ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯ 19 ಕೆರೆ ಬಳಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’

Last Updated 13 ಆಗಸ್ಟ್ 2022, 16:31 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾ ಪಂಚಾಯಿತಿಯಿಂದ ಅಭಿವೃದ್ಧಿಪಡಿಸಲಾಗಿರುವ 19 ಕೆರೆಗಳ ಬಳಿ ಆ.15ರಂದು ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಆಚರಣೆ ಕಾರ್ಯಕ್ರಮ ಆಯೋಜಿಸಲಾಗುವುದು. ಅಲ್ಲಿ ರಾಷ್ಟ್ರಧ್ವಜ ಹಾರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಕೃಷ್ಣರಾಜು ತಿಳಿಸಿದ್ದಾರೆ.

‘ಸರ್ಕಾರದ ನಿರ್ದೇಶನದ ಮೇರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶದಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಕೇಂದ್ರ ಸರ್ಕಾರ ‘ಅಮೃತ ಸರೋವರ’ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲೂ ಸಾಂಪ್ರದಾಯಿಕ ಜಲಮೂಲಗಳನ್ನು ಪುನಶ್ಚೇತನಗೊಳಿಸಲು ಜಿಲ್ಲಾ ಪಂಚಾಯಿತಿಗಳಿಗೆ ಸೂಚಿಸಿತ್ತು. ವಾರ್ಷಿಕ 75 ಕೆರೆಗಳ ಸಂರಕ್ಷಣೆಗೆ ಗುರಿ ನೀಡಿತ್ತು. ಸ್ವಾತಂತ್ರ್ಯ ದಿನಾಚರಣೆ ವೇಳೆಗೆ 15 ಕೆರೆಗಳನ್ನು ಪುನರುಜ್ಜೀವನಗೊಳಿಸಲೇಬೇಕು ಎಂದು ನಿರ್ದೇಶನ ನೀಡಿತ್ತು. ಜಿಲ್ಲೆಯಲ್ಲಿ 19 ಕೆರೆಗಳಿಗೆ ಹೊಸ ರೂಪ ಕೊಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘79 ಕೆರೆಗಳ ಅಭಿವೃದ್ಧಿಗೆ ಏಪ್ರಿಲ್‌ನಿಂದಲೇ ಕ್ರಮ ವಹಿಸಲಾಗಿತ್ತು. ಮಳೆ ಅಡ್ಡಿಯ ನಡುವೆಯೂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕ್ರಮ, ಗ್ರಾಮೀಣ ಜಲ ಭದ್ರತೆಗೆ ಧಕ್ಕೆಯಾಗದಂತೆ ಗಮನಹರಿಸಿ ಭವಿಷ್ಯದಲ್ಲಿ ನೀರಿನ ಬವಣೆ ಪರಿಹರಿಸುವುದು ಎಚ್ಚರ ವಹಿಸುವುದೇ ‘ಅಮೃತ ಸರೋವರ’ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದಿದ್ದಾರೆ.

‘ಒಟ್ಟು 79 ಕೆರೆಗಳ ಅಭಿವೃದ್ಧಿ ಗುರಿ ಹೊಂದಲಾಗಿದೆ. ಇವುಗಳ ಕಾಮಗಾರಿ ಡಿಸೆಂಬರ್‌ಗೆ ಪೂರ್ಣಗೊಳ್ಳಲಿವೆ. ಸದ್ಯಕ್ಕೆ ಎಚ್.ಡಿ.ಕೋಟೆಯಲ್ಲಿ -2, ಹುಣಸೂರು-4, ಕೆ.ಆರ್.ನಗರ-2, ಮೈಸೂರು-3, ನಂಜನಗೂಡು- 2, ಪಿರಿಯಾಪಟ್ಟಣ-3, ಸರಗೂರು-1, ತಿ.ನರಸೀಪುರದಲ್ಲಿ 2 ಸೇರಿ 19 ಕೆರೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಆ ಕೆರೆಗಳಲ್ಲಿ ಆ.15ರಂದು ರಾಷ್ಟ್ರಧ್ವಜ ಹಾರಿಸಿ ಅರ್ಥಪೂರ್ಣವಾಗಿ ಅಮೃತ ಮಹೋತ್ಸವ ಆಚರಣೆ ಮಾಡಲಾಗುವುದು. ಆ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಕೆರೆಗಳ ಏರಿ ಬಲವರ್ಧನೆ, ಹೂಳು ತೆರವುಗೊಳಿಸಿ ನೀರಿನ ಶೇಖರಣಾ ಸಾಮರ್ಥ್ಯ ವೃದ್ಧಿಸುವುದು, ಪೂರಕ ನಾಲೆಗಳ ಅಭಿವೃದ್ಧಿ, ಕೆರೆ ಸುತ್ತಲೂ ನೆಡುತೋಪುಗಳ ನಿರ್ಮಾಣ ಹಾಗೂ ಪರಿಸರ ಸಂರಕ್ಷಣೆ ಮೊದಲಾದ ಕಾಮಗಾರಿಗಳನ್ನು ನಡೆಸಲಾಗಿದೆ. ಕೆರೆ ದಂಡೆಯಲ್ಲಿ ಅಶೋಕ, ಅರಳಿ ಸೇರಿ ಮೂರು ಬಗೆಯ ಸಸಿಗಳನ್ನು ನೆಡಲಾಗಿದೆ. ಪರಿಸರ ಸಮತೋಲನ ಕಾಪಾಡುವುದು, ಒತ್ತುವರಿ ತಡೆಯುವುದು ಹಾಗೂ ಬರುವ ದಿನಗಳಲ್ಲಿ ಕೆರೆಗಳ ಸ್ವಚ್ಛತಾ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗಿದೆ’ ಎಂದು ವಿವರ ನೀಡಿದ್ದಾರೆ.

ಒಟ್ಟು ಕೆರೆಗಳ ಅಭಿವೃದ್ಧಿ ಗುರಿ

ತಾಲ್ಲೂಕು; ಸಂಖ್ಯೆ
ಎಚ್.ಡಿ.ಕೋಟೆ;5
ಹುಣಸೂರು;11
ಕೆ.ಆರ್.ನಗರ;8
ಮೈಸೂರು;14
ನಂಜನಗೂಡು;10
ಪಿರಿಯಾಪಟ್ಟಣ;10
ಸರಗೂರು;2
ತಿ.ನರಸೀಪುರ;19
ಒಟ್ಟು;79

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT