ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಂಠೇಶ್ವರ ದೇಗುಲ ಆಸ್ತಿ ರಕ್ಷಣೆಗೆ ಕ್ರಮ

ಮುಜರಾಯಿ ಇಲಾಖೆ ಜಂಟಿ ನಿರ್ದೇಶಕ ಜಯಪ್ರಕಾಶ್ ಹೇಳಿಕೆ
Last Updated 12 ನವೆಂಬರ್ 2020, 6:28 IST
ಅಕ್ಷರ ಗಾತ್ರ

ನಂಜನಗೂಡು: ‘ನಗರದ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಆಸ್ತಿಗಳು ಮೈಸೂರು ಜಿಲ್ಲೆಯ ಹಲವು ಭಾಗಗಳಲ್ಲಿದ್ದು, ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಹಾಗೂ ಜಿಲ್ಲಾಧಿಕಾರಿಯೊಡನೆ ಪತ್ರ ವ್ಯವಹಾರ ನಡೆಸಿ ಆಸ್ತಿ ನಿಖರ ದಾಖಲೆಗಳನ್ನು ಸಿದ್ಧಪಡಿಸುವಂತೆ’ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಯ್ಯಗೆ ಮುಜರಾಯಿ ಇಲಾಖೆ ಜಂಟಿ ಆಯುಕ್ತ ಜಯಪ್ರಕಾಶ್ ಸೂಚನೆ ನೀಡಿದರು.

ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಕಂದಾಯ ಇಲಾಖೆ, ನಗರಸಭೆ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳೊಡನೆ ಬುಧವಾರ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಆಸ್ತಿ ರಕ್ಷಣೆ ವಿಚಾರವಾಗಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಮೈಸೂರಿನ ನಜರ್‌ಬಾದ್ ದೇವಾಲಯ ಸೇರಿದಂತೆ ಜಿಲ್ಲೆಯ ಹಲವು ಭಾಗಗಳ 10 ಸರ್ವೆ ನಂಬರ್‌ಗಳಲ್ಲಿ ದೇವಾಲಯದ ಆಸ್ತಿಗಳು ಇರುವ ಬಗ್ಗೆ ಮಾಹಿತಿ ಇದೆ. ಇಒ ಅವರು ದೇವಾಲಯದಿಂದ ವಿವಿಧ ಇಲಾಖೆಗಳೊಂದಿಗೆ ಈ ಹಿಂದೆ ನಡೆಸಿರುವ ಪತ್ರ ವ್ಯವಹಾರ, ಆಸ್ತಿ ದಾಖಲೆ ಪತ್ರ ಹಾಗೂ ಕಂದಾಯ, ನಗರಾಭಿವೃದ್ದಿ ಇಲಾಖೆಗಳ ದಾಖಲೆಗಳನ್ನು ಕ್ರೋಡೀಕರಿಸಿಕೊಂಡು ಮುಂದಿನ ಸಭೆಯಲ್ಲಿ ನಿಖರ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

‘ದೇವಾಲಯದ ಸ್ಥಿರಾಸ್ತಿಗಳು, ಜಮೀನುಗಳನ್ನು ಸರ್ವೆ ಮಾಡಿಸಿ ಪೌರಾಯುಕ್ತರು, ಭೂದಾಖಲೆಗಳ ಇಲಾಖೆಯ ದೃಢೀಕರಣದೊಂದಿಗೆ ದಾಖಲೆಗಳನ್ನು ಶ್ರೀಘ್ರವಾಗಿ ಮುಜರಾಯಿ ಇಲಾಖೆ ಕಚೇರಿಗೆ ಸಲ್ಲಿಸಬೇಕು. ತಹಶೀಲ್ದಾರ್ ಅವರು ದೇವಾಲಯದ ಸಂರಕ್ಷಿತ ಪ್ರದೇಶದಲ್ಲಿ ಒತ್ತುವರಿಯನ್ನು ತೆರವುಗೊಳಿಸಲು ಕ್ರಮವಹಿಸಬೇಕು’ ಎಂದು ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ‘ದೇವಾಲಯಕ್ಕೆ ಸಂಬಂಧಪಟ್ಟ ಆಸ್ತಿಗಳನ್ನು ಖಾಸಗಿಯವರು ಅನುಭವಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿವೆ. ದೇವಾಲಯದ ಸಂರಕ್ಷಿತ ಪ್ರದೇಶದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮವಹಿಸುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರೊಡನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮನವಿ ಸಲ್ಲಿಸಿದ್ದೆ, ಇಲಾಖೆಯ ಜಂಟಿ ಆಯುಕ್ತರ ಜಯ ಪ್ರಕಾಶ್ ಆಸ್ತಿಗಳಿಗೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನು ಪರಿಶೀಲಿಸಿ ಕ್ರಮವಹಿಸುವ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ದೇವಸ್ಥಾನದ ಆಸ್ತಿ ನಕಲಿ ದಾಖಲೆ ಸೃಷ್ಟಿ: ‘ದೇವಾಲಯದ ಹಿಂಭಾಗದ ವೀರಭದ್ರೇಶ್ವರಸ್ವಾಮಿ ದೇವಾಲಯ ಸ್ಮಾರಕವನ್ನು ವ್ಯಕ್ತಿಯೊಬ್ಬರು ₹ 38 ಲಕ್ಷಕ್ಕೆ ಮಾರಾಟ ಮಾಡಿದ್ದರು, ದೇವಾಲಯ ವಶಪಡಿಸಿಕೊಂಡ ಮೇಲೆ ಖರೀದಿಸಿದವರು ಪರಿಹಾರ ನೀಡುವಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ’ ಎಂದುಹಿರಿಯ ವಕೀಲ ಶ್ರೀಕಂಠಪ್ರಸಾದ್ ಹೇಳಿದರು.

‘ವಾಸ್ತವವಾಗಿ ತೆರಕಣಾಂಬಿ ಬಳಿಯ ಸೋಮಳ್ಳಿಯ ಭಕ್ತರೊಬ್ಬರು ಜಮೀನು ಸೇರಿದಂತೆ ವೀರಭದ್ರೇಶ್ವರ ಸ್ವಾಮಿ ದೇವಾಲಯವನ್ನು ನಿರ್ಮಿಸಿ, ಶ್ರೀಕಂಠೇಶ್ವರ ದೇವಾಲಯಕ್ಕೆ ದಾನ ಕೊಟ್ಟಿದ್ದ ಬಗ್ಗೆ ಮೈಸೂರು ಗೆಜೆಟಿಯರ್‌ನ ದಾಖಲೆಗಳಿವೆ. ದೇವಾಲಯದ ಆಸ್ತಿಗಳ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿಕೊಂಡು ಹಲವರ ಕೈ ಬದಲಾವಣೆಯಾಗಿ ಖಾಸಗಿಯವರು ಅನುಭವಿಸುತ್ತಿದ್ದಾರೆ’ ಎಂದು ತಿಳಿಸಿದರು.

ಸಭೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಇಂಧನ್ ಬಾಬು, ಸದಸ್ಯರಾದ ಗಿರೀಶ್, ಶ್ರೀಧರ್, ಶಿವನಂಜು, ಶಶಿರೇಖಾ, ಮಂಜುಳಾ ಮಧು, ದೇವಾಲಯದ ಇಒ ಶಿವಕುಮಾರಯ್ಯ, ನಗರಸಭೆ ಆಯುಕ್ತ ಕರಿಬಸವಯ್ಯ, ಭೂದಾಖಲೆಗಳ ಉಪನಿರ್ದೇಶಕಿ ಸಿಮಂತಿನಿ, ಕಂದಾಯ ಅಧಿಕಾರಿ ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT