ಗುರುವಾರ , ಮಾರ್ಚ್ 30, 2023
24 °C
ನನ್ನ ಬಳಿ ಬಿಎಸ್ವೈ ಭ್ರಷ್ಟಾಚಾರ ಸಂಬಂಧ ಬ್ರಹ್ಮಾಸ್ತ್ರವಿದೆ: ಯತ್ನಾಳ

ಯಡಿಯೂರಪ್ಪ ಪರ ವಾದಿಸುವ ಮಠಾಧೀಶರಿಗೆ ಎಚ್ಚರಿಕೆ ಕೊಟ್ಟ ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪರವಾಗಿ ಬ್ಯಾಟಿಂಗ್ ಮಾಡುವ ಮಠಾಧೀಶರು ಎಚ್ಚರವಹಿಸಬೇಕು. ನನ್ನ ಬಳಿ ಬಿಎಸ್ವೈ ಭ್ರಷ್ಟಾಚಾರ ಸಂಬಂಧ ಬ್ರಹ್ಮಾಸ್ತ್ರವಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಯಡಿಯೂರಪ್ಪ ಭ್ರಷ್ಟಾಚಾರ ಬಯಲು ಮಾಡಿದರೆ, ಅವರ ಪರ ಬ್ಯಾಟಿಂಗ್ ಮಾಡುತ್ತಿರುವ ಮಠಾಧೀಶರು ಮಠ ಬಿಟ್ಟು ಓಡಬೇಕಾಗುತ್ತದೆ’ ಎಂದಿದ್ದಾರೆ.

‘ನಾನು ಕುರುಕ್ಷೇತ್ರದ ಅಭಿಮನ್ಯು ಆಗಲು ಸಿದ್ದ. ಆದರೆ ನಾನು ಅರ್ಜುನನಾಗುತ್ತೇನೆ. ವನವಾಸ, ಅಜ್ಞಾತವಾಸ ಎಲ್ಲಾ ಮುಗಿದಿದೆ. ಇನ್ನೇನಿದ್ದರೂ ಪಟ್ಟಾಭಿಷೇಕ ಮಾಡಿಸುವ ಕೆಲಸ ಅಷ್ಟೇ. ನನಗೆ ವಿಶ್ವಾಸವಿದೆ ನಾಯಕತ್ವ ಬದಲಾಗುತ್ತದೆ. ನಾನು ಏಕಾಂಗಿ ಅಲ್ಲ. ಸಾಕಷ್ಟು ಸಚಿವರು ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲರೂ ನೀವು ಮಾಡುತ್ತಿರುವುದು ನ್ಯಾಯಯುತ ಹೋರಾಟ ಎಂದು ಹೋರಾಟ‌ ಮುಂದವರಿಸಲು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಇದರ ಫಲ ಸಿಗುತ್ತದೆ. ಯಡಿಯೂರಪ್ಪ ಕುರಿತು ಭ್ರಷ್ಟಾಚಾರದ ದಾಖಲೆ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ’ ಎಂದರು.

‘ಯಡಿಯೂಪ್ಪನವರೇ ಸಾಕು ಗೌರವಯುತವಾಗಿ ನಿವೃತ್ತಿಯಾಗಿ. ನಿಮ್ಮ ಭ್ರಷ್ಟಾಚಾರದ ಕರ್ಮಕಾಂಡವೇ ಇದೆ. ರಾಜ್ಯದ ಹಿತದೃಷ್ಟಿಯಿಂದ ಪಕ್ಷದ ಹಿತದೃಷ್ಟಿಯಿಂದ, ನಿಮ್ಮ ಕುಟುಂಬದ ಹಿತದೃಷ್ಟಿಯಿಂದಲೂ ನೀವು ಅಧಿಕಾರದಿಂದ ನಿರ್ಗಮಿಸುವುದು ಒಳ್ಳೆಯದು’ ಎಂದರು.

‘ನಾಳೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಕರ್ನಾಟಕಕ್ಕೆ ಒಳ್ಳೆಯದಾಗುವ ನಿರೀಕ್ಷೆ ಇದೆ’ ಎಂದರು.

‘ನಾನು ಹಿಂದೆಯೇ ಮುಖ್ಯಮಂತ್ರಿಯಾಗಬೇಕಿತ್ತು. ನಾನೇ ಕೆಲ ಅವಕಾಶಗಳನ್ನು ಕಳೆದುಕೊಂಡಿದ್ದೇನೆ.  ಸದಾನಂದಗೌಡ, ಜಗದೀಶ್ ಶೆಟ್ಟರ್‌ಗಿಂತ ನಾನು ಸೀನಿಯರ್. ಯಡಿಯೂರಪ್ಪ ಮಂತ್ರಿನೂ ಆಗಿರಲಿಲ್ಲ. ಆಗಲೇ ನಾನು ಕೇಂದ್ರ ಮಂತ್ರಿಯಾಗಿದ್ದೆ’ ಎಂದರು.

‘ಭ್ರಷ್ಟಾಚಾರ, ಕುಟುಂಬಶಾಹಿ ವಿರುದ್ದ ನನ್ನ ಹೋರಾಟ ನಿಲ್ಲಿಸಲ್ಲ. ಬಿಜೆಪಿಯ ಕೆಲವರು ವಿಜಯೇಂದ್ರ ಮೊಣಕಾಲಿಗೆ ನಮಸ್ಕಾರ ಮಾಡುತ್ತಾರೆ.  ಸಿಎಂ ಮಗನ ಮುಂದೆ ಕೈ ಒಡ್ಡಿ ನಿಲ್ಲುತ್ತಾರೆ. ಅವರೇನೂ ಗ್ರಾ. ಪಂ ಸದಸ್ಯನೂ ಆಗಿಲ್ಲ. ಅಷ್ಟೊಂದು ಕೆಳಮಟ್ಟದಲ್ಲಿ ಕೆಲವರು ಇದ್ದಾರೆ’ ಎಂದರು.

‘ಮೊನ್ನೆ ಅರುಣ್ ಸಿಂಗ್ ಮಾಡಿದ್ದು ನಾಟಕ. ದೆಹಲಿಯಲ್ಲೇ ನಾಯಕತ್ವ ಬದಲಾವಣೆ ಇಲ್ಲ. ಈ ರೀತಿ ಅಲ್ಲೇ ಹೇಳಿದ ಮೇಲೆ‌ ಇಲ್ಲಿಗೆ ಏಕೆ ಬಂದರು? ಸತ್ಯ ಒಂದಲ್ಲ‌ ಒಂದು ದಿನ ಬೆಳಕಿಗೆ ಬರುತ್ತದೆ. ಎಲ್ಲರೂ ಕಾಯಿರಿ’ ಎಂದರು.

‘ವಿಜಯೇಂದ್ರ ಬಿಜೆಪಿ ಪಕ್ಷ ಒಡೆಯಲು ಮುಂದಾಗಿದ್ದಾನೆ. ನಿನ್ನೆ ಈ ಬಗ್ಗೆ ಕ್ಲಬ್‌ನಲ್ಲಿ ಸಭೆ ನಡೆದಿದೆ. ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಷಡ್ಯಂತರ ಮಾಡುತ್ತಿದ್ದಾರೆ’ ಎಂದರು.

ಇದನ್ನೂ ಓದಿ: ವಿಶ್ವನಾಥ್‌–ಯತ್ನಾಳ ಗೋಪ್ಯ ಮಾತುಕತೆ: ರಾಜಕೀಯ ವಲಯದಲ್ಲಿ ಸಂಚಲನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು