ಗುಂಡ್ಲುಪೇಟೆ: ಸಫಾರಿ ವಾಹನಗಳ ಚಾಲಕರು ಮತ್ತು ಪ್ರವಾಸಿಗರ ಮೇಲೆ ನಿಗಾ ಇಡಲು ಹಾಗೂ ಅವರ ಸುರಕ್ಷತೆಗಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ.
ಸಫಾರಿಯಲ್ಲಿಅಡ್ಡಾದಿಡ್ಡಿ ವಾಹನ ಚಲಾಯಿಸಬಾರದು, ಸಫಾರಿಗೆ ನಿಗದಿಪಡಿಸಿದ ಜಾಗಗಳಲ್ಲಿ ಮಾತ್ರ ಪ್ರವಾಸಿಗರನ್ನು ಕರೆದುಕೊಂಡು ಹೋಗಬೇಕು, ಪ್ರಾಣಿಗಳು ಕಂಡರೆ ನಿಶ್ಯಬ್ದವಾಗಿ ಅವುಗಳನ್ನು ವೀಕ್ಷಣೆ ಮಾಡಬೇಕು. ಎಲ್ಲ ವಾಹನಗಳೂ ಒಂದೇ ಕಡೆ ಹೋಗಬಾರದು ಎಂಬ ಸೂಚನೆಗಳಿದ್ದರೂ, ಚಾಲಕರು ಮತ್ತು ಪ್ರವಾಸಿಗರು ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ.ಇದನ್ನು ತಡೆಯುವುದಕ್ಕಾಗಿ ಮತ್ತು ವನ್ಯಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಜಿಪಿಎಸ್ ಅಳವಡಿಸುವ ನಿರ್ಧಾರ ಕೈಗೊಂಡಿದೆ.
ಈಗಾಗಲೇ ಸಫಾರಿಗೆ ಬಳಸುತ್ತಿರುವ 8 ವ್ಯಾನ್ ಮತ್ತು 5 ಜಿಪ್ಸಿಗಳಿಗೆ ಜಿಪಿಎಸ್ ಅಳವಡಿಸಲಾಗಿದೆ.
‘ಕಾಡಿನಲ್ಲಿ ಮೊಬೈಲ್ ಸಿಗ್ನಲ್ ಇರುವುದಿಲ್ಲ. ಕೆಲವೊಂದು ಸಲ ವಾಹನಗಳು ಹಾಳಾದ ಸಂದರ್ಭದಲ್ಲಿ ಪ್ರವಾಸಿಗರು ಹೆದರುವುದು ಸಹಜ. ಜಿಪಿಎಸ್ ಅಳವಡಿಕೆಯಿಂದ ಈ ಸಮಸ್ಯೆಗೆ ಪರಿಹಾರ ದೊರಕಲಿದ್ದು, ವಾಹನ ಯಾವ ಪ್ರದೇಶದಲ್ಲಿ ಇದೆ ಎಂಬುದೂ ತಿಳಿಯುತ್ತದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‍ನ ವಾಹನಗಳು ಕೂಡ ಅರಣ್ಯದೊಳಗೆ ಸಫಾರಿಗೆ ಹೋಗುವುದರಿಂದ ಅವುಗಳಿಗೂ ಜಿಪಿಎಸ್ ಅಳವಡಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಂಗಸಂಸ್ಥೆ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‍ಗೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಕಳೆದ ವರ್ಷ ಸಫಾರಿಗೆ ತೆರಳಿದ್ದಾಗ ಹುಲಿಯನ್ನು ನೋಡಲು, ಎಲ್ಲಾ ವಾಹನಗಳ ಚಾಲಕರು ಒಂದೇ ವಲಯಕ್ಕೆ ಪ್ರವಾಸಿಗರನ್ನು ಕರೆದೊಯ್ದಿದ್ದರು. ವಾಹನವನ್ನು ಹಳ್ಳಕೊಳ್ಳ ಪ್ರದೇಶಗಳಲ್ಲಿ ಚಾಲನೆ ಮಾಡಿದ್ದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಆಗ, ಸಫಾರಿ ವಾಹನ ಚಾಲಕರು ಮೊಬೈಲ್ ಬಳಕೆ ಮಾಡಬಾರದು ಎಂಬ ನಿಯಮ ಜಾರಿಗೆ ತರಲಾಗಿತ್ತು. ಅಂದೇ ಜಿಪಿಎಸ್ ಅಳವಡಿಕೆಗೂ ಚಿಂತನೆ ಮಾಡಲಾಗಿತ್ತು.
ಅನುಕೂಲ: ‘ಪ್ರವಾಸಿಗರಿಗೆ ಪ್ರಾಣಿಗಳನ್ನು ತೋರಿಸಬೇಕು ಎಂಬ ಉದ್ದೇಶದಿಂದ ಎಲ್ಲ ಚಾಲಕರು ತಮ್ಮ ವಾಹನಗಳನ್ನು ಪ್ರಾಣಿಗಳು ಇರುವ ಕಡೆಗೆ ಚಲಾಯಿಸುತ್ತಿದ್ದರು. ಜಿಪಿಎಸ್ ಅಳವಡಿಕೆಯಿಂದ ಇಂಥದ್ದಕ್ಕೆಲ್ಲ ಕಡಿವಾಣ ಬೀಳಲಿದೆ. ಇದರಿಂದ ಸಾಕಷ್ಟು ಉಪಯೋಗವಾಗುತ್ತದೆ’ ಎಂದು ಹವ್ಯಾಸಿ ಛಾಯಾಗ್ರಾಹಕ ವಿಷ್ಣು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.