ಮಂಗಳವಾರ, ಆಗಸ್ಟ್ 9, 2022
20 °C

17 ಜನರ ತ್ಯಾಗದಿಂದಲೇ ಈಶ್ವರಪ್ಪ ಸಚಿವರಾಗಿದ್ದು: ಬಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬಿಜೆಪಿಗೆ ಹೊರಗಿನಿಂದ ಬಂದ 17 ಮಂದಿಯ ತ್ಯಾಗದಿಂದಲೇ ತಾವು ಸಚಿವರಾಗಿರುವುದು ಎಂಬುದನ್ನು ಕೆ.ಎಸ್.ಈಶ್ವರಪ್ಪ ಮರೆಯಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.‌

ಇಲ್ಲಿನ ಸುತ್ತೂರು ಮಠಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.‌

ಹೊರಗಿನಿಂದ ಬಂದ 17 ಮಂದಿಯಿಂದ ಬಿಜೆಪಿಯಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಈಶ್ವರಪ್ಪ ಅವರು ನೀಡಿರುವ ಹೇಳಿಕೆ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಅವರು ಆ ರೀತಿ ಹೇಳಿದ್ದರೆ, ಈ 17 ಮಂದಿಯಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎನ್ನುವ ಸಂಗತಿಯನ್ನು ಮರೆಯಬಾರದು ಎಂದು ಅವರು ಹೇಳಿದರು.‌

ನಾಯಕತ್ವ ಬದಲಾವಣೆ ಎನ್ನುವುದು ಪಕ್ಷದ ಚೌಕಟ್ಟಿನಲ್ಲಿ ಚರ್ಚೆಯಾಗಬೇಕೇ ವಿನಹಾ ಹೊರಗಡೆ ಅಲ್ಲ. ಬಹಿರಂಗವಾಗಿ ಈ ಕುರಿತು ಯಾರೂ ಮಾತನಾಡಬಾರದು ಎಂದು ಸೂಚನೆ ನೀಡಲು ಅರುಣ್‌ಸಿಂಗ್ ರಾಜ್ಯಕ್ಕೆ ಬರುತ್ತಿದ್ದಾರೆ. ಇವರು ಬಂದ ನಂತರ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾಯಕತ್ವ ಬದಲಾವಣೆ ಕುರಿತು ಕೆಲವರಷ್ಟೇ ಮಾತನಾಡುತ್ತಿದ್ದಾರೆ. ಈಗಾಗಲೇ ಹೈಕಮಾಂಡ್ ಇನ್ನೂ 2 ವರ್ಷಗಳ ಕಾಲ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಹೇಳಿದೆ. ಈ ಕುರಿತು ಯಾವುದೇ ಅನುಮಾನ ಬೇಡ. ಮುನಿರತ್ನ ಅವರು ಸಚಿವರಾಗಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.‌

ಬೇಸಿಗೆ ಸಂದರ್ಭದಲ್ಲಿ ಹೂ, ಹಣ್ಣು ಬೆಳೆಗಾರರಿಗೆ ತೊಂದರೆಯಾಗಿದ್ದು ಬಿಟ್ಟರೆ ಕೊರೊನಾ 2ನೇ ಅಲೆಯು ಕೃಷಿ ಮೇಲೆ ಹಿಂದಿನ ವರ್ಷದಷ್ಟು ಮಾರಕ ಪರಿಣಾಮ ಬೀರಿಲ್ಲ. ಎಲ್ಲೆಡೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಸಮರ್ಪಕವಾಗಿದೆ. ಈ ಕುರಿತು ಎಲ್ಲ ಜಿಲ್ಲೆಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು