ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಅಂತರಜಲ ಕುಸಿತದಿಂದ ನಿಂಬೆ ರೈತರಿಗೆ ದೊರೆಯದ ಹೆಚ್ಚಿನ ಲಾಭ

ಗುಣಮಟ್ಟದ ನಿಂಬೆ ಕೊರತೆ; ಧಾರಣೆ ಇಳಿಕೆ

ಬಾಬುಗೌಡ ರೋಡಗಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದರಿಂದ ನೀರಿನ ಮೂಲಗಳು ಬತ್ತಿವೆ. ಇದರಿಂದ ಅವಶ್ಯಕತೆಗನುಗುಣವಾಗಿ ನೀರುಣಿಸದ ಕಾರಣ ಗುಣಮಟ್ಟದ ನಿಂಬೆ ಮಾರುಕಟ್ಟೆಗೆ ಬಾರದಿರುವುದರಿಂದ ಪ್ರತಿ ವಾರ ಧಾರಣೆಯಲ್ಲಿ ಇಳಿಕೆ ಆಗುತ್ತಿದೆ.

ಬೇಸಿಗೆ ಆರಂಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿಂಬೆ ಮಾರುಕಟ್ಟೆಗೆ ಬರುತ್ತಿದ್ದರಿಂದ ಹೆಚ್ಚಿನ ಧಾರಣೆ ಇರಲಿಲ್ಲ. ಆವಕ ಕಡಿಮೆ ಆಗಲಾಂಭಿಸಿದ್ದರಿಂದ ಕೆಲ ದಿನಗಳ ಕಾಲ ಧಾರಣೆಯಲ್ಲಿ ಏರಿಕೆ ಕಂಡಿತ್ತು. ಇದೀಗ ಬೇಡಿಕೆ ಇದ್ದರು ಗುಣಮಟ್ಟದ ನಿಂಬೆ ಇಲ್ಲದಿರುವುದರಿಂದ ಧಾರಣೆ ಇಳಿಕೆ ಆಗಿದೆ. ಕಳೆದ ವಾರಕ್ಕಿಂತ ಈ ವಾರ ₹200 ರಿಂದ ₹500 ಧಾರಣೆ ಕಡಿಮೆ ಆಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

‘ಚಲೋ ಮಾಲು ಇದ್ದರೆ ಧಾರಣೆ ಪಾಡ ಸೀಗುತೈತಿ. ನಮ್ಮದು ಸೇರಿದಂತೆ ಬಹುತೇಕ ರೈತರ ಹೊಲದಲ್ಲಿ ತೆರೆದ ಬಾವಿ, ಕೊಳವೆ ಬಾವಿಗೆ ನೀರು ಕಡಿಮೆ ಆಗಿದ್ದರಿಂದ ಒಳ್ಳೆಯ ನಿಂಬಿಕಾಯಿ ಸೀಗುತ್ತಿಲ್ಲ. ಕಾಯಿ ದೊಡ್ಡು ಆಗುತನಕ ಬಿಟ್ಟರೆ ನೀರಿನ ಕೊರತೆಯಿಂದ ಉದುರಿ ಬಿಳುತ್ತವೆ. ಹಿಂಗಾಗಿ ಎಷ್ಟರೇ ಬರಲಿ ಅಂಥ ಪ್ರತಿ ವಾರ ಒಂದೆರಡು ಡಾಗ ತಗೊಂಡು ಹೋಗ್ತೀನಿ. ಈ ವಾರ ₹1,500 ರಿಂದ ₹1,600 ಮಾರಾಟ ಆಗ್ಯಾದ. ಹೋದ ವಾರ ಇದಕ್ಕೂ ₹100 ಹೆಚ್ಚಿಗೆ ಮಾರಾಟ ಆಗಿತ್ತು’ ಎಂದು ಜಂಬಗಿ ಗ್ರಾಮದ ರೈತ ಮಲ್ಲಪ್ಪ ಪೂಜಾರಿ ಹೇಳಿದರು.

‘ಬೋರಗಳು ಬತ್ತಿದ್ದರಿಂದ ಸಾಕಷ್ಟು ರೈತರ ನಿಂಬೆ ಗಿಡಗಳು ಒಡಗಿವೆ. ಕೆಲವರು ಇರುವ ನೀರಿನಲ್ಲಿಯೇ ಒಂದಿಷ್ಟು ಬೆಳೆದಿದ್ದಾರೆ. ಗುಣಮಟ್ಟ ಇಲ್ಲದಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರು ಹೆಚ್ಚಿನ ಧಾರಣೆ ಸಿಗುತ್ತಿಲ್ಲ. ನಾವು ಯಾವುದೇ ಬೆಳೆಗಳನ್ನು ಬೆಳೆಯದೆ ಕೇವಲ ನಿಂಬೆಗೆ ನೀರು ಉಣಿಸಿದ್ದರಿಂದ ಗುಣಮಟ್ಟದ ನಿಂಬೆಗಳು ದೊರೆಯುತ್ತವೆ. ಈ ವರ್ಷ ₹4,000 ವರೆಗೆ ನಮ್ಮ ಕಾಯಿ ಮಾರಾಟ ಆಗಿವೆ. ಕಳೆದ ವಾರ ₹2,800 ರಿಂದ ₹3,000 ದರೆಗೆ ಸವಾಲ್‌ ಆಗಿವೆ’ ಎನ್ನುತ್ತಾರೆ ಇಂಡಿಯ ರೈತ ಪ್ರಭಾಕರ ಬಗಲಿ.

‘ನೀರಿನ ಮೂಲಗಳು ಬತ್ತಿದ್ದರಿಂದ ಮಾರುಕಟ್ಟೆಗೆ ಅವಶ್ಯಕ ಪ್ರಮಾಣದಲ್ಲಿ ಗುಣಮಟ್ಟದ ನಿಂಬೆ ಬರುತ್ತಿಲ್ಲ. ಪ್ರತಿ ವಾರ ಆವಕ ಕಡಿಮೆ ಆಗುತ್ತಿದೆ. ಕಳೆದ ವಾರ ₹1,000 ರಿಂದ ₹3,000 ವರೆಗೆ ಮಾರಾಟ ಆಗಿತ್ತು. ಈ ವಾರ ತೀರಾ ಗುಣಮಟ್ಟ ಕುಸಿದ ಕಾರಣ ₹800 ರಿಂದ ₹2,500 ವರೆಗೆ ಮಾರಾಟ ಆಗಿದೆ. ಶೈನಿಂಗ್‌ ಇರುವ ಮಾಲು ಇದ್ದರೆ ₹3,500 ರಿಂದ ₹4,000 ವರೆಗೂ ಸಹ ಮಾರಾಟ ಆಗಿವೆ’ ಎಂದು ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಾಯಕ ಕಾರ್ಯದರ್ಶಿ ಎಸ್‌.ಎಚ್‌.ಅವಟಿ ಪ್ರಜಾವಾಣಿಗೆ ತಿಳಿಸಿದರು.

*
ಬೇಡಿಕೆ ಸಾಕಷ್ಟಿದೆ. ಆದರೆ, ಗುಣಮಟ್ಟದ ನಿಂಬೆ ಮಾರುಕಟ್ಟೆ ಆವಕ ಆಗದಿರುವುದರಿಂದ ಧಾರಣೆಯಲ್ಲಿ ಇಳಿಕೆ ಆಗಿದೆ. ಶೈನಿಂಗ್‌ ಮಾಲು ಬಂದರೆ ₹3,000 ವರೆಗೆ ಮಾರಾಟ ಆಗುತ್ತದೆ
-ಎಸ್‌.ಎಚ್‌.ಅವಟಿ, ಎಪಿಎಂಸಿ ಸಹಾಯಕ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು