ಮಂಗಳವಾರ, ಜುಲೈ 27, 2021
27 °C
ಜಿಲ್ಲಾ ಬ್ಯಾಂಕ್‌ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಸಂಸದ ಪ್ರತಾಪ ಸಿಂಹ ಬಿಡುಗಡೆ

₹19,112 ಕೋಟಿ ಸಾಲ ಯೋಜನೆ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ (ಲೀಡ್‌ ಬ್ಯಾಂಕ್‌) ಸಿದ್ಧಪಡಿಸಿರುವ 2021–22ನೇ ಸಾಲಿನ ₹ 19,112 ಕೋಟಿ ಗುರಿಯ ಸಾಲ ಯೋಜನೆಯನ್ನು ಸಂಸದ ಪ್ರತಾಪ ಸಿಂಹ ಗುರುವಾರ ಬಿಡುಗಡೆ ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬ್ಯಾಂಕ್‌ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಆರ್ಥಿಕ ವರ್ಷದ ಸಾಲ ಯೋಜನೆಯ ವಿವರಗಳನ್ನು ಪ್ರಕಟಿಸಲಾಯಿತು.

‘ಆದ್ಯತಾ ವಲಯಕ್ಕೆ ₹ 14,476 ಕೋಟಿ ಮತ್ತು ಆದ್ಯತೆಯೇತರ ವಲಯಕ್ಕೆ ₹ 4,636 ಕೋಟಿ ಸಾಲ ಯೋಜನೆ ನಿಗದಿಪಡಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ 25 ರಷ್ಟು ಹೆಚ್ಚಳವಾಗಿದೆ. ವಿವಿಧ ಸರ್ಕಾರಿ ಪ್ರಾಯೋಜಕತ್ವದ ಯೋಜನೆಗಳಿಗೆ ₹ 1,167 ಕೋಟಿ ನಿಗದಿಪಡಿಸಲಾಗಿದೆ’ ಎಂದು ಲೀಡ್‌ ಬ್ಯಾಂಕ್‌ ಸಹಾಯಕ ಪ್ರಧಾನ ವ್ಯವಸ್ಥಾಪಕ ಪಿ.ಗೋಪಿನಾಥ ಶಾಸ್ತ್ರಿ ತಿಳಿಸಿದರು.

ಪ್ರತಾಪ ಸಿಂಹ ಮಾತನಾಡಿ, ’ವಾರ್ಷಿಕ ಸಾಲ ಯೋಜನೆ ಮಾರ್ಚ್‌ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಕೋವಿಡ್‌ ಕಾರಣದಿಂದ ಅಲ್ಪ ತಡವಾಗಿದೆ. ಕೋವಿಡ್‌ನಿಂದಾಗಿ ಬಹಳ ಮಂದಿಗೆ ಸಾಲ ಮರುಪಾವತಿ ಕಷ್ಟವಾಗಿದೆ. ಮರುಪಾವತಿಗೆ ಸ್ವಲ್ಪ ಕಾಲಾವಕಾಶ ನೀಡುವ ಬಗ್ಗೆ ಕ್ರಮವಹಿಸಿ’ ಎಂದು ಮನವಿ ಮಾಡಿದರು.

‘ಗ್ರಾಮೀಣ ಭಾಗದ ಜನರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ. ಬ್ಯಾಂಕ್‌ ಸಿಬ್ಬಂದಿ ಇಂಗ್ಲಿಷ್‌, ಹಿಂದಿಯಲ್ಲಿ ಮಾತನಾಡಿದರೆ ಅವರಿಗೆ ಅರ್ಥ ಆಗುವುದಿಲ್ಲ. ಆದ್ದರಿಂದ ಅಧಿಕಾರಿಗಳು ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಿ’ ಎಂದು ಸೂಚಿಸಿದರು. 

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ‘ವಾರ್ಷಿಕ ಸಾಲ ಯೋಜನೆ ಪ್ರಕಟಿಸುವಾಗ ಆದ್ಯತಾ ವಲಯಕ್ಕೆ ಹೆಚ್ಚಿನ ಗಮನ ನೀಡಬೇಕು. ಆದ್ಯತಾ ವಲಯದಲ್ಲಿ ರೈತರು, ಗ್ರಾಮೀಣ ಭಾಗದ ಜನರು ಸಾಲ ಪಡೆಯಲು ಸಂಬಂಧಪಟ್ಟ ದಾಖಲೆಗಳನ್ನು ನೀಡುವಾಗ ಸಮಸ್ಯೆ ಎದುರಿಸುವರು. ಸಾಲ ನೀಡುವ ಪ್ರಕ್ರಿಯೆ ಸರಳೀಕೃತವಾಗಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಉಪ ಪ್ರಧಾನ ವ್ಯವಸ್ಥಾಪಕರಾದ ಸುಮನಾ ದಾಸ್‌ ಗುಪ್ತಾ, ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಟಿ.ವೆಂಕಟಸುಬ್ಬಯ್ಯ ಪಾಲ್ಗೊಂಡಿದ್ದರು.

‘ಡಿ.ಸಿಯಾಗಿ ಗೃಹ ಸಾಲ ಪಡೆಯಲು 3 ತಿಂಗಳು ಬೇಕಾಯಿತು’: ‘ಗೃಹ ಸಾಲ ಪಡೆಯುವುದು ಅತ್ಯಂತ ಸುಲಭ. ಆದರೆ, ಒಬ್ಬ ಜಿಲ್ಲಾಧಿಕಾರಿಯಾಗಿ ನನಗೆ ವೇತನದ ಆಧಾರದ ಮೇಲೆ ಗೃಹ ಸಾಲದ ಪ್ರಕ್ರಿಯೆ ಪೂರ್ಣಗೊಳಿಸಲು 3 ತಿಂಗಳುಗಳು ಬೇಕಾದವು’ ಎಂದು ಬಗಾದಿ ಗೌತಮ್‌ ತಮ್ಮ ಕಹಿ ಅನುಭವ ಹಂಚಿಕೊಂಡರು.

‘ಸಾಲ ಪಡೆಯಬೇಕಾದರೆ ನಾನು ಹಾಗೂ ಪತ್ನಿ ಪ್ರತ್ಯೇಕ ವಾಸ ದೃಢೀಕರಣ ಪತ್ರ ನೀಡಬೇಕು ಎಂದು ಬ್ಯಾಂಕ್‌ನವರು ಹೇಳಿದರು. ಅದು ಸಾಧ್ಯವಿಲ್ಲ ಎಂದು ನಾನು ಕೈಬಿಟ್ಟಿದ್ದೆ. ಈ ವಿಚಾರವನ್ನು ಒಬ್ಬರು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರ ಗಮನಕ್ಕೆ ತಂದರು. ಅವರು ಮಧ್ಯಪ್ರವೇಶಿಸಿದ ಬಳಿಕ ಸಾಲ ಸಿಕ್ಕಿತು. ಪ್ರತ್ಯೇಕ ವಾಸ ದೃಢೀಕರಣ ಪತ್ರ ಬೇಕು ಎಂಬ ಷರತ್ತನ್ನೇ ಅವರು ಕಿತ್ತುಹಾಕಿದರು’ ಎಂದರು.

‘ಒಂದು ವರ್ಷದ ಹಿಂದೆಯಷ್ಟೇ ಈ ಘಟನೆ ನಡೆದಿದೆ. ಸಾಲ ಪಡೆಯಲು ಒಬ್ಬ ಜಿಲ್ಲಾಧಿಕಾರಿಗೆ ಇಷ್ಟು ಕಷ್ಟವಾದರೆ, ಸಾಮಾನ್ಯರು, ರೈತರು ಇನ್ನೆಷ್ಟು ಕಷ್ಟಪಡಬೇಕು’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.