ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸರಳ ಆಚರಣೆಗೆ ಸೀಮಿತವಾದ ಬಕ್ರೀದ್

ಕೊರನಾ ಕರಾಳ ಛಾಯೆಯಿಂದ ಕಾಣದ ಅದ್ದೂರಿತನ
Last Updated 1 ಆಗಸ್ಟ್ 2020, 12:03 IST
ಅಕ್ಷರ ಗಾತ್ರ

ಮೈಸೂರು: ತ್ಯಾಗ, ಬಲಿದಾನದ ಪ್ರತೀಕವಾಗಿರುವ ಈದ್-ಉಲ್-ಅಜಾ (ಬಕ್ರೀದ್) ಹಬ್ಬವನ್ನು ನಗರದಲ್ಲಿ ಶನಿವಾರ ಕೊರೊನಾ ಸಂಕಷ್ಟದ ಮಧ್ಯೆ ಸರಳವಾಗಿ ಆಚರಿಸಲಾಯಿತು.

ಈ ಹಿಂದಿನ ವರ್ಷಗಳಲ್ಲಿ ಕಾಣಬರುತ್ತಿದ್ದ ಅದ್ದೂರಿತನವಾಗಲಿ, ಸಾಮೂಹಿಕ ಪ್ರಾರ್ಥನೆಗಳಾಗಲಿ ಈ ಬಾರಿ ಕಂಡು ಬರಲಿಲ್ಲ. ಮಸೀದಿಗಳಲ್ಲಿ 50 ಮಂದಿಗಷ್ಟೇ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಲಾಯಿತು. ಎಲ್ಲರೂ ಪೊಲೀಸರ ಈ ನಿಯಮಕ್ಕೆ ಸ್ಪಂದಿಸಿದರು. ಶಾಂತಿಯುತವಾಗಿ ಶ್ರದ್ಧಾ-ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ಮೈಸೂರಿನ ತಿಲಕ್‌ ನಗರ, ರಾಜೀವ್‌ನಗರ, ಗೌಸಿಯಾ ನಗರ, ಉದಯಗಿರಿ ಸೇರಿದಂತೆ ವಿವಿಧ 172ಕ್ಕೂ ಹೆಚ್ಚಿನ ಮಸೀದಿಗಳಲ್ಲಿ ಮುಸ್ಲಿಮರು ಈದ್ ಪ್ರಯುಕ್ತ ವಿಶೇಷ ‘ವಾಜೀಬ್’ ನಮಾಜ್ ಸಲ್ಲಿಸಿದರು. ಕೆಲಹೊತ್ತು ಧರ್ಮ ಗುರುಗಳಿಂದ ‘ಬಯಾನ್’ (ಪ್ರವಚನ) ಆಲಿಸಿದರು.

ವಿಶೇಷ ಟೋಪಿ, ವಿವಿಧ ಬಗೆಯ ಅತ್ತರ್‌ ಧರಿಸಿಕೊಂಡು ಕೆಲವರು ನಮಾಜ್ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಹೆಚ್ಚಿನ ಜನರು ಬಂದರೂ ಒಂದು ತಂಡದ ನಂತರ ಮತ್ತೊಂದು ತಂಡದಂತೆ ಅವಕಾಶ ಮಾಡಿಕೊಡಲಾಯಿತು. ಪರಸ್ಪರ ಅಂತರ ಕಾಯ್ದುಕೊಂಡೇ ಪ್ರಾರ್ಥನೆ ಸಲ್ಲಿಸಲಾಯಿತು.

ಬಕ್ರೀದ್ ಹಬ್ಬದ ವಿಶೇಷ ಎನಿಸಿದ ಜಾನುವಾರು ಬಲಿ ಸಹ ಈ ಬಾರಿ ಅಷ್ಟೇನೂ ಅದ್ದೂರಿಯಾಗಿ ನಡೆಯಲಿಲ್ಲ. ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಜಾನುವಾರು ಬಲಿಯ ಸಂಖ್ಯೆಯೂ ಕಡಿಮೆ ಇತ್ತು. ಮಾಂಸವನ್ನು ಬಡವರೊಂದಿಗೆ ಹಂಚಿಕೊಂಡು ಸಾರ್ಥಕತೆ ಮರೆದರು.

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಇದ್ದಿದ್ದರೆ ಮಕ್ಕಳ ಸಂಭ್ರಮ ಮೇರೆ ಮೀರುತ್ತಿತ್ತು. ಆದರೆ, ಈ ಬಾರಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದೇ ಇದ್ದುದ್ದರಿಂದ ಚಿಕ್ಕಮಕ್ಕಳಿಗೆ ಈ ಬಾರಿಯ ಬಕ್ರೀದ್‌ ಅಷ್ಟೇನೂ ಪ‍್ರಿಯ ಎನಿಸಲಿಲ್ಲ. ಬಹುತೇಕ ಮಂದಿ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಮಸೀದಿಗಳಿಗೆ ಬಂದಿದ್ದರು.

ಬಿರಿಯಾನಿ ಮತ್ತಿತ್ತರ ಮಾಂಸಾಹಾರಿ ಖಾದ್ಯಗಳನ್ನು ಬಹುತೇಕ ಎಲ್ಲರ ಮನೆಗಳಲ್ಲಿ ಸಿದ್ಧಪಡಿಸಲಾಗಿತ್ತು. ಆದರೆ, ಭೋಜನಕ್ಕಾಗಿ ಹಿಂದಿನ ವರ್ಷಗಳಂತೆ ಹೆಚ್ಚಿನ ಜನರಿಗೆ ಆಹ್ವಾನ ನೀಡಿದ್ದು ಕಂಡು ಬರಲಿಲ್ಲ.

ಮೈಸೂರಿನ ಸರ್ ಖಾಜಿಯಾದ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೇಬ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಈ ಬಾರಿ ಕೊರೊನಾ ಸಂಕಷ್ಟದಿಂದಾಗಿ ಅತ್ಯಂತ ಸರಳವಾಗಿ ಬಕ್ರೀದ್ ಆಚರಿಸಲಾಗಿದೆ. ಕೊರೊನಾ ಸಂಕಷ್ಟ ಬೇಗ ನಿವಾರಣೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT