ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.20ರಿಂದ ‘ಅಂಬಾರಿ’ ಸಂಚಾರ

ವಾಹನ ಸಾಗುವ ಹಾದಿಯಲ್ಲಿ ವಿದ್ಯುತ್‌‌ ತಂತಿ ಅಡ್ಡಿ; ಸಂಚಾರ ವಿಳಂಬ
Last Updated 20 ನವೆಂಬರ್ 2020, 1:55 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್‌ಟಿಡಿಸಿ) ಮೈಸೂರಿಗೆ ನೀಡಿರುವ ಡಬಲ್‌ ಡೆಕ್ಕರ್ ಬಸ್‌ ‘ಅಂಬಾರಿ’ ಡಿ.20ರಿಂದ ರಸ್ತೆಗಿಳಿಯಲಿದೆ.

ಅಲ್ಲದೇ, ಹೊಸದಾಗಿ ಮತ್ತೆ ಮೂರು ಅಂಬಾರಿಗಳು ಬರಲಿವೆ. ಮೈಸೂರು ಜಿಲ್ಲೆಗೆಂದು ಈಗಾಗಲೇಕಾಯ್ದಿರಿಸಿರು ಈ ಮೂರು ಅಂಬಾರಿ ವಾಹನಗಳು ಸದ್ಯ ಬೆಂಗಳೂರಿನಲ್ಲಿವೆ.

ದಸರಾ ಮಹೋತ್ಸವದ ವೇಳೆ ಅಂಬಾರಿ ಸಂಚಾರ ಆರಂಭವಾಗಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ನಗರದ ವಿವಿಧೆಡೆ ಸೆಸ್ಕ್‌ ಅಳವಡಿಸಿದ್ದ ಎಲ್‌ಇಡಿ‌ ಬಲ್ಬುಗಳ ಸಾಲು ತೀರಾ ಕೆಳಭಾಗದಲ್ಲಿದ್ದ ಕಾರಣಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

‘ಕೆಲರಸ್ತೆಗಳಲ್ಲಿ ವಿದ್ಯುತ್‌ ತಂತಿ ಕೆಳಮಟ್ಟದಲ್ಲಿದ್ದು, ಅಂಬಾರಿಗೆ ತಾಗುವ ಸಾಧ್ಯತೆ ಇರುತ್ತದೆ. ಓಪನ್‌ ಟಾಪ್‌ನಲ್ಲಿ ಪ್ರವಾಸಿಗರು ಕೊಡೆ ಹಿಡಿದು ನಿಂತಿರುತ್ತಾರೆ. ಡಬಲ್‌ ಡೆಕ್ಕರ್‌ ಬಸ್‌ ಇದಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಹೀಗಾಗಿ, ಅಂಬಾರಿ ಚಲಿಸುವ ಹಾದಿಯಲ್ಲಿ ನೆಲದಡಿಯಲ್ಲಿ ವಿದ್ಯುತ್‌ಕೇಬಲ್‌ ಅಳವಡಿಸಲು ನಮ್ಮ ಇಲಾಖೆಯಿಂದಲೇ ಸೆಸ್ಕ್‌ಗೆ‌ ಸುಮಾರು ₹ 1.5 ಕೋಟಿ ನೀಡಿದ್ದೇವೆ. ಕೆಲಸ ಮುಗಿಯುವವರೆಗೆ ಕಾರ್ಯಾರಂಭ ಮಾಡುವುದಿಲ್ಲ’ ಎಂದು ಕೆಎಸ್‌ಟಿಡಿಸಿ ಪ್ರಾದೇಶಿಕ ವ್ಯವಸ್ಥಾಪಕ ಉದಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಈ ಹಾದಿಯಲ್ಲಿ ಮರಗಳ ಕೊಂಬೆ ಕತ್ತರಿಸುವ ಕೆಲಸ ಮುಗಿದಿದೆ.

40 ಆಸನ ಸಾಮರ್ಥ್ಯದ ಈ ಬಸ್‌, ಒಂದೂವರೆ ಗಂಟೆ ಅವಧಿಯಲ್ಲಿ ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಸಂಪರ್ಕ ಬೆಸೆಯಲಿದೆ. ಬಸ್ಸಿನ ನೆಲ ಅಂತಸ್ತು ಹವಾನಿಯಂತ್ರಿತವಾಗಿದೆ. ಆಡಿಯೊ ಮತ್ತು ವಿಡಿಯೊ ವ್ಯವಸ್ಥೆ ಹೊಂದಿದೆ.

ಅಂಬಾರಿಯು ಜೆಎಲ್‌ಬಿ ರಸ್ತೆಯಲ್ಲಿರುವಹೊಯ್ಸಳ ಹೋಟೆಲ್‌ನಿಂದ ಹೊರಟು, ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್‌ ಹಾಲ್‌, ಮಾನಸಗಂಗೋತ್ರಿ ಪ್ರವೇಶದ್ವಾರ, ಓರಿಯಂಟಲ್ ರಿಸರ್ಚ್‌ ಲೈಬ್ರರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲಾ, ಪಾಲಿಕೆ ಮುಖ್ಯ ಕಚೇರಿ, ಜಗನ್ಮೋಹನ ಅರಮನೆ, ಕೆ.ಆರ್‌.ವೃತ್ತ, ಪುರಭವನ, ಗಾಂಧಿ ಸ್ಕ್ವೇರ್‌, ದೊಡ್ಡ ಗಡಿಯಾರ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಾಂಡ ದ್ವಾರ, ಹಾರ್ಡಿಂಜ್‌ ವೃತ್ತ, ಗಾಜಿನ ಮನೆ, ಮೃಗಾಲಯ, ಕಾರಂಜಿಕೆರೆ, ಜಾಕಿ ಕ್ವಾಟ್ರರ್ಸ್‌, ಲಲಿತಮಹಲ್‌ ಹೋಟೆಲ್‌, ಸ್ನೋ ಸಿಟಿ, ಫೈವ್‌ ಲೈಟ್ ವೃತ್ತ, ಸೇಂಟ್‌ ಫಿಲೋಮಿನಾ ಚರ್ಚ್‌, ಫೌಂಟೇನ್‌ ವೃತ್ತ, ಬನ್ನಿಮಂಟಪ, ಹೈವೇ ವೃತ್ತ, ಬಂಬೂ ಬಜಾರ್‌ ರಸ್ತೆ, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತ, ರೈಲ್ವೆ ನಿಲ್ದಾಣದಮೂಲಕಹೊಯ್ಸಳ ಹೋಟೆಲ್‌ಬಳಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT