ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

89 ಗಂಟೆ; 3,700 ಕಿ.ಮೀ ರೈಡಿಂಗ್!

ಕಾಶ್ಮೀರದಿಂದ ಕನ್ಯಾಕುಮಾರಿಗೆ ಮೈಸೂರು ಯುವಕರ ಬೈಕ್‌ ಯಾತ್ರೆ
Last Updated 8 ಆಗಸ್ಟ್ 2021, 4:11 IST
ಅಕ್ಷರ ಗಾತ್ರ

ಮೈಸೂರು: ದಾಖಲೆ ನಿರ್ಮಿಸಲು ಏನೆಲ್ಲಾ ಮಾಡಬಹುದು? ಮೈಸೂರಿನ ಸಾಹಸಿಗಳಾದ ಚೈತನ್ಯ ಮತ್ತು ಸಾಗರ್‌ ಅವಿನಾ ಅವರಿಗಿದ್ದಿದ್ದು ಒಂದೇ ಆಸೆ. ‘ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್ಸ್‌’ನಲ್ಲಿ ತಮ್ಮ ಹೆಸರು ದಾಖಲಾಗಬೇಕು!

ಸರಿ, ಇಬ್ಬರೂ ಕಾಶ್ಮೀರದಿಂದ ಕನ್ಯಾಕುಮಾರಿಗೆ ಬೈಕ್‌ ರೈಡ್ ಹೊರಟೇಬಿಟ್ಟರು. 3,700 ಕಿ.ಮೀ ದೂರವನ್ನು ಬೈಕ್‌ನಲ್ಲಿ ಕೇವಲ ಮೂರು ದಿನ 17 ಗಂಟೆಗಳಲ್ಲಿ (ಒಟ್ಟು 89 ಗಂಟೆ) ತಲುಪಿ ಗೆಲುವಿನ ನಗೆ ನಕ್ಕರು! ಅದೇನೂ ಸುಲಭವಾಗಿರಲಿಲ್ಲ. ಏಕೆಂದರೆ ಮಳೆ, ಗಾಳಿಯ ಜೊತೆಗೆ ಟ್ರಾಫಿಕ್‌ ಜಾಮ್‌ ಕೂಡ ಎದುರಾಗಿತ್ತು.

ನಗರದ ವಿದ್ಯಾ ವಿಕಾಸ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ಚೈತನ್ಯ ಹಾಗೂ ಹಿಂದಿನ ವರ್ಷವಷ್ಟೇ ಪದವಿ ಶಿಕ್ಷಣವನ್ನು ಪೂರೈಸಿರುವ ಹೂಟಗಳ್ಳಿಯ ಸಾಗರ್‌ ಜುಲೈ 11ರ ರಾತ್ರಿ 9 ಗಂಟೆಗೆ ಕಾಶ್ಮೀರದ ಶ್ರೀನಗರದಿಂದ ಪ್ರಯಾಣ ಆರಂಭಿಸಿದ್ದರು. ಜು.15ರ ಮಧ್ಯಾಹ್ನ 2ರ ವೇಳೆಗೆ ಕನ್ಯಾಕುಮಾರಿ ತಲುಪಿದ್ದರು.

‘ಪ್ರತಿಕೂಲ ಹವಾಮಾನದ ನಡುವೆಯೂ ಪ್ರಯಾಣ ಮಾಡಿ ಕನ್ಯಾಕುಮಾರಿ ತಲುಪಿದೆವು. ಮನಾಲಿ, ಸರಚು ಕ್ರಾಸಿಂಗ್‌, ಅಟಲ್‌ ಟನೆಲ್‌ ಮೂಲಕ ಸವಾರಿ ವಿಶೇಷ ಅನುಭವ ನೀಡಿತು. ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಮೈಕೊರೆಯುವ ಚಳಿಯ ಸವಾಲು ಎದುರಿಸಿದೆವು’ ಎಂದು ಚೈತನ್ಯ ಅನುಭವವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಉತ್ತರಾಖಂಡ ರಾಜ್ಯದ ಪ್ರಯಾಣವೂ ಸವಾಲಿನಿಂದ ಕೂಡಿತ್ತು. ಅಲ್ಲಿ ಭಾರಿ ಮಳೆಯಾಗುತ್ತಿತ್ತು. ಸುಮಾರು ಆರು ಗಂಟೆ ಮಳೆಯಲ್ಲೇ ಪ್ರಯಾಣಿಸಿದೆವು. ಅಲ್ಲಿ ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಮಾತ್ರ ಸಂಚರಿಸಲು ಸಾಧ್ಯವಾಗಿತ್ತು. ಉತ್ತರ ಪ್ರದೇಶದಲ್ಲೂ ಮಳೆಯ ಅಬ್ಬರವೂ ಇತ್ತು’ ಎಂದರು.

‘ಹೆದ್ದಾರಿಗಳಲ್ಲಿ ಗಂಟೆಗೆ 100 ರಿಂದ 120 ಕಿ.ಮೀ ವೇಗದಲ್ಲಿ ಬೈಕ್ ಓಡಿಸುತ್ತಿದ್ದೆವು. ಬಹುತೇಕ ಕಡೆ ಅದೇ ವೇಗವನ್ನು ಕಾಯ್ದುಕೊಂಡಿದ್ದೆವು. ಆದರೆ ಜಮ್ಮುವಿನಲ್ಲಿ ಸುಮಾರು 2 ಗಂಟೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದು ಮತ್ತು ಉತ್ತರಾಖಂಡದಲ್ಲಿ ಎದುರಾದ ಮಳೆ ನಮ್ಮ ಪ್ರಯಾಣವನ್ನು ಅಲ್ಪ ತಡವಾಗಿಸಿತು’ ಎಂದು ನುಡಿದರು.

‘ಲಡಾಖ್‌ನಲ್ಲಿ ಹಳ್ಳವೊಂದನ್ನು ದಾಟುವ ಸಮಯದಲ್ಲಿ ಸುಟ್ಟುಹೋದ ಕ್ಲಚ್‌ ಪ್ಲೇಟ್‌ ಬದಲಿಸಿ ಪ್ರಯಾಣ ಮುಂದುವರಿಸಿದೆವು. ಆಗ್ರಾದಲ್ಲಿದ್ದಾಗ ಹಿಂಬದಿ ಚಕ್ರದ ಬ್ರೇಕ್‌ ಪ್ಯಾಡ್‌ನಲ್ಲಿ ತೊಂದರೆ ಕಾಣಿಸಿಕೊಂಡಿತು. ಆ ಬಳಿಕ ಕನ್ಯಾಕುಮಾರಿ ತಲುಪುವವರೆಗೂ ಸಮಸ್ಯೆಯಾಗಲಿಲ್ಲ’ ಎಂದು ಸ್ಮರಿಸಿದರು.

‘ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಅರ್ಜಿ ಹಾಕಿ, ಅವರ ಒಪ್ಪಿಗೆ ದೊರೆತ ಬಳಿಕ ಪ್ರಯಾಣ ಶುರು ಮಾಡಿ
ದ್ದೆವು. ನಮ್ಮ ಈ ಸಾಧನೆಯನ್ನು ಅವರು ಪರಿಗಣಿಸಿದ್ದು, ಶೀಘ್ರದಲ್ಲೇ ಪ್ರಮಾಣಪತ್ರ ದೊರೆಯಲಿದೆ’ ಎಂದರು.

ಮುಂದಿನ ಬಾರಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆಯುವ ಗುರಿಯನ್ನು ಇಬ್ಬರೂ ಇಟ್ಟುಕೊಂಡಿದ್ದಾರೆ.

‌‘ಕಡಿಮೆ ನಿದ್ದೆ’: ಸುದೀರ್ಘ ಪ್ರಯಾಣದ ವೇಳೆ ಇಬ್ಬರು ನಿದ್ದೆ ಮಾಡಿದ್ದೇ ಕಡಿಮೆ. ಪ್ರತಿದಿನ ಸರಾಸರಿ 900 ಕಿ.ಮೀ. ಕ್ರಮಿಸುವ ಗುರಿಯೊಂದಿಗೆ ಆರಂಭವಾದ ರೈಡ್‌ ಅದು. ಬೆಳಗಿನ ಜಾವ 3ರ ವರೆಗೂ ಪಯಾಣ ಮಾಡುತ್ತಿದ್ದರು.

‘ನಿಗದಿತ ದೂರವನ್ನು ಕಡಿಮೆ ಅವಧಿಯಲ್ಲಿ ಕ್ರಮಿಸಿ ದಾಖಲೆ ಮಾಡು ವುದೇ ಗುರಿಯಾಗಿತ್ತು. ನಿದ್ದೆಗೆ ಹೆಚ್ಚಿನ ಸಮಯ ಮೀಸಲಿಡಲಿಲ್ಲ. ಬೆಳಗಿನ ಜಾವ 3ರಿಂದ 6ರ ವರೆಗೆ ಎಲ್ಲಾದರೂ ಢಾಬಾದಲ್ಲಿ ನಿದ್ರಿಸಿ ಮತ್ತೆ ಪ್ರಯಾಣ ಮುಂದುವರಿಸುತ್ತಿದ್ದೆವು. ಪೆಟ್ರೋಲ್‌ ಬಂಕ್‌ನಲ್ಲೇ ಟೆಂಟ್‌ ಹಾಕಿ ಒಂದಷ್ಟು ಹೊತ್ತು ವಿಶ್ರಾಂತಿ ಪಡೆಯುತ್ತಿದ್ದೆವು’ ಎಂದು ಚೈತನ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT