ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಇಸಾಕ್ ಅವರ ಗ್ರಂಥಾಲಯ: ದಾನಿಗಳಿಗೆ ₹ 29 ಲಕ್ಷ ವಾ‍ಪಸ್

ಸರ್ಕಾರವೇ ಗ್ರಂಥಾಲಯ ನಿರ್ಮಿಸಲು ಮುಂದಾದ ಮೇಲೆ ಸಾರ್ವಜನಿಕರ ಹಣ ಏಕೆ– ದಾನಿಗಳ ಪ್ರಶ್ನೆ
Last Updated 21 ಏಪ್ರಿಲ್ 2021, 13:26 IST
ಅಕ್ಷರ ಗಾತ್ರ

ಮೈಸೂರು: ಬೆಂಕಿಗೆ ಆಹುತಿಯಾಗಿದ್ದ ಸೈಯದ್ ಇಸಾಕ್ ಅವರ ಗ್ರಂಥಾಲಯವನ್ನು ಮರು ನಿರ್ಮಿಸಲೆಂದು ಸಂಗ್ರಹಿಸಿದ್ದ ₹ 29 ಲಕ್ಷ ಕ್ರೌಡ್‌ ಫಂಡಿಂಗ್‌ ಹಣವನ್ನು ದಾನಿಗಳಿಗೆ ವಾಪಸ್ ನೀಡಲು ಫಂಡ್‌ ರೈಸರ್ ಅಭಿಯಾನ ಆರಂಭಿಸಿದ್ದ ಫತೇನ್‌ ಮಿಸ್ಬಾ ನಿರ್ಧರಿಸಿದ್ದಾರೆ.

‘ಸರ್ಕಾರವೇ ಗ್ರಂಥಾಲಯವನ್ನು ಮರು ನಿರ್ಮಿಸಲು ಮುಂದೆ ಬಂದಿರುವಾಗ ಸಾರ್ವಜನಿಕರ ಹಣ ಏಕೆ ಬೇಕು’ ಎಂದು ದಾನಿಗಳು ಸೇರಿದಂತೆ ಹಲವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು. ದಾನಿಗಳ ಅಭಿಪ್ರಾಯ ಸಂಗ್ರಹಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಫತೇನ್‌ ಮಿಸ್ಬಾ ಟ್ವೀಟ್‌ ಮಾಡಿದ್ದಾರೆ.

ಇನ್ಫೊಸಿಸ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಇವರು, ಗ್ರಂಥಾಲಯ ಸುಟ್ಟು ಹೋದ ದಿನವೇ ‘ಕೆಟ್ಟೊ’ ವೆಬ್‌ ತಾಣದಲ್ಲಿ ಕ್ರೌಡ್‌ ಫಂಡಿಂಗ್‌ ಆರಂಭಿಸಿದ್ದರು. 1,800ಕ್ಕೂ ಅಧಿಕ ಮಂದಿ ಉದಾರವಾಗಿ ದೇಣಿಗೆ ನೀಡಿದ್ದರು. ಕೆಲವೇ ದಿನಗಳಲ್ಲಿ ₹ 29 ಲಕ್ಷ ಸಂಗ್ರಹವಾಗಿತ್ತು.

ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಂಥಾಲಯ ಇಲಾಖೆಯು ಮೇಯರ್ ನೇತೃತ್ವದ ಗ್ರಂಥಾಲಯ ಸಮಿತಿಗೆ ಗ್ರಂಥಾಲಯ ಮರು ನಿರ್ಮಿಸುವ ಹೊಣೆ ನೀಡಿದ್ದವು. ಜತೆಗೆ, ಪ್ರತ್ಯೇಕ ಬ್ಯಾಂಕ್‌ ಖಾತೆ ಸಂಖ್ಯೆ ನೀಡಿ, ‘ದಾನಿಗಳು ಇಲ್ಲಿಗೆ ಮಾತ್ರ ದೇಣಿಗೆ ನೀಡಬೇಕು. ಬೇರೆ ಯಾವುದೇ ವ್ಯಕ್ತಿಗೆ, ಸಂಘ ಸಂಸ್ಥೆಗಳಿಗೆ ಈ ಸಂಬಂಧ ದೇಣಿಗೆ ನೀಡಬಾರದು’ ಎಂದೂ ಸೂಚಿಸಲಾಗಿತ್ತು.

ಇದು ದಾನಿಗಳ ಕೋಪಕ್ಕೆ ಕಾರಣವಾಗಿತ್ತು. ‘ಸಾರ್ವಜನಿಕರ ಹಣದಲ್ಲಿ ಗ್ರಂಥಾಲಯ ನಿರ್ಮಿಸುವ ಮೂಲಕ ಎಲ್ಲ ಶ್ರೇಯವನ್ನು ಸರ್ಕಾರ ಪಡೆಯಲು ಹವಣಿಸುತ್ತಿದೆ’ ಎಂಬ ಆರೋಪವೂ ವ್ಯಕ್ತವಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಫತೇನ್‌ ಮಿಸ್ಬಾ, ‘ಆರಂಭದಲ್ಲಿ ಸರ್ಕಾರವು ಗ್ರಂಥಾಲಯ ನಿರ್ಮಿಸಲು ಮುಂದಾಗಿರಲಿಲ್ಲ. ಹೀಗಾಗಿ, ಕ್ರೌಡ್‌ ಫಂಡಿಂಗ್ ಅಭಿಯಾನ ನಡೆಸಲಾಯಿತು. ಈಗ ದಾನಿಗಳ ಅಭಿಪ್ರಾಯ ಪಡೆದು ಅದರಂತೆ ನಡೆದುಕೊಂಡಿದ್ದೇನೆ’ ಎಂದರು.

ಬೇರೆ ಉದ್ದೇಶ ಇಲ್ಲ: ‘ನನ್ನ ಉದ್ದೇಶ ಕನ್ನಡ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಮಾತ್ರ. ಬೇರೆ ಯಾವುದೇ ಉದ್ದೇಶ ಇಲ್ಲ. ಸಾರ್ವಜನಿಕರ ಅಭಿಪ್ರಾಯಕ್ಕೆ ಗೌರವ ಕೊಡುತ್ತೇನೆ’ ಎಂದು ಸೈಯದ್ ಇಸಾಕ್ ಪ‍್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT