ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

637 ಜನರು ಗುಣಮುಖ: 12 ಸಾವು

ಜಿಲ್ಲೆಯಲ್ಲಿ 522 ಮಂದಿಗೆ ಕೋವಿಡ್ ದೃಢ: 9 ಸಾವಿರದ ಸನಿಹಕ್ಕೆ ಸೋಂಕಿತರ ಸಂಖ್ಯೆ
Last Updated 14 ಆಗಸ್ಟ್ 2020, 4:30 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌–19ನಿಂದ ಗುಣಮುಖರಾದವರ ಸಂಖ್ಯೆ ಸೋಂಕಿತರಿಗಿಂತ ಹೆಚ್ಚಿದ್ದು, ಗುರುವಾರ ಜಿಲ್ಲೆಯಲ್ಲಿನ ಆಶಾದಾಯಕ ಬೆಳವಣಿಗೆಯಾಗಿದೆ.

637 ಜನರು ಸೋಂಕಿನಿಂದ ಗುಣಮುಖರಾದರೆ, ಹೊಸದಾಗಿ 522 ಮಂದಿ ಪೀಡಿತರಾಗಿದ್ದಾರೆ. ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯೇ ನೂರಕ್ಕೂ ಹೆಚ್ಚಿದೆ. ಸೋಂಕಿತರ ಸಂಖ್ಯೆ ಒಂಬತ್ತು ಸಾವಿರದ ಗಡಿ ಸನಿಹ ಬಂದರೇ, ಗುಣಮುಖರಾದವರ ಸಂಖ್ಯೆಯೂ 5 ಸಾವಿರದ ಗಡಿ ದಾಟಿದೆ. ಸಕ್ರಿಯ ಪ್ರಕರಣಗಳು ಕೊಂಚ ಇಳಿಕೆಯಾಗಿವೆ.

ಜಿಲ್ಲಾಡಳಿತ ಗುರುವಾರ 12 ಜನರ ಸಾವನ್ನು ದೃಢಪಡಿಸಿದೆ. ಇವರೆಲ್ಲರೂ ಬೇರೆ ಬೇರೆ ದಿನ ಮೃತಪಟ್ಟವರು. 10 ಪುರುಷರಿದ್ದರೆ, ಇಬ್ಬರು ಮಹಿಳೆಯರು. ಈ ಎಲ್ಲರೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ವಿವಿಧ ಅನಾರೋಗ್ಯಕ್ಕೀಡಾಗಿದ್ದವರು ಎಂಬುದನ್ನು ಆರೋಗ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್‌ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ದಿನವೇ ಇಬ್ಬರು ಮೃತಪಟ್ಟಿದ್ದಾರೆ. ದಾಖಲಾದ ಮರು ದಿನವೂ ಇಬ್ಬರು ಅಸುನೀಗಿದ್ದಾರೆ. ಮೂವರು ಮೂರನೇ ದಿನ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಉಳಿದವರು 6, 7, 8, 13 ದಿನ ಚಿಕಿತ್ಸೆ ಪಡೆದರೂ, ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಮೃತರ ಸಂಖ್ಯೆ 274ಕ್ಕೆ ತಲುಪಿದೆ.

ಗುರುವಾರ ಘೋಷಣೆಯಾದ ಮೃತಪಟ್ಟ 12 ಜನರಲ್ಲಿ ಒಬ್ಬರು 24 ವರ್ಷದವರು. ಮತ್ತೊಬ್ಬರು 34 ವರ್ಷದವರು. 57, 58, 59, 60 ವರ್ಷದವರು ಇದ್ದಾರೆ. 65 ವರ್ಷದವರು ಒಬ್ಬರು, 70 ವರ್ಷದವರು ಮೂವರು, 75 ವರ್ಷದವರು ಒಬ್ಬರಿದ್ದಾರೆ.

ಸೋಂಕಿತರಾದ 522 ಜನರಲ್ಲಿ 264 ಮಂದಿ ಪೀಡಿತರ ಸಂಪರ್ಕಿತರು. ಶೀತ ಜ್ವರದ (ಐಎಲ್‌ಐ) ಲಕ್ಷಣಗಳಿಂದ 69 ಜನರು ಬಳಲುತ್ತಿದ್ದಾರೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದ ಹಾಗೂ ಪ್ರವಾಸ ನಡೆಸಿರುವ 179 ಮಂದಿಯಲ್ಲೂ ಸೋಂಕು ಪತ್ತೆಯಾಗಿದೆ. 10 ಜನರಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ 8,989ಕ್ಕೆ ಏರಿದ್ದು, 3,297 ಜನರು ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 211 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರೆ, 787 ಜನರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಆರೈಕೆಯಲ್ಲಿದ್ದಾರೆ. 88 ಮಂದಿ ಹೆಲ್ತ್‌ ಕೇರ್‌ ಸೆಂಟರ್‌ಗೆ ದಾಖಲಾಗಿದ್ದಾರೆ.

ಮನೆಯಲ್ಲೇ 1,970 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ನಿವಾಸಗಳಲ್ಲೇ ಐಸೊಲೇಷನ್‌ ಆಗುವವರ ಸಂಖ್ಯೆಯಲ್ಲೂ ಕೊಂಚ ತಗ್ಗಿದೆ. 155 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, 86 ಜನರು ಖಾಸಗಿ ಕೋವಿಡ್ ಕೇರ್ ಸೆಂಟರ್‌ಗೆ ಆರೈಕೆಗಾಗಿ ದಾಖಲಾಗಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಆ್ಯಂಟಿಜನ್ ರ‍್ಯಾಪಿಡ್‌ ಟೆಸ್ಟ್ ಇಂದು

ಹೆಬ್ಬಾಳದ ಸಿಐಟಿಬಿ ಕಲ್ಯಾಣ ಮಂಟಪದ ಆವರಣದಲ್ಲಿ ಆಗಸ್ಟ್ 14ರ ಶುಕ್ರವಾರ ಬೆಳಿಗ್ಗೆ 10.30ರಿಂದ ಕೋವಿಡ್-19 ಆ್ಯಂಟಿಜನ್ ರ‍್ಯಾಪಿಡ್‌ ತಪಾಸಣಾ ಶಿಬಿರವನ್ನು ಮೈಸೂರು ಮಹಾನಗರ ಪಾಲಿಕೆ ಆಯೋಜಿಸಿದೆ.

ಈ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ವೈರಸ್‌ ಸೋಂಕು ತಗುಲಿರಬಹುದಾದ ಶಂಕಿತರು ಭಾಗವಹಿಸಿ, ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT