ಗುರುವಾರ , ಜನವರಿ 21, 2021
30 °C
ಕೋವಿಡ್‌ನಿಂದ ಮೃತಪಟ್ಟ ಪಾಲಿಕೆಯ ಐವರು ಪೌರಕಾರ್ಮಿಕರು–ಅನುಕಂಪದ ನೌಕರಿಗೆ ಮನವಿ

ಕುಟುಂಬಗಳಿಗೆ ತಲಾ ₹30 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಕೋವಿಡ್‌ ವಾರಿಯರ್‌ ಗಳಾಗಿ ಕಾರ್ಯನಿರ್ವ ಹಿಸುತ್ತಿದ್ದ ಐವರು ಪೌರಕಾರ್ಮಿಕರು ಕೋವಿಡ್‌ 19ನಿಂದ ಮೃತರಾಗಿದ್ದು, ಇವರಲ್ಲಿ ಇಬ್ಬರು ಗುತ್ತಿಗೆ ಪೌರಕಾರ್ಮಿಕರ ಕುಟುಂಬಕ್ಕೆ ಪಾಲಿಕೆ ವತಿಯಿಂದ ಸೋಮವಾರ ತಲಾ ₹ 30 ಲಕ್ಷ ಪರಿಹಾರ ವಿತರಿಸಲಾಯಿತು.

ಪಾಲಿಕೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್‌ ತಸ್ನೀಂ ಹಾಗೂ ಆಯುಕ್ತ ಗುರುದತ್ತ ಹೆಗಡೆ ಚೆಕ್ ಹಸ್ತಾಂತರಿಸಿದರು. 

ಹೊರಗುತ್ತಿಗೆ ಪೌರಕಾರ್ಮಿಕರಾದ ಓಬಮ್ಮ ಹಾಗೂ ಶಶಿಕುಮಾರ್‌ ಅವರು ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಸೋಂಕು ತಗುಲಿ ಮೃತಪಟ್ಟಿದ್ದರು.

‘ಪಾಲಿಕೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ವಿವಿಧ ವಿಭಾಗಗಳ ಒಟ್ಟು 121 ನೌಕರರಿಗೆ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಕಾಯಂ ನೌಕರರಾದ ಮಹದೇವ, ಎಸ್‌.ಜೆ.ಕೃಷ್ಣಮ್ಮ, ವಿ.ಬನ್ನಾರಿ ಇನ್ನುಳಿದ ಮೂವರು. ಇವರ ಕುಟುಂಬಕ್ಕೆ ಸದ್ಯದಲ್ಲೇ ಪರಿಹಾರ ವಿತರಿಸಲಾಗುವುದು’ ಎಂದು ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.

‘ಇದಕ್ಕೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆಯಾಗಲಿದೆ. ಸದ್ಯಕ್ಕೆ ಪಾಲಿಕೆಯಿಂದಲೇ ಆ ಹಣ ಭರಿಸಿದ್ದೇವೆ’ ಎಂದರು.

ಅನುಕಂಪದ ನೌಕರಿಗೆ ಆಗ್ರಹ: ಅನುಕಂಪದ ಆಧಾರದ ಮೇಲೆ ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡಬೇಕೆಂದು ಮೃತ ಪೌರಕಾರ್ಮಿಕರ ಸಂಬಂಧಿಕರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಈ ವಿಚಾರವಾಗಿ ಪರಿಶೀಲನೆ ನಡೆಸುವುದಾಗಿ ಆಯುಕ್ತರು ಹೇಳಿದರು.

ತುಂಬಾ ಹೊತ್ತು ಕಾದರು: ಪರಿಹಾರ ವಿತರಣೆ ಕಾರ್ಯಕ್ರಮ ಬೆಳಿಗ್ಗೆ 11.30ಕ್ಕೆ ನಿಗದಿಯಾಗಿತ್ತು. ಪರಿಹಾರ ಪಡೆಯಲು ಕುಟುಂಬದವರು 11 ಗಂಟೆಗೆ ಬಂದಿದ್ದರು. ಆದರೆ, ಶಿಷ್ಟಾಚಾರ ವಿಚಾರವಾಗಿ ಮೇಯರ್‌ ಹಾಗೂ ಅಧಿಕಾರಿಗಳ ತಿಕ್ಕಾಟದಿಂದ ಸುಮಾರು ಒಂದೂವರೆ ಗಂಟೆ ಕಾಯಬೇಕಾಯಿತು.

ಉಪ ಮೇಯರ್‌ ಶ್ರೀಧರ್‌, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ ಇದ್ದರು.

‘ಮಕ್ಕಳ ಶಿಕ್ಷಣಕ್ಕೆ ಬಳಸುತ್ತೇವೆ’

ಪರಿಹಾರ ರೂಪದಲ್ಲಿ ಬಂದಿರುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿ ಸುತ್ತೇವೆ ಎಂದು ಓಬಮ್ಮ, ಶಶಿಕುಮಾರ್‌ ಕುಟುಂಬದವರು ತಿಳಿಸಿದರು.

ಕೋವಿಡ್‌ನಿಂದ ಜುಲೈನಲ್ಲಿ ಮೃತರಾದ ಶಶಿಕುಮಾರ್‌ (40), ಕಸ ಸಾಗಿಸುವ ವಾಹನ ಚಾಲಕರಾಗಿದ್ದರು. ಪರಿಹಾರ ಮೊತ್ತ ಪಡೆಯಲು ಅವರ ಪತ್ನಿ ಲಕ್ಷ್ಮೀದೇವಿ ಬಂದಿದ್ದರು. ಇಬ್ಬರಿಬ್ಬರ ಪುಟ್ಟ ಮಕ್ಕಳು ಹಾಗೂ ಶಶಿಕುಮಾರ್ ತಂದೆ ನಾಗರಾಜು ಇದ್ದರು.

‘ಪರಿಹಾರದ ಮೊತ್ತವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುತ್ತೇನೆ. ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿ ಎಂದು ಕೇಳಿದ್ದೇನೆ’ ಎಂದು ಲಕ್ಷ್ಮೀದೇವಿ ಹೇಳಿದರು.

ಸೋಂಕಿನಿಂದ ಆಗಸ್ಟ್‌ನಲ್ಲಿ ಮೃತರಾದ ಓಬಮ್ಮ (53) ಅವರು 14 ವರ್ಷಗಳಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಪರಿಹಾರ ಮೊತ್ತ ಪಡೆಯಲು ಅವರ ಪತಿ ಲಕ್ಷ್ಮಣ, ಮಗಳು ಲಕ್ಷ್ಮಿ, ಪುತ್ರ ಮಹೇಶ್‌ ಬಂದಿದ್ದರು.

‘ಕಷ್ಟಕಾಲದಲ್ಲಿ ಹಣ ಸಿಕ್ಕಿದ್ದು ಸಮಾಧಾನ ತಂದಿದೆ. ಈ ಹಣವನ್ನು ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತೇನೆ’ ಎಂದು ಮಂಡಿ ಮೊಹಲ್ಲಾ ನಿವಾಸಿ ಲಕ್ಷ್ಮಣ್‌ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು