ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಶುಕ್ರವಾರ, ಬೆಟ್ಟದಲ್ಲಿ ಸಡಗರ

ಭಕ್ತರಿಗೆ ಅವಕಾಶ, ಕೋವಿಡ್ ಲಸಿಕೆಯ 2 ಡೋಸ್ ಕಡ್ಡಾಯ
Last Updated 30 ಜೂನ್ 2022, 14:38 IST
ಅಕ್ಷರ ಗಾತ್ರ

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರಕ್ಕೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ ಸಿಂಗಾರಗೊಂಡಿದ್ದು, ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಅಲಂಕೃತ ದೇವಿಯ ಮೂರ್ತಿ ಕಣ್ತುಂಬಿಕೊಳ್ಳಲು ಭಕ್ತಗಣ ಉತ್ಸುಕವಾಗಿದೆ. ನಸುಕಿನಿಂದಲೇ ಬೆಟ್ಟದಲ್ಲಿ ಸಂಭ್ರಮ ಮನೆ ಮಾಡಲಿದೆ.

ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದ ಹಿಂದಿನ 2 ವರ್ಷ ಈ ದಿನಗಳಂದು ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಬಾರಿ ಅವಕಾಶ ಸಿಕ್ಕಿದ್ದರಿಂದ ಭಕ್ತ ಸಮುದಾಯದಲ್ಲಿ ಹರ್ಷ ಉಂಟು ಮಾಡಿದೆ.

ಬೆಳಿಗ್ಗೆಯಿಂದ ರಾತ್ರಿವರೆಗೆ ಒಂದು ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಇದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುನ್ನಾ ದಿನವಾದ ಗುರುವಾರ, ಕೋವಿಡ್ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಕಾರ್ಯ ನಡೆಯಿತು. ವಿದ್ಯುತ್‌ ದೀಪಗಳ ದುರಸ್ತಿ ಮಾಡಲಾಯಿತು.

ಈ ಆಷಾಢ ಶುಕ್ರವಾರಗಳಲ್ಲೂ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಲಲಿತಮಹಲ್ ಮೈದಾನದಲ್ಲಿ ನಿಲ್ಲಿಸಿ, ಅಲ್ಲಿಂದ ವ್ಯವಸ್ಥೆ ಮಾಡಿರುವ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬೇಕು. ಮರಳುವಾಗಲೂ ಆ ಬಸ್‌ಗಳನ್ನೇ ಅವಲಂಬಿಸಬೇಕು. ಇದಕ್ಕಾಗಿ ತಾತ್ಕಾಲಿಕ ಬಸ್‌ ನಿಲ್ದಾಣ ಮತ್ತು ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. 50 ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತದೆ.

ಬೆಟ್ಟಕ್ಕೆ ಬರುವವರು ಕೋವಿಡ್‌ ಲಸಿಕೆಯ ಎರಡು ಡೋಸ್‌ ಪಡೆದಿರಬೇಕು ಅಥವಾ 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ. ತಾತ್ಕಾಲಿಕ ಬಸ್‌ ನಿಲ್ದಾಣ ಹಾಗೂ ಮೆಟ್ಟಿಲುಗಳ ಮಾರ್ಗದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಭಕ್ತರಿಗೆ ಸಾಮಾನ್ಯ ದರ್ಶನದೊಂದಿಗೆ, ₹ 50 ಮತ್ತು ₹ 300 ಟಿಕೆಟ್ ಖರೀದಿಸಿ ವಿಶೇಷ ದರ್ಶನ ಪಡೆಯಬಹುದು. ಟಿಕೆಟ್‌ಗಳಿಗಾಗಿ ಅಲ್ಲಲ್ಲಿ ಕೌಂಟರ್‌ಗಳನ್ನು ಮಾಡಲಾಗಿದೆ.

ಶುಕ್ರವಾರ ಮುಂಜಾನೆ 3.30ಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದ ಬಳಿಕ ದರ್ಶನಕ್ಕೆ ಅವಕಾಶವಿರಲಿದೆ. ಸಾರ್ವಜನಿಕರು ದರ್ಶನಕ್ಕೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಬೆಟ್ಟದ ಮಹಿಷಾಸುರ ಪ್ರತಿಮೆ ಮತ್ತು ಪಾರ್ಕಿಂಗ್ ಸ್ಥಳದಿಂದ ನೇರವಾಗಿ ದರ್ಶನಕ್ಕೆ ಹೋಗಲು ಅನುವು ಮಾಡಿಕೊಡಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಸಾದ, ಮೈಸೂರು ಪಾಕ್

ಚಾಮುಂಡೇಶ್ವರಿ ಸೇವಾ ಸಮಿತಿಯವರು ಪ್ರಸಾದದೊಂದಿಗೆ ಮೈಸೂರು ಪಾಕ್‌ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇವರೊಂದಿಗೆ ಹಲವು ಸೇವಾ ಸಮಿತಿಗಳು ಭಕ್ತರಿಗೆ ಪ್ರಸಾದ ವಿತರಿಸಲು ಸಜ್ಜಾಗಿವೆ. ಮಹಿಷಾಸುರ ಪ್ರತಿಮೆ ಹಾಗೂ ಪಾರ್ಕಿಂಗ್ ಜಾಗದ ಎದುರು ಪ್ರಸಾದ ವಿತರಣೆಗೆ ‘ಮುಡಾ’ದಿಂದ ಪೆಂಡಾಲ್‌ ಹಾಕಲಾಗಿದೆ.

ಪೂರ್ವ ಸಿದ್ಧತೆಯ ಕಾರ್ಯಗಳನ್ನು ಶಾಸಕ ಎಸ್.ಎ.ರಾಮದಾಸ್ ಪರಿಶೀಲಿಸಿದರು.

‘ಆಷಾಢ ಶುಕ್ರವಾರ ಮತ್ತು ದೇವಿಯ ವರ್ಧಂತಿಯ ದಿನದಂದು ಅಪಾರ ಸಂಖ್ಯೆಯ ಭಕ್ತರು ಬೆಟ್ಟಕ್ಕೆ ಬರುತ್ತಾರೆ. ಅವರಿಗೆ ಅನುಕೂಲ ಕಲ್ಪಿಸಲು ಸಂಬಂಧಿಸಿದ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ತಿಳಿಸಿದರು.

‘ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಕುಡಿಯುವ ನೀರು, ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ದೇವಿ ದರ್ಶನ ಪಡೆದ ಪ್ರತಿ ಭಕ್ತರಿಗೂ ಕುಂಕುಮ ಹಾಗೂ ಪ್ರಸಾದ ನೀಡುವಂತೆ ಸೂಚಿಸಲಾಗಿದೆ. ದಾನಿಗಳೂ ಪ್ರಸಾದದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕೆಲವರು ದೊನ್ನೆಯಲ್ಲಿ ನೀಡಿದರೆ, ಕೆಲವರು ಬಾಳೆಎಲೆಗಳಲ್ಲಿ ಕೊಡಲಿದ್ದಾರೆ’ ಎಂದರು.

ನಗರದ ದೇಗುಲಗಳಲ್ಲಿ...

ಆಷಾಢ ಶುಕ್ರವಾರದ ಅಂಗವಾಗಿ ನಗರದ ಸುಣ್ಣದಕೇರಿ, ದೊಡ್ಡಒಕ್ಕಲಗೇರಿ ಚಾಮುಂಡೇಶ್ವರಿ ದೇವಸ್ಥಾನಗಳು, ಶಂಕರ ಮಠದ ಶಾರದಾಂಬೆ, ತೊಗರಿ ಬೀದಿಯ ಕೊಲ್ಹಾಪುರದಮ್ಮ, ವಿಶ್ವೇಶ್ವರನಗರ ರಾಜರಾಜೇಶ್ವರಿ, ವಿಜಯನಗರದ ಸಪ್ತಮಾತೃಕಾ, ಕುವೆಂಪು ನಗರದ ಬಂದಂತಮ್ಮ ಕಾಳಮ್ಮ, ಕೆ.ಜಿ. ಕೊಪ್ಪಲು ಚಾಮುಂಡೇಶ್ವರಿ ದೇವಸ್ಥಾನಗಳಲ್ಲೂ ವಿಶೇಷ ಪೂಜೆ–ಪುನಸ್ಕಾರ ನೆರವೇರುತ್ತದೆ. ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT