿ ಮತ್ತು ನಗರಗಳ ನಡುವೆ ಮಿತ್ರತ್ವಕ್ಕಿಂತ ಶತ್ರುತ್ವವೇ ಹೆಚ್ಚಳವಾಗುತ್ತಿದೆ. ಗ್ರಾಮೀಣ ಭಾಗದ ವೃತ್ತಿ, ಉದ್ದಿಮೆಗಳನ್ನು ಉಳಿಸಿಕೊಳ್ಳಬೇಕಾದರೆ ಚಳವಳಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘಟನೆಗಳು ಯೋಚಿಸಬೇಕು’ ಎಂದು ಹೇಳಿದರು.

ದಕ್ಷಿಣ ಭಾರತ ನಿರ್ಮಾಪಕರ ಸಂಘದ ಸಿಇಒ ಕೆ.ಪಂಚಾಕ್ಷರಂ, ಸೆಲ್ಕೊ ಸೋಲಾರ್ ಲೈಟ್ ಸಂಸ್ಥೆಯ ಸಹಾಯಕ ಮಹಾಪ್ರಬಂಧಕ ಗುರುಪ್ರಕಾಶ್ ಶೆಟ್ಟಿ, ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆಂಜನೇಯರೆಡ್ಡಿ, ವಿಶ್ವ ಯುವಕ ಕೇಂದ್ರದ ಕಾರ್ಯಕ್ರಮ ಸಂಯೋಜಕ ಮಂಜುನಾಥ್, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ಚಂದ್ರ ಇದ್ದರು.

ವಸ್ತು ಪ್ರದರ್ಶನ, ಮಾರಾಟ ಮೇಳ

ಕಾರ್ಯಗಾರದ ಅಂಗವಾಗಿ ಕರ್ನಾಟಕ ಸಂಘದ ಆವರಣದಲ್ಲಿ ದೇಶೀಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಸಾವಯವ ಹಾಲಿನ ಉತ್ಪನ್ನಗಳು, ಸ್ವಸಹಾಯ ಸಂಘಗಳ ಆಯುರ್ವೇದ ಔಷಧಿಗಳು, ಸಾವಯವ ಉತ್ಪನ್ನಗಳು, ಬಾಳೆ ಎಲೆಗಳು, ಬ್ಯಾಗ್ಗಳು, ನಾರಿನ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಶನಿವಾರ ಸಂಜೆಯವರೆಗೂ ಈ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.