ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರಂದು ಮಧ್ಯರಾತ್ರಿ ಪಂಜಿನ ಮೆರವಣಿಗೆ

ರೈತ ಮತ್ತು ದಲಿತ ಸಂಘಟನೆಗಳಿಂದ ಒಗ್ಗಟ್ಟಿನ ಪ್ರತಿಭಟನೆಗೆ ನಿರ್ಧಾರ
Last Updated 11 ಆಗಸ್ಟ್ 2020, 8:41 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ನಿರ್ಧರಿಸಿವೆ.

ಎರಡೂ ಸಂಘಟನೆಗಳ ನಾಯಕರು ಇಲ್ಲಿ ಮಂಗಳವಾರ ಸಭೆ ಸೇರಿ, ‌ಒಗ್ಗಟ್ಟಿನ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂಬ ತೀರ್ಮಾನಕ್ಕೆ ಬಂದರು.

ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ‘ಸರ್ಕಾರ ಜಾರಿಗೆ ತಂದಿರುವ ಹಲವು ಕಾಯ್ದೆಗಳ ತಿದ್ದುಪಡಿಗಳ ವಿರುದ್ಧ ಆಗಸ್ಟ್ 14ರಂದು ಮಧ್ಯರಾತ್ರಿ 12 ಗಂಟೆಗೆ ಬೆಂಗಳೂರಿನಲ್ಲಿ ತಮಟೆ ಚಳವಳಿ ಹಾಗೂ ‍ಪಂಜಿನ ಮೆರವಣಿಗೆ ನಡೆಸಲಾಗುವುದು. ಮುಂಬರುವ ದಿನಗಳಲ್ಲಿ ಸರ್ಕಾರವನ್ನೇ ಕಿತ್ತೊಗೆಯುವಂತಹ ಹೋರಾಟ ರೂಪಿಸಲಾಗುವುದು’ ಎಂದು ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಘಟಕದ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ‘ಭೂಹೀನರಿಗೆ ಭೂಮಿ ಕೊಡುವಂತಹ ಸುಗ್ರೀವಾಜ್ಞೆಗಳನ್ನು ಏಕೆ ಜಾರಿಗೆ ತರುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಸಚಿವ ಆರ್.ಅಶೋಕ್‌ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಅಧಿನಾಯಕ’ ಎಂದು ಆರೋಪಿಸಿದ ಅವರು, ‘ಇದಕ್ಕಾಗಿಯೇ ಸರ್ಕಾರವು ಕೃಷಿಯನ್ನು ಕಾರ್ಪೋರೇಟೀಕರಣಗೊಳಿಸಲು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದೆ’ ಎಂದು ಹರಿಹಾಯ್ದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅವರು, ಇದು ಆರ್‌ಎಸ್ಎಸ್ ಸರ್ಕಾರ, ಮೋಹನ್‌ ಭಾಗವತ್‌ ಅವರೇ ಪ್ರಧಾನಿ. ನರೇಂದ್ರ ಮೋದಿ, ಅಮಿತ್‌ ಷಾ, ಬಿ.ಎಸ್.ಯಡಿಯೂರಪ್ಪ ನೆಪಮಾತ್ರರು ಎಂದು ಟೀಕಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ‘ನಾಗಪುರದ ಆರ್‌ಎಸ್‌ಎಸ್‌ ಚಿಂತನೆಯನ್ನು ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜಾರಿಗೊಳಿಸುತ್ತಿದೆ. ಖಾಸಗೀಕರಣದ ಮೂಲಕ ಬಡವರ ಮತ್ತು ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿಯ (ಸಂಯೋಜನ ಬಣ) ರಾಜ್ಯ ಘಟಕದ ಸಂಯೋಜಕ ವಿ.ನಾಗರಾಜ್ ಅವರು, ‘ಕೋವಿಡ್ ಸಂದರ್ಭದಲ್ಲಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತರುವ ಮೂಲಕ ತುರ್ತುಪರಿಸ್ಥಿತಿಯನ್ನು ಪರೋಕ್ಷವಾಗಿ ಹೇರಲಾಗುತ್ತಿದೆ’ ಎಂದರು.

‘ಪ್ರತಿ ಹಳ್ಳಿಗಳಲ್ಲೂ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹಳ್ಳಿಗಳಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಅನ್ಯರಿಗೆ ಮಾರಾಟಕ್ಕಿಲ್ಲ ಎಂಬ ನಾಮಫಲಕಗಳನ್ನು ಹಾಕಲಾಗುತ್ತಿದೆ. ಇದರಲ್ಲಿ ಜನರೇ ಪಾಲ್ಗೊಳ್ಳುವಂತೆ ಮಾಡುವಂತಹ ಹೋರಾಟವನ್ನು ರೂಪಿಸಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆಯ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT