ಬುಧವಾರ, ಅಕ್ಟೋಬರ್ 28, 2020
23 °C
ನಿರ್ಲಕ್ಷಿತ ಕಲಾವಿದರ ನೆರವಿಗೆ ಪ್ರಾಧಿಕಾರ ರಚಿಸಲು ಆಗ್ರಹ

ರತ್ನಾಕರ ನೆನಪಿನಲ್ಲಿ ಭಾವಪರವಶವಾದ ಗಣ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ಹಾಸ್ಯನಟ ರತ್ನಾಕರ್ ಅಭಿಮಾನಿಗಳ ಬಳಗದ ವತಿಯಿಂದ ನಡೆದ ‘ಹಾಸ್ಯನಟ ರತ್ನಾಕರ್ ಅವರ 10ನೇ ವರ್ಷದ ನೆನಪಿನ ಕಾರ್ಯಕ್ರಮ’ದಲ್ಲಿ ಅವರ ಕುಟುಂಬದ ಸದಸ್ಯರು ಭಾವಪರವಶರಾದರು.

ರತ್ನಾಕರ ಪುತ್ರ ರಾಘವೇಂದ್ರ ಪ್ರಾರ್ಥನೆ ಮಾಡಿದರೆ, ಇವರ ಪತ್ನಿ ಡಾ.ಪ್ರೀತಂ, ‘ರತ್ನಾಕರ ಅವರ ಕುಟುಂಬದ ಸದಸ್ಯೆಯಾಗಿರುವುದು ಹೆಮ್ಮೆ ಎನಿಸಿದೆ. ಅವರು ನನಗೆ ಕೊಟ್ಟ ದೊಡ್ಡ ಆಸ್ತಿ ಅವರ ಪುತ್ರ ರಾಘವೇಂದ್ರ’ ಎಂದು ಭಾವುಕರಾದರು.

ಇದಕ್ಕೂ ಮುನ್ನ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು, ‘ನಿರ್ಲಕ್ಷಿತ ಕಲಾವಿದರ ನೆರವಿಗೆ ಸರ್ಕಾರ ಮುಂದಾಗಬೇಕು. ಪ್ರಾಧಿಕಾರದ ಸ್ವರೂಪದಲ್ಲಿ ಏನಾದರೂ ಸಹಾಯ ಮಾಡಬೇಕು’ ಎಂದು ಒತ್ತಾಯಿಸಿದರು.

ರತ್ನಾಕರ್ ಅವರು ಕೇವಲ ಹಾಸ್ಯನಟ ಎಂದು ಬಹಳಷ್ಟು ಮಂದಿ ತಿಳಿದಿದ್ದಾರೆ. ಆದರೆ, ಅವರು 3 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಡಾ.ರಾಜ್‌ಕುಮಾರ್ ಅಭಿಯನದ ‘ಭಾಗ್ಯದೇವತೆ’ ಸಿನಿಮಾ ಇದರಲ್ಲಿ ಸೇರಿದೆ’ ಎಂದು ಹೇಳಿರು.

ಖ್ಯಾತ ನಟಿ ಜಯಂತಿ ಸೇರಿದಂತೆ ಹೊರರಾಜ್ಯದ ಕನ್ನಡ ಬಾರದ ಕಲಾವಿದರಿಗೆ ಕನ್ನಡ ಕಲಿಸಿದವರು ರತ್ನಾಕರ್. ಹಾಸ್ಯನಟನೆಗೂ ಮೀರಿದ ಕೊಡುಗೆಯನ್ನು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

‌ಇಂತಹ ನಟನನ್ನು ಸರ್ಕಾರ, ಚಲನಚಿತ್ರ ಪ್ರಾಧಿಕಾರ, ಚಲನಚಿತ್ರ ವಾಣಿಜ್ಯ ಮಂಡಳಿಗಳು ನಿರ್ಲಕ್ಷ್ಯ ವಹಿಸಿವೆ. ರತ್ನಾಕರ ಅವರು ದೊಡ್ಡ ಆಸ್ತಿ ಮಾಡಲಿಲ್ಲ. ಇವರ ಕುಟುಂಬದ ಸದಸ್ಯರು ಹೇಗಿದ್ದಾರೆ ಎಂದು ವಿಚಾರಿಸುವ ಸೌಜನ್ಯವನ್ನೂ ತೋರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಬಬ್ರುವಾಹನ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಕಾಂಚನಾ ಇಂದಿಗೂ ಬೆಂಗಳೂರಿನ ದೇವಾಲಯವೊಂದರಲ್ಲಿ ಕಸ ಗುಡಿಸುತ್ತಿದ್ದಾರೆ. ಅನೇಕ ಹಿರಿಯ ಕಲಾವಿದರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇವರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಕುಪ್ಯಾ ವೆಂಕಟರಾಮು ಗೀತೆಯೊಂದನ್ನು ಹಾಡಿದರು. ರತ್ನಾಕರ್ ಅವರು ಬರೆದ ಸಿನಿಮಾ ಗೀತೆಗಳನ್ನು ಕೇಳಿಸಲಾಯಿತು.

ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಮುಖಂಡರಾದ ಮಡ್ಡಿಕೆರೆ ಗೋಪಾಲ್, ಗೋಪಾಲರಾವ್, ಎಸ್.ರಾಮಪ್ರಸಾದ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು