ಮಂಗಳವಾರ, ಅಕ್ಟೋಬರ್ 26, 2021
23 °C

ಕೊರಮ ಸಮುದಾಯದ ಮಹಿಳೆ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಹುಣಸೂರು ತಾಲ್ಲೂಕಿನ ತೊಂಡಾಳು ಗ್ರಾಮದ ಕೊರಮ ಸಮುದಾಯಕ್ಕೆ ಸೇರಿದ ವಿಶಾಲಾಕ್ಷಿ ಅವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಂತ್ರಸ್ತೆಗೆ ₹5 ಲಕ್ಷ ಪರಿಹಾರ ನೀಡಬೇಕು’ ಎಂದು ಕೊರಮ ಸಮಾಜದ ಮುಖಂಡ ಮೋಹನ್‌ ರಾಜ್‌ ಆಗ್ರಹಿಸಿದರು.

‘ತಮ್ಮ ಮನೆಯ ವಿದ್ಯುತ್‌ ಸಂಪರ್ಕಕ್ಕೆ ತೊಂದರೆಯಾಗದಂತೆ ಕಂಬದಲ್ಲಿನ ತಂತಿಯನ್ನು  ಸರಿಪಡಿಸುವಂತೆ ಮನವಿ ಮಾಡಿದ್ದ ವಿಶಾಲಾಕ್ಷಿ ಮೇಲೆ ಒಕ್ಕಲಿಗ ಸಮುದಾಯದ ಭಾಗ್ಯಮ್ಮ, ರಮೇಶ್‌ ಅವರ ಮಕ್ಕಳಾದ ಮಾರುತಿ, ಪಿಂಕಿ ಆ.8ರಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ನೆಪಮಾತ್ರಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾಗ್ಯಮ್ಮ, ರಮೇಶ್‌ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಮಾರುತಿ, ಪಿಂಕಿಯನ್ನು ಬಂಧಿಸಿಲ್ಲ. ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಈ ಸಂಬಂಧ ಜಿಲ್ಲಾಧಿಕಾರಿ, ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಸಕರು ಸ್ಥಳಕ್ಕೆ ಭೇಟಿ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಂತ್ರಸ್ತೆಗೆ ಎರಡು ಎಕರೆ ಜಮೀನು ನೀಡಬೇಕು. ಮನೆ ನಿರ್ಮಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಸಂತ್ರಸ್ತೆ ವಿಶಾಲಾಕ್ಷಿ ಅವರ ಅಣ್ಣ ಶಿವರಾಜ್‌ ಮಾತನಾಡಿ, ‘ತಂಗಿಯ ಮೇಲೆ ಹಲ್ಲೆ ನಡೆಸಿದವರಿಗೆ ಶಿಕ್ಷೆಯಾಗಬೇಕು. ನಮಗೆ ನ್ಯಾಯ ಕೊಡಿಸಬೇಕು’ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೊರಮ ಸಮಾಜದ ಮುಖಂಡ ಮುತ್ತುರಾಜ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು