ಸೋಮವಾರ, ಜೂನ್ 21, 2021
27 °C
ಕೋವಿಡ್–19 ಭೀತಿಯಲ್ಲೂ ಸರಳ ಆಚರಣೆ; ಕೊಡುಗೆ ಬಣ್ಣನೆ

ಮೈಸೂರಿನಲ್ಲಿ ಅಂಬೇಡ್ಕರ್ ಜಯಂತಿ; ಪುಷ್ಪ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ನಗರ/ಪಟ್ಟಣ/ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು.

ವಿವಿಧ ಸಂಘಟನೆಗಳು, ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವಿಟ್ಟು ಗೌರವ ನಮನ ಸಮರ್ಪಿಸಲಾಯಿತು. ಇದೇ ಸಂದರ್ಭ ಅಂಬೇಡ್ಕರ್ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.

ಜಯಪುರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಬಸವಣ್ಣ ಮತ್ತು ಸದಸ್ಯರು, ಪಿಡಿಓ ನರಹರಿ ಪುಷ್ಪ ನಮನ ಸಲ್ಲಿಸಿದರು.

ರೈತ ಸಂಪರ್ಕ ಕೇಂದ್ರ, ಬಾಲಕರ ವಿದ್ಯಾರ್ಥಿ ನಿಲಯ, ನಾಡಕಚೇರಿ, ಸಮುದಾಯ ಆರೋಗ್ಯ ಕೇಂದ್ರದಲ್ಲೂ ಪುಷ್ಪನಮನ ಸಲ್ಲಿಕೆಯಾಯ್ತು.

ಧನಗಹಳ್ಳಿ, ದೇವಗಳ್ಳಿ, ಗೋಪಾಲಪುರ, ಆನಗಳ್ಳಿ, ಕುಮಾರಬೀಡು, ಜಯಪುರ ತಳೂರು, ಮಾವಿನಹಳ್ಳಿ, ಉದ್ಬೂರು, ಮುರುಡಗಳ್ಳಿ, ದೂರ, ಗುಜ್ಜೇಗೌಡನಪುರ, ಅರಸಿನಕೆರೆ, ಮಾರ್ಬಳ್ಳಿ, ಸಿಂಧುವಳ್ಳಿ, ಕಡಕೋಳ, ದೊಡ್ಡಕಾನ್ಯ, ಬ್ಯಾತಹಳ್ಳಿ, ಹಾರೋಹಳ್ಳಿ, ಕಲ್ಲಹಳ್ಳಿ, ಮದ್ದೂರು, ಟಿ.ಕಾಟೂರು, ಕೆಂಚಲಗೂಡು ಸೇರಿದಂತೆ ವಿವಿಧೆಡೆ ಜಯಂತಿ ಆಚರಣೆಯಾಯ್ತು.

ಅಂಬೇಡ್ಕರ್‌ಗೆ ನಮನ

ವರುಣಾ: ಎಸ್.ಹೊಸಕೋಟೆ ಗ್ರಾಮದಲ್ಲಿ ಸರಳಾಚರಣೆ ಮೂಲಕ ನಮನ ಸಲ್ಲಿಸಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೊಸಕೋಟೆ ಕುಮಾರ್ ಮಾತನಾಡಿದರು. ಉಪಾಧ್ಯಕ್ಷೆ ಇಂದ್ರಾಣಿ ಕುಮಾರ್, ಸಂಘದ ಅಧ್ಯಕ್ಷ ಸುನೀಲ್, ಉಪಾಧ್ಯಕ್ಷ ಗಿರೀಶ್ ಹಾಜರಿದ್ದರು.

ಸಿದ್ದರಾಮನಹುಂಡಿ, ವರುಣಾ, ಮೆಲ್ಲಹಳ್ಳಿ, ನಗರ್ಲೆ, ದೇವಲಾಪುರ ಇನ್ನಿತರ ಗ್ರಾಮ ಪಂಚಾಯಿತಿಗಳಲ್ಲಿ ಕೂಡ ಸರಳವಾಗಿ ಆಚರಿಸಿದರು.

ಕೊರೊನಾ ಕಾಪಾಡಿದ ಸಮಾನತೆ

ಕೆ.ಆರ್.ನಗರ: ‘ಕೊರೊನಾ ವೈರಸ್ ಯಾವುದೇ ಜಾತಿ, ಮತ, ಧರ್ಮ ಎನ್ನದೇ ಬಡವ–ಶ್ರೀಮಂತರಲ್ಲೂ ಕಾಣಿಸಿಕೊಂಡು ಸಮಾನತೆ ಕಾಪಾಡಿದೆ’ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಯುತಾನಂದ ಹೇಳಿದರು.

ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ’ಕೊರೊನಾ ಬರಬಾರದ್ದಾಗಿತ್ತು. ಇದು ಜಾಗತಿಕ ಸಮಸ್ಯೆಯಾಗಿದೆ. ಜತೆಗೆ ನಾವೆಲ್ಲರೂ ಸಮಾನರು’ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.

ಹನಸೋಗೆ ನಾಗರಾಜು, ತಹಶೀಲ್ದಾರ್ ಎಂ.ಮಂಜುಳಾ ಮಾತನಾಡಿದರು. ಪುರಸಭೆ ಸದಸ್ಯ ಶಂಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ಗೊರಗುಂಡಿ ಶ‍್ರೀನಿವಾಸ ಪ್ರಸಾದ್, ವಕೀಲ ಗೋವಿಂದರಾಜು ಮತ್ತಿತರರಿದ್ದರು.

ಪಡಿತರ ವಿತರಣೆ

ಹುಣಸೂರು: ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಲಾಕ್‌ಡೌನ್‌ನಿಂದ ಪಡಿತರ ಸಮಸ್ಯೆ ಎದುರಿಸುತ್ತಿರುವ 1 ಸಾವಿರ ಬಡವರಿಗೆ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಾಗರಾಜ್ ಮಲ್ಲಾಡಿ ಪಡಿತರ ಕಿಟ್ ವಿತರಿಸಿದರು.

ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ 1 ಸಾವಿರ ಕಡು ಬಡವರನ್ನು ಗುರುತಿಸಿದ್ದು, ಮನೆ ಮನೆಗೆ ಪಡಿತರ ಕಿಟ್ ವಿತರಿಸುವ ಕಾರ್ಯ ಹಮ್ಮಿಕೊಂಡಿರುವೆ ಎಂದು ಹೇಳಿದರು.

ಗ್ರಾ.ಪಂ.ಅಧ್ಯಕ್ಷೆ ಚೆಲುವಮ್ಮ, ಉಪಾಧ್ಯಕ್ಷೆ ಸಿಂಗಮ್ಮ, ಮುಖಂಡ ಕೃಷ್ಣಶೆಟ್ಟಿ, ಡಾ.ಪ್ರಫುಲ್ಲಾ ಮಲ್ಲಾಡಿ ಇದ್ದರು.

ನೇರಳಕುಪ್ಪೆ ಗ್ರಾ.ಪಂ.ಕಚೇರಿಯಲ್ಲಿ ಕೆ.ಡಿ.ಮಹೇಶ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪಿಡಿಒ ದೊಡ್ಡಮಾದಯ್ಯ ಅಂಬೇಡ್ಕರ್ ಗುಣಗಾನ ಮಾಡಿದರು.

ಗ್ರಾ.ಪಂ.ಉಪಾಧ್ಯಕ್ಷೆ ಈಶ್ವರಿ, ಸದಸ್ಯರಾದ ಸುಮತಿ, ರಾಮೇಗೌಡ, ಸಣ್ಣತಮ್ಮೇಗೌಡ, ಮಧುರ, ಮುಖಂಡರಾದ ಕರಣೇಗೌಡ ಹಾಜರಿದ್ದರು.

ಅಂಬೇಡ್ಕರ್ ಸಮಾಜ

ಸರಗೂರು: ಪಟ್ಟಣದ ನಾಲ್ಕನೇ ವಾರ್ಡ್‌ನ ಅಂಬೇಡ್ಕರ್ ಸಮಾಜದ ವತಿಯಿಂದ ಜಯಂತಿ ಆಚರಿಸಲಾಯಿತು. ಎಸ್.ಎಲ್.ರಾಜಣ್ಣ, ಸುಬ್ರಹ್ಮಣ್ಯ, ಟ್ರಸ್ಟ್ ಅಧ್ಯಕ್ಷ ಶಿವನಂಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ಹಾಜರಿದ್ದರು.

‘ಅನುಯಾಯಿಗಳು ಬೇಕು’

ಪಿರಿಯಾಪಟ್ಟಣ: ‘ಅಂಬೇಡ್ಕರ್‌ಗೆ ಅಭಿಮಾನಿಗಳ ಅವಶ್ಯಕತೆಯಿಲ್ಲ. ಅವರ ಹೋರಾಟ, ಸಿದ್ಧಾಂತದ ರಥವನ್ನು ಎಳೆಯುವ ಅನುಯಾಯಿಗಳು ಬೇಕಾಗಿದ್ದಾರೆ’ ಎಂದು ಉಪನ್ಯಾಸಕ ಡಾ.ಸೋಮಣ್ಣ ಅಭಿಪ್ರಾಯಪಟ್ಟರು.

‘ಮಾನವ ಹಕ್ಕುಗಳು, ವ್ಯಕ್ತಿ ಸ್ವಾತಂತ್ರ್ಯ ಸಾಮಾಜಿಕ ನ್ಯಾಯದ ಎರಡು ಕಣ್ಣುಗಳು. ಇದಕ್ಕಾಗಿ ತನ್ನ ವೈಚಾರಿಕ ನೆಲೆಗಟ್ಟಿನಲ್ಲಿಯೇ ಕೊನೆಯವರೆಗೂ ಹೋರಾಟ ನಡೆಸಿದರು’ ಎಂದು ಸ್ಮರಿಸಿದರು.

ಎಚ್.ಕೆ.ಮಹೇಶ್, ಶ್ರೀನಿವಾಸ್, ಎಂ.ಹರೀಶ್ ಹಾಜರಿದ್ದರು. ತಾಲ್ಲೂಕಿನ ನಂದಿನಾಥಪುರ ಆಲನಹಳ್ಳಿ, ನವಿಲೂರು, ಕಂದೇಗಾಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಸರಳವಾಗಿ ಆಚರಿಸಲಾಯಿತು.

ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಳವಾಗಿ ಜಯಂತಿ ಆಚರಿಸಲಾಯಿತು. ಡಾ.ರಚನ್ ರಾಜ್, ಆರೋಗ್ಯ ಮೇಲ್ವಿಚಾರಕರಾದ ಅಜಾರಾಬಿ, ಪುಷ್ಪಲತಾ, ಸಿಬ್ಬಂದಿ ಗೀತಾ, ಮುತ್ತಮ್ಮ ಇದ್ದರು.

ಸರಳ ಆಚರಣೆ

ತಿ.ನರಸೀಪುರ: ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಸರಳವಾಗಿ ಜಯಂತಿ ಆಚರಿಸಲಾಯಿತು. ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.

ತಹಶೀಲ್ದಾರ್ ನಿಶ್ಚಯ್ ಮಾತನಾಡಿದರು. ತಾ.ಪಂ. ಇಓ ಜೆರಾಲ್ಡ್ ರಾಜೇಶ್, ಬಿಇಓ ಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ತಾ.ಪಂ.ಸದಸ್ಯ ಗಣೇಶ್ ಮತ್ತಿತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು