ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸರ್ಕಾರಿ ಶಾಲೆಯ 105 ಶಿಕ್ಷಕರಿಗೆ ಬಡ್ತಿ

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪದೋನ್ನತಿ; ಶಿಕ್ಷಕ ಸಮೂಹದಲ್ಲಿ ಸಂತಸ
Last Updated 23 ಸೆಪ್ಟೆಂಬರ್ 2020, 11:10 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ಒಂಬತ್ತು ಶೈಕ್ಷಣಿಕ ವಲಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 105 ಶಿಕ್ಷಕರಿಗೆ ಪ್ರೌಢಶಾಲೆಯ ಶಿಕ್ಷಕರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಬಡ್ತಿ ನೀಡಿದೆ.

ಎರಡು ವರ್ಷದ ಬಳಿಕ ಬಡ್ತಿ ಪ್ರಕ್ರಿಯೆ ನಡೆದಿದ್ದಕ್ಕೆ ಶಿಕ್ಷಕ ಸಮೂಹದಲ್ಲಿ ಸಂತಸ ವ್ಯಕ್ತವಾಗಿದೆ. 2018ರಲ್ಲಿ ಜಿಲ್ಲೆಯ 116 ಶಿಕ್ಷಕರಿಗೆ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪದೋನ್ನತಿ ನೀಡಲಾಗಿತ್ತು ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

‘ಬಡ್ತಿ ಪ್ರಕ್ರಿಯೆಯಲ್ಲಿ ಮೆರಿಟ್, ರೋಸ್ಟರ್ ಪಾಲಿಸಲಾಗಿದೆ. ಈ ಹಿಂದೆ ಯಾವ ಬಿಂದುವಿಗೆ ನಿಂತಿತ್ತು, ಅಲ್ಲಿಂದಲೇ ಈ ಬಾರಿ ಮುಂದುವರೆಸ ಲಾಗಿದೆ. ವಾರದ ಹಿಂದೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ, ಅರ್ಹತೆ ಆಧಾರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ, ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ನೀಡಿದ್ದೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಪಾಂಡುರಂಗ ತಿಳಿಸಿದರು.

‘ಪ್ರಾಥಮಿಕ ಶಾಲೆಗಳಲ್ಲಿನ ಬಹುತೇಕ ಶಿಕ್ಷಕರು ಬಿಎ, ಎಂಎ, ಬಿ.ಇಡಿ, ಬಿಎಸ್ಸಿ, ಎಂಎಸ್ಸಿ, ಬಿ.ಇಡಿ ಪದವೀಧರರೂ ಆಗಿದ್ದಾರೆ. ಇಲಾಖೆಯ ನಿಯಮಾವಳಿಗಳಂತೆ ಅರ್ಹರಿಗೆ ಪ್ರೌಢಶಾಲೆಗೆ ಪದೋನ್ನತಿಗೊಳಿಸುವ ಪ್ರಕ್ರಿಯೆ ಆಗಿಂದಾಗ್ಗೆ ನಡೆಯುತ್ತಿರುತ್ತದೆ. ನಮ್ಮಲ್ಲೂ ಈ ಪ್ರಕ್ರಿಯೆ ನಡೆದಿದ್ದು, ಬಡ್ತಿ ಹೊಂದಿದ 105 ಶಿಕ್ಷಕರು ಈಗಾಗಲೇ ಪ್ರೌಢಶಾಲಾ ಶಿಕ್ಷಕರಾಗಿ ವರದಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಎಲ್ಲರಿಗೂ ಜಿಲ್ಲೆಯೊಳಗೆ ಹುದ್ದೆ ತೋರಿಸಲಾಗಿದೆ. ಹಲವು ವರ್ಷ ಒಂದೇ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದವರಿಗೆ ಬದಲಾವಣೆ ಆಗಿದೆ. ಹೆಚ್ಚಿನ ಜವಾಬ್ದಾರಿ ಹೆಗಲಿಗೇರಿದೆ. ಮತ್ತಷ್ಟು ಆಳ ಅಧ್ಯಯನ ನಡೆಸಿ ಹೈಸ್ಕೂಲ್ ಮಕ್ಕಳಿಗೆ ಬೋಧಿಸಬೇಕಿದೆ. ಇವರ ವೇತನ ಶ್ರೇಣಿಯೂ ಬದಲಾ ಗಲಿದೆ. ಜೊತೆಗೆ ಒಂದು ಇನ್‌ಕ್ರಿಮೆಂಟ್ ದೊರೆಯಲಿದೆ’ ಎಂದು ತಿಳಿಸಿದರು.

ದಶಕದ ಪರಿಶ್ರಮ: ಕೃಷ್ಣೇಗೌಡ

‘ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ನಾನು, 1997ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನೇಮಕಗೊಂಡಿದ್ದೆ. ಕೆಲಸಕ್ಕೆ ಸೇರಿದ ಬಳಿಕ 2008–09ರಲ್ಲಿ ಸಂಬಳ ರಹಿತವಾಗಿ ಬಿ.ಇಡಿ ತರಬೇತಿ ಪಡೆದೆ. ದಶಕದ ಪರಿಶ್ರಮಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ’ ಎಂದು ಎಚ್‌.ಡಿ.ಕೋಟೆ ತಾಲ್ಲೂಕಿನ ಹೊಮ್ಮರಗಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾಗಿ ಪದೋನ್ನತಿ ಪಡೆದ ಮೈಸೂರು ದಕ್ಷಿಣ ವಲಯದ ವಿಶ್ವೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಎಸ್.ಕೃಷ್ಣೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT