ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ವಿಮರ್ಶೆ ಮಾಡುವವರು ದೇಶ ಬಿಡಬೇಕಾ: ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಪ್ರಶ್ನೆ

ಬಂಧುತ್ವ ವೇದಿಕೆಯಿಂದ ವಿಚಾರ ಸಂಕಿರಣ
Last Updated 30 ಜೂನ್ 2022, 13:49 IST
ಅಕ್ಷರ ಗಾತ್ರ

ಮಂಡ್ಯ: ‘ಹಿಂದೂ ಧರ್ಮದ ಅನಿಷ್ಟಗಳ ಬಗ್ಗೆ ರಾಷ್ಟ್ರಕವಿ ಕುವೆಂಪು ಅವರು ಟೀಕೆ ಮಾಡಿದ್ದರು. ಆ ಹೇಳಿಕೆಯಿಂದಾಗಿ ಅವರು ಹಲವು ಆರೋಪ ಎದುರಿಸಬೇಕಾಯಿತು. ಕುವೆಂಪು ಅವರು ದೇಶ ಬಿಟ್ಟು ಹೋಗಲಿ ಎಂಬ ಕುಚೋದ್ಯದ ಮಾತುಗಳೂ ಕೇಳಿ ಬಂದಿದ್ದವು. ಧರ್ಮದ ವಿಮರ್ಶೆ ಮಾಡುವವರು ದೇಶವನ್ನೇ ತೊರೆಯಬೇಕಾ’ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್‌ ಹೇಳಿದರು.

ನಗರದ ಬಾಲ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಗುರುವಾರ ನಡೆದ ‘ಪ್ರಸ್ತುತ ಸಾಮಾಜಿಕ ತಲ್ಲಣಗಳು ಮತ್ತು ಕುವೆಂಪು ಚಿಂತನೆ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕುವೆಂಪು ಅವರನ್ನು ಪತ್ರಿಕೆಯವರು ಸಂದರ್ಶನ ಮಾಡಿದಾಗ ಹಿಂದೂ ಧರ್ಮದಂತಹ ಅನಿಷ್ಟ ಧರ್ಮ ಇನ್ನೊಂದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಬ್ರಾಹ್ಮಣ ಮಹಾಸಭಾದಲ್ಲಿ, ಕುವೆಂಪು ಅವರಿಗೆ ಈ ದೇಶದಲ್ಲಿ ಇರಲು ಹಕ್ಕಿಲ್ಲ, ದೇಶ ಬಿಟ್ಟು ಹೋಗಲಿ ಎಂಬ ಮಾತುಗಳು ಕೇಳಿಬಂದವು. ಒಂದು ಧರ್ಮದ ಬಗ್ಗೆ ಟೀಕೆ ಮಾಡಿದಾಗ ದೇಶ ಬಿಟ್ಟು ಹೋಗಲಿ ಎಂಬ ಕೂಗು ಹಬ್ಬಿಸಿದ್ದು ಕುಚೋದ್ಯವಲ್ಲವೇ’ ಎಂದು ಪ್ರಶ್ನಿಸಿದರು.

‘ಭಾರತೀಯ ನೆಲದಲ್ಲಿ ಹಿಂದೂ ಧರ್ಮವನ್ನು ಒಪ್ಪಿಕೊಂಡವರು, ವಿಮರ್ಶಿಸಿದವರು ಸಾವಿರಾರು ವರ್ಷಗಳಿಂದ ಇದ್ದಾರೆ. ಕುವೆಂಪು ಅವರನ್ನು ದೇಶ ಬಿಟ್ಟು ಹೋಗಿ ಎಂದಿದ್ದು ಏಕೆ? ಕುವೆಂಪು ಅವರ ವಿಚಾರಗಳಿಂದ ರೂಪಗೊಂಡ ಒಂದು ಯುವ ತಲೆಮಾರು ಕರ್ನಾಟಕದ ಸಾಂಸ್ಕೃತಿಕ ಮತ್ತು ಭೌತಿಕ ವಲಯದಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ. ತಾನು ಮಹಾಕವಿ ಆಗಬೇಕಿಂದದ್ದರೆ ಇಂಗ್ಲಿಷ್‌ ಕವಿಯಾಗಿ ಬ್ರಿಟಿಷರ ಅಡಿ ಇರುತ್ತಿದ್ದೆ, ಸನಾತನ ಧರ್ಮಗಳು, ಅವರು ನಡೆಸುತ್ತಿದ್ದ ಗುರುಕುಲಗಳು ಕೊಡುತ್ತಿದ್ದ ಶಿಕ್ಷಣ, ಜಾತಿ ಶ್ರೇಣಿಕರಣದಲ್ಲಿ ಇದ್ದಿದ್ದರೆ ನಾನು ಸಗಣಿ ಬಾಚುತ್ತಾ ಕೊಟ್ಟಿಗೆಯಲ್ಲಿ ಇರಬೇಕಾಗಿತ್ತು ಎಂದು ಕುವೆಂಪು ಪ್ರತಿಪಾದಿಸಿದ್ದರು’ ಎಂದರು.

‘ಯಾವ ದೇಶ ತನ್ನದೇ ಧರ್ಮೀಯರಿಗೆ ಜ್ಞಾನ, ವಿದ್ಯೆ, ವ್ಯಕ್ತಿತ್ವ ಮತ್ತು ಸ್ವಾಭಿಮಾನವನ್ನು ಕಟ್ಟಿಕೊಡುವಂತಹ ಅವಕಾಶ ಕೊಡದೇ ಬಾಗಿಲು ಮುಚ್ಚಿವುದೋ ಅದು ಅನಿಷ್ಟ ಧರ್ಮ ಎಂಬುದು ಕುವೆಂಪು ಅವರ ವಾದವಾಗಿತ್ತು. ಜ್ಯೋತಿಬಾ ಫುಲೆ, ಪೆರಿಯಾರ್, ಡಾ.ಬಿ.ಆರ್‌.ಅಂಬೇಡ್ಕರ್‌, ಸಾವಿತ್ರಿಬಾಫುಲೆ, ಬಸವಣ್ಣ, ಕನಕದಾಸ ಇವೆರಲ್ಲರ ಅಭಿಪ್ರಾಯವೂ ಇದೇ ಆಗಿತ್ತು’ ಎಂದರು.

‘ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳ ಬಗ್ಗೆ ಕುವೆಂಪು ಮಾತನಾಡಿ 50 ವರ್ಷಗಳೇ ಆಗಿದೆ. ಆದರೂ ಅನಿಷ್ಟಗಳು ಜಾಸ್ತಿಯಾಗಿರುವುದು ದುರಂತ. ನಿನಗೆ ನೀನೇ ಮನು, ಇದು ಮನುಷ್ಯನ ಮಾತಿನ ಧರ್ಮ, ನಿನ್ನ ಬದುಕಿನ ಕಾನೂನನ್ನು ಯಾರು ಬರೆಯಬೇಕು? ನಿನ್ನ ಬುದಕಿನ ಪದ್ಧತಿಗಳನ್ನ, ಆಹಾರವನ್ನ ಯಾರೂ ನಿರ್ದೇಶಿಸಬೇಕು. ದೇವಸ್ಥಾನಕ್ಕೆ ಹೋಗಬೇಕೋ ಬೇಡವೋ ಎನ್ನುವುದನ್ನು ಬೇರೆಯವರು ನಿರ್ಧಾರ ಮಾಡಬೇಕಾ’ ಎಂದರು.

ಕಾರ್ಮಿಕ ಮುಖಂಡರಾದ ಸಿ.ಕುಮಾರಿ, ವೇದಿಕೆಯ ಮೈಸೂರು ವಿಭಾಗದ ಸಂಚಾಲಕಿ ಡಾ.ಲೀಲಾ ಸಂಪಿಗೆ, ಜಿಲ್ಲಾ ಸಂಚಾಲಕ ದೇವರಾಜ ಕೊಪ್ಪ, ವಕೀಲ ಸುಂಡಹಳ್ಳಿ ಮಂಜುನಾಥ್‌ ಭಾಗವಹಿಸಿದ್ದರು.

ಪುಟ್ಟಪ್ಪ ವಾಸ್ತವ, ಕುವೆಂಪು ದರ್ಶನ
ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿ ‘ಕುವೆಂಪು ಅವರ ದೃಷ್ಟಿಯಲ್ಲಿ ನಾನು ಹಿಂದೂ ಅಲ್ಲ, ವಿಶ್ವಮಾನವ. ವಿಶ್ವಮಾನವನೇ ಜಾತಿ ಕೆಟ್ಟವನು, ಅವನೇ ದಿವ್ಯ ಮಾನವ. ಜಾತಿ ಒಂದು ಅಸ್ಮಿತೆಯಾಗಿದೆ, ಹುಟ್ಟುವಾಗ ಎಲ್ಲರೂ ವಿಶ್ವಮಾನವರೇ, ಬೆಳೆಯುತ್ತಾ ಅವರು ಅಲ್ಪಮಾನವರಾಗುತ್ತಾರೆ, ಪುಟ್ಟಪ್ಪ ಎಂದರೆ ವಾಸ್ತವ, ಕುವೆಂಪು ಎಂದರೆ ದರ್ಶನವಾಗಿ ಕಾಣುತ್ತಾರೆ’ ಎಂದರು.

‘ನಮ್ಮ ದೇಶದಲ್ಲಿ ಪುರೋಹಿತ ಶಾಹಿಗಳು ತುಂಬಾ ಅದ್ಭುತವಾದ ಕತೆ ಕಟ್ಟಿದ್ದಾರೆ. ಕಾವ್ಯಗಳು ಬೇಕು, ಆದರೆ ನಮ್ಮ ಕಾಲದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿ ಇರಬೇಕು. ಕಾವ್ಯ, ಚರಿತ್ರೆ ಹಾಗೂ ಪುರಾಣಗಳ ವ್ಯತ್ಯಾಸ ಗೊತ್ತಿರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT