ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕುಗಳು ಉಲ್ಲಂಘನೆ ಆಗದಿರಲಿ: ಮನ್ಸೂರ್ ಅಹಮದ್ ಜಮಾನ್

ಹಕ್ಕುಗಳ ರಾಷ್ಟ್ರೀಯ ದಿನಾಚರಣೆ
Last Updated 10 ಡಿಸೆಂಬರ್ 2018, 13:37 IST
ಅಕ್ಷರ ಗಾತ್ರ

ಮಂಡ್ಯ: ‘ಭಾರತೀಯ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ಮಾನವ ಹಕ್ಕುಗಳಿಗೆ ಅಪಾರ ಮಹತ್ವವಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮನ್ಸೂರ್ ಅಹಮದ್ ಜಮಾನ್ ಹೇಳಿದರು.

ನೆಹರೂ ಯುವ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ, ಅನನ್ಯ ಹಾರ್ಟ್‌ ಸಂಸ್ಥೆ ವತಿಯಿಂದ ಸೋಮವಾರ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮಾನವ ಹಕ್ಕುಗಳ ಉಲ್ಲಂಘನೆ ವಿಚಾರ ಇತ್ತೀಚಿನ ದಿನಗಳಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ. ಸಂವಿಧಾನಬದ್ಧವಾದ ಹಕ್ಕುಗಳ ರಕ್ಷಣೆಗೆ ಇಡೀ ಸಮಾಜ ಮುಂದಾಗಬೇಕು. ಅದಕ್ಕೂ ಮೊದಲು ಈ ಹಕ್ಕುಗಳ ತಿಳಿವಳಿಕೆ ಸಾಮಾನ್ಯ ಜನರಲ್ಲೂ ಮೂಡಬೇಕು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಘನತೆ ಇರುತ್ತದೆ. ಅದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಮಾನವಹಕ್ಕುಗಳ ಉಲ್ಲಂಘನೆಗೆ ಶಿಕ್ಷೆ ವಿಧಿಸಲಾಗುತ್ತದೆ. ಹೀಗಾಗಿ ಜನರು ತಿಳಿವಳಿಕೆ ಹೊಂದಿ ಮಾನವ ಹಕ್ಕುಗಳ ಸಂರಕ್ಷಣೆಗೆ ಮುಂದಾಗಬೇಕು’ ಎಂದರು.

‘ಒಬ್ಬ ವ್ಯಕ್ತಿ ಹುಟ್ಟಿದ ನಂತರ ಜೀವಿಸುವ, ಮಾತನಾಡುವ, ಸಂಚಾರ ಮಾಡುವ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸ್ವತಂತ್ರ್ಯ ಹಕ್ಕುಗಳನ್ನು ಜನ್ಮಜಾತವಾಗಿಯೇ ಪಡೆದಿರುತ್ತಾನೆ. 18ನೇ ಶತಮಾನದಿಂದ ಮಾನವ ಹಕ್ಕುಗಳ ಕುರಿತು ಹೋರಾಟ ಆರಂಭವಾಗಿದೆ. 1948ರ ಡಿ.10ರಂದು ವಿಶ್ವಸಂಸ್ಥೆಯು 30 ಮಾನವ ಹಕ್ಕುಗಳನ್ನು ವಿಶ್ವಕ್ಕೆ ನೀಡಿದೆ. ನಮಗಿರುವ ಹಕ್ಕುಗಳನ್ನು ಪಡೆಯುವ ಜೊತಗೆ ವಿಶ್ವದ ಐಕ್ಯತೆಗೆ ಕರ್ತವ್ಯಗಳನ್ನು ನಿರ್ವಹಿಸಬೇಕು’ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ನಿರ್ದೇಶಕ ಡಾ.ಸುಧಾಕರ್ ಹೊಸಹಳ್ಳಿ ಉಪನ್ಯಾಸ ನೀಡಿ ‘ಮಾನವ ಹಕ್ಕುಗಳು ಶೋಷಣೆಯ ವಿರುದ್ಧದ ಸಾಧನಗಳಾಗಿವೆ. ಸಾರ್ವಜನಿಕರಿಗೆ ಅವುಗಳ ಬಗ್ಗೆ ಜಾಗೃತಿ ಮೂಡಬೇಕು. ಮಾನವ ಹಕ್ಕುಗಳ ಬಳಕೆಯ ಬಗ್ಗೆ ಅರಿವು ಹೊಂದಬೇಕು. ಸಮಾನತೆ ಸಾರಲು ಗಾಂಧೀಜಿ ಕೋಟು ಬಿಚ್ಚಿದರೆ, ಡಾ.ಬಿ.ಆರ್.ಅಂಬೇಡ್ಕರ್ ಕೋಟು ಧರಸುತ್ತಾರೆ. ಆದರೆ ದೇಶದೊಳಗಿನ ರಾಜಕಾರಣಿಗಳು ಸ್ವಹಿತಾಸಕ್ತಿಗಾಗಿ ಮಾನವ ಹಕ್ಕುಗಳ ಉಲ್ಲಂಘನೆಯೊಂದಿಗೆ ಅಸಮಾನತೆ ಬಿತ್ತರಿಸುತ್ತಿದ್ದಾರೆ’ ಎಂದರು.

‘ಶಿಕ್ಷಕರು ಮಕ್ಕಳಿಗೆ ದೇಶ ಒಗ್ಗೂಡಿಸುವ ಮಾರ್ಗಗಳ ಬದಲಿಗೆ ಬೇರ್ಪಡಿಸುವ ಮಾರ್ಗ ಕಲಿಸುತ್ತಿದ್ದಾರೆ. ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಆದರ್ಶ ಹಾಗೂ ಸಮಾನತೆ ವಿಚಾರಗಳನ್ನು ದೂರ ಮಾಡುತ್ತಾ, ಅಸಮಾನತೆ ದೃಢೀಕರಿಸಲು ಮುಂದಾಗುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದರು.

‘ಅಪರಾಧಿಯನ್ನು ರಾಷ್ಟ್ರಪತಿ ಅವರ ಕ್ಷಮಾದಾನದ ಮೂಲಕ ಶಿಕ್ಷೆಯಿಂದ ಮುಕ್ತಿಗೊಳಿಸುವ ಅವಕಾಶವಿದೆ. ಕ್ಷಮಾದಾನ ಪ್ರಕ್ರಿಯೆಯೇ ಅಪರಾಧಕ್ಕೆ ಪುಷ್ಟೀಕರಿಸುವ ಮಾರ್ಗವಾಗಿದೆ. ಇದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗಿದೆ. ದೇಶಕ್ಕೆ ಸ್ವತಂತ್ರ ಬಂದು 70 ವರ್ಷವಾದರೂ, ಹಸಿವಿನಿಂದ ಸಾಯುವ ಅನೇಕ ಘಟನೆಗಳು ನಡೆಯುತ್ತಿವೆ. ಇದು ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಾಗಿದ್ದು, ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದೇಶ ಹಾಗೂ ಪ್ರಪಂಚದ ಭವಿಷ್ಯದ ಕುರಿತು ಆಲೋಚಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದರು.

ರೋಟರಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ರಮೇಶ್, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ, ಅನನ್ಯ ಹಾರ್ಟ್ ಸಂಸ್ಥೆ ಕಾರ್ಯದರ್ಶಿ ಬಿ.ಎಸ್.ಅನುಪಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT