ಗುರುವಾರ , ಜನವರಿ 21, 2021
18 °C
ಬುಂಡೆ ಬೆಸ್ತರ ಕಾಲೊನಿಯಲ್ಲಿ ಆಶ್ರಮಶಾಲೆ ಇದ್ದರೂ ಪಾಠವಿಲ್ಲ

150 ಮಕ್ಕಳಿಗೆ ಬೇಕಿದೆ ಶಾಲೆ!

ಎಚ್‌.ಎಸ್.ಸಚ್ಚಿತ್ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ತಾಲ್ಲೂಕಿನ ಬುಂಡೆ ಬೆಸ್ತರ ಕಾಲೊನಿಯಲ್ಲಿ ಶಾಲೆ ಇಲ್ಲವಾಗಿದ್ದು, 150 ಮಕ್ಕಳು ಶಿಕ್ಷಣಕ್ಕಾಗಿ ಪರದಾಡುವಂತಾಗಿದೆ.

ಇಲ್ಲಿ ಒಟ್ಟು 1,200 ಕುಟುಂಬಗಳು ವಾಸವಿದ್ದು, 125ರಿಂದ 150 ಮಕ್ಕಳು ಇದ್ದಾರೆ. ಇವರ ಶಿಕ್ಷಣಕ್ಕಾಗಿ 15 ವರ್ಷಗಳಿಂದಲೂ ಗ್ರಾಮಸ್ಥರು ಶಾಲೆ ಆರಂಭಿಸುವಂತೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದುವರೆಗೂ ಶಾಲೆ ಮಂಜೂರಾಗಿಲ್ಲ.

ಇಲ್ಲಿನ ಮಕ್ಕಳು ನಿತ್ಯ 2 ಕಿ.ಮೀ ದೂರದ ನಲ್ಲೂರುಪಾಲ ಗ್ರಾಮದ ಶಾಲೆಗೆ ಹೋಗಿ ಬರಬೇಕಾಗಿದೆ. ಈ ಸಮಸ್ಯೆಯಿಂದಾಗಿ ಬಹುತೇಕ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇಲ್ಲಿರುವ ಆಶ್ರಮಶಾಲೆಯಲ್ಲಿ ಕೇವಲ ಊಟೋಪಚಾರ ಮಾತ್ರ ನಡೆದಿದ್ದು, ಪಠ್ಯ ಚಟುವಟಿಕೆ ಸ್ಥಗಿತಗೊಂಡಿದೆ.

‘ಗ್ರಾಮದಲ್ಲಿ ಶಾಲೆಗೆ ಆರಂಭಿಸುವಂತೆ ರಾಜಕಾರಣಿಗಳಿಗೆ ಅರ್ಜಿ ನೀಡಲಾಗಿದೆ. ಆದರೆ, ಇದುವರೆಗೂ ಶಾಲೆ ಮಂಜೂರಾಗಿಲ್ಲ’ ಎಂದು ಗ್ರಾಮದ ಮುಖಂಡ ರಾಜು ತಿಳಿಸಿದರು.

‘ಕಾಲೊನಿಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಿಲಯವಿದೆ. ಈ ಕೇಂದ್ರದಲ್ಲಿ 50 ವಿದ್ಯಾರ್ಥಿಗಳಿಗೆ ನಿತ್ಯ ಊಟೋಪಚಾರದ ವ್ಯವಸ್ಥೆ ಇದೆ. ಇದನ್ನು ಹೊರತುಪಡಿಸಿ ಶಿಕ್ಷಣಕ್ಕೆ ಬೇಕಾದ ಯಾವುದೇ ಪಠ್ಯ ಚಟುವಟಿಕೆ ಇಲ್ಲಿ ಇಲ್ಲ. ಈ ಮಕ್ಕಳು ಗ್ರಾಮದಲ್ಲಿ ಇದ್ದಾಗ ನಿಲಯದ ಊಟಕ್ಕೆ ಬರುತ್ತಾರೆ. ವಲಸೆ ಹೋದಾಗ ಅವರೊಂದಿಗೆ ಹೋಗುವುದರಿಂದ ಪಠ್ಯ ಚಟುವಟಿಕೆ ನಡೆಸಲಾಗುತ್ತಿಲ್ಲ’ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುಜೇಂದ್ರ ಹೇಳುತ್ತಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಪ್ರತಿಕ್ರಿಯಿಸಿ, ‘ಕಳೆದ ವರ್ಷ ಬುಂಡೆ ಬೆಸ್ತರ ಕಾಲೊನಿಯ ಶಾಲೆ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೈಕ್ಷಣಿಕ ವರ್ಷ ಅಂತ್ಯದಲ್ಲಿದ್ದ ಕಾರಣ ಶಾಲೆ ಮಂಜೂರಾಗಲಿಲ್ಲ. 2020ರಲ್ಲಿ ಕೋವಿಡ್ ಎದುರಾಗಿದ್ದರಿಂದ ಯಾವುದೇ ನೂತನ ಶಾಲೆ ಮಂಜೂರು ಮಾಡಿಲ್ಲ. 2021ನೇ ಸಾಲಿನಲ್ಲಿ ಶಾಲೆ ಮಂಜೂರಾತಿಗೆ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ಜಾಗೃತಿ ಮೂಡಿಸುವ ಕೆಲಸ
ಬುಂಡೆ ಬೆಸ್ತರ ಕಾಲೊನಿಯಲ್ಲಿ 1ರಿಂದ 5 ತರಗತಿ ಮಕ್ಕಳಿಗೆ ಆಶ್ರಮಶಾಲೆ ನಡೆದಿದ್ದು, ಈ ಮಕ್ಕಳು ಊಟೋಪಚಾರಕ್ಕೆ ಬಂದು ಹೋಗುವರು. ಋತುಮತಿ ಆದ ಹೆಣ್ಣುಮಕ್ಕಳು ಶಾಲೆ ಬಿಡುತ್ತಿದ್ದಾರೆ. ಈ ಎಲ್ಲವನ್ನು ಗಮನದಲ್ಲಿಟ್ಟು ಇಲಾಖೆ ಜಾಗೃತಿ ಮೂಡಿಸುವ ಕೆಲಸ ಕೈಗೊಂಡಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಎಚ್‌.ಎಸ್.ಬಿಂದ್ಯಾ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

***

ಬುಂಡೆ ಬೆಸ್ತರ ಕಾಲೊನಿಯಲ್ಲಿ 1ರಿಂದ 5 ತರಗತಿ ಮಕ್ಕಳಿಗೆ ಆಶ್ರಮಶಾಲೆ ನಡೆದಿದ್ದು, ಈ ಮಕ್ಕಳು ಊಟೋಪಚಾರಕ್ಕೆ ಬಂದು ಹೋಗುವರು. ಋತುಮತಿ ಆದ ಹೆಣ್ಣುಮಕ್ಕಳು ಶಾಲೆ ಬಿಡುತ್ತಿದ್ದಾರೆ. ಈ ಎಲ್ಲವನ್ನು ಗಮನದಲ್ಲಿಟ್ಟು ಇಲಾಖೆ ಜಾಗೃತಿ ಮೂಡಿಸುವ ಕೆಲಸ ಕೈಗೊಂಡಿದೆ.
–ಎಚ್‌.ಎಸ್.ಬಿಂದ್ಯಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು