ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಸ್ಥಿತಿ ಮುಳ್ಳಿನ ಮೇಲೆ ಪಂಚೆ ಹಾಕಿದಂತೆ: ಸಂಸದ ಶ್ರೀನಿವಾಸ ಪ್ರಸಾದ್‌

Last Updated 26 ನವೆಂಬರ್ 2020, 18:35 IST
ಅಕ್ಷರ ಗಾತ್ರ

ಮೈಸೂರು: ವಿವಿಧ ನಿಗಮ–ಮಂಡಳಿಗೆ ಮಾಡಿರುವ ಅಧ್ಯಕ್ಷರ ನೇಮಕ ವಿಚಾರವಾಗಿ, ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್‌ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.

‘ಚರ್ಚೆ ನಡೆಸದೇ, ಯೋಚನೆ ಮಾಡದೇ ನೇಮಕ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಗೊಂದಲ ಉಂಟು ಮಾಡಿದ್ದಾರೆ. ಸಮರ್ಪಕವಾಗಿ ನೇಮಕ ಮಾಡುವಲ್ಲಿ ಎಡವಿದ್ದಾರೆ. ಈ ಕುರಿತು ನನಗೆ ಅತೃಪ್ತಿ ಇದೆ. ಯಡಿಯೂರಪ್ಪ ಜೊತೆಯೂ ಮಾತನಾಡಿದ್ದೇನೆ. ಹಲವು ಕಾರ್ಯಕ್ರಮಗಳು ಇದ್ದ ಕಾರಣ ಆಮೇಲೆ ಚರ್ಚಿಸುವುದಾಗಿ ಹೇಳಿದ್ದಾರೆ’ ಎಂದು ಗುರುವಾರ ಇಲ್ಲಿ ತಿಳಿಸಿದರು.

‘ಯಡಿಯೂರಪ್ಪ ಅವರಸ್ಥಿತಿ ಈಗ ಮುಳ್ಳಿನ ಮೇಲೆ ಪಂಚೆ ಹಾಕಿದಂತಾಗಿದೆ. ಹಾದಿ ಕಠಿಣವಾಗಿದ್ದು, ಬಹಳ ಹುಷಾರಾಗಿ ಹೆಜ್ಜೆ ಇಡಬೇಕಿದೆ’ ಎಂದು ಕಿವಿಮಾತು ಹೇಳಿದರು.

‘ಸಿದ್ದರಾಮಯ್ಯ ಅವರಿಗೆ ಅಧಿಕಾರವಿದ್ದರೂ ಬುದ್ಧಿವಂತಿಕೆ ಇರಲಿಲ್ಲ. ಹೀಗಾಗಿ, ಅಧಿಕಾರ ಕಳೆದುಕೊಳ್ಳುವುದರ ಜೊತೆಗೆ ತಾವೇ ಸೋತು ಹೋದರು. ಯಡಿಯೂರಪ್ಪ ಬುದ್ಧಿವಂತಿಕೆ ಉಪಯೋಗಿಸಬೇಕು, ತಾಳ್ಮೆಯಿಂದ ವರ್ತಿಸಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು, ‘ಯಾವಾಗ ವಿಸ್ತರಣೆ ಮಾಡುತ್ತಾರೆ ಎಂಬುದು ನನಗೆ ಮಾಹಿತಿ ಇಲ್ಲ. ಹೈಕಮಾಂಡ್‌ ಉಂಟು, ಯಡಿಯೂರಪ್ಪ ಉಂಟು. ಆದರೆ, ಬೇಗನೇ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿ, ‘ಈ ವಿಚಾರವನ್ನು ಅಧಿಕೃತವಾಗಿ ಹೇಳುವಷ್ಟು ಶಕ್ತಿ ನನಗಿಲ್ಲ. ಬದಲಾವಣೆ ಮಾಡುವ ವಿಚಾರವಾಗಿ ಹೈಕಮಾಂಡ್‌ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕು’ ಎಂದರು.

‘ಕಾಂಗ್ರೆಸ್‌ ನೈತಿಕವಾಗಿ ಹಾಳಾಗಿದೆ’
‘ಕಾಂಗ್ರೆಸ್‌ ಸಂಪೂರ್ಣ ಕುಸಿದು ಹೋಗಿದ್ದು, ನೈತಿಕವಾಗಿ ಹಾಳಾಗಿದೆ. ತಿಹಾರ್‌ ಜೈಲಿನಲ್ಲಿದ್ದವರನ್ನು ಅಧ್ಯಕ್ಷರನ್ನಾಗಿ ಮಾಡಿ ವೋಟು ಕೊಡಿ ಎಂದರೆ ಯಾರು ನೀಡುತ್ತಾರೆ? ನೂರಾರು ವರ್ಷಗಳ ಇತಿಹಾಸ ಇರುವ ಈ ಪಕ್ಷವು ಯಾವ ಮುಖ ಹೊತ್ತುಕೊಂಡು ಜನರ ಬಳಿ ಹೋಗುತ್ತದೆ?ಇದರ ಲಾಭ ಬಿಜೆಪಿಗೆ ಸಿಗುತ್ತಿದೆ’ ಎಂದು ಶ್ರೀನಿವಾಸಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT