ಬುಧವಾರ, ಜನವರಿ 19, 2022
28 °C
ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿ– ಮುಖಂಡರ ಮತಯಾಚನೆ

ಮೈಸೂರು: ಗ್ರಾಮಾಂತರದಲ್ಲಿ ಪ್ರಚಾರದ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಹಾಗೂ ಮುಖಂಡರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಹುಣಸೂರಿನಲ್ಲಿ ಹಾಗೂ ಪಿರಿಯಾಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್‌ ಪ್ರಚಾರ ಸಭೆ ನಡೆಯಿತು. ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಪರ ಮತಯಾಚಿಸಲಾಯಿತು.

ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದ್ದು, ಆರ್ಥಿಕ ಬಿಟ್ಟಿನಿಂದ ಪಂಚಾಯಿತಿಗಳಿಗೆ ಸಲ್ಲಬೇಕಿ ರುವ ಅನುದಾನ ತಡೆಹಿಡಿಯಲಾಗಿದೆ. ಹೀಗಾಗಿ, ಪಂಚಾಯಿತಿಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸಲಾಗದ ಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದರು.

‘ಗಾಂಧೀಜಿ ಕೊಂದ ಪಕ್ಷದ ವರಿಗೆ ಗಾಂಧಿ ಸ್ವರಾಜ್ ಕಲ್ಪನೆ ಬರುವುದಾದರೂ ಹೇಗೆ? ಧಾರ್ಮಿಕ ಸೂಕ್ಷ್ಮತೆ
ಯನ್ನು ರಾಜಕೀಯಕ್ಕೆ ಬೆಸೆದು ಅಧಿಕಾರದ ಚುಕ್ಕಾಣಿ ಹಿಡಿಯುವ ಬಿಜೆಪಿಗೆ ಜಾತ್ಯತೀತ ತತ್ವ ಸಿದ್ಧಾಂತ ತಿಳಿಯುವುದಾ
ದರೂ ಹೇಗೆ’ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಶಾಸಕ ಎಚ್‌.ಪಿ.ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಮಾಜಿ ಶಾಸಕ ಕೆ.ವೆಂಕಟೇಶ್‌, ಗ್ರಾಮಾಂ
ತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ ಕುಮಾರ್ ಪಾಲ್ಗೊಂಡಿದ್ದರು. ಶಾಸಕ ಸಾ.ರಾ.ಮಹೇಶ್‌ ಸಾರಥ್ಯದಲ್ಲಿ ಕೆ.ಆರ್.ನಗರದಲ್ಲಿ ಜೆಡಿಎಸ್ ಸಭೆ ನಡೆಯಿತು. ಪಕ್ಷದ ಅಭ್ಯರ್ಥಿ ಸಿ.ಎನ್‌.ಮಂಜೇಗೌಡ ಪರ ಮತಯಾಚಿಸಿದರು.

‘ಬಿಜೆಪಿಯ ಅಧಿಕಾರಾವಧಿ ಉಳಿದಿರುವುದು ಕೇವಲ 1 ವರ್ಷ, 4 ತಿಂಗಳು. ಹಾಗಾದರೆ ಅವರು ಮನೆ ಕೊಡುವುದು ಯಾವಾಗ, ಇಂಥವರಿಗೆ ನೀವು ವೋಟು ಕೊಡಬೇಕಾ? ರಾಜ್ಯದಲ್ಲಿ ಅಭಿವೃದ್ಧಿ ಮಾಡುವ ಪ್ರಾದೇಶಿಕ ಪಕ್ಷ ಬೇಕೋ ಅಥವಾ ಲೂಟಿ ಹೊಡೆಯುವ ಸರ್ಕಾರ ಬೇಕೋ ಎನ್ನುವುದನ್ನು ಮತದಾರರೇ ತೀರ್ಮಾನಿಸಬೇಕು’ ಎಂದು ಸಾ.ರಾ.ಮಹೇಶ್‌ ಹೇಳಿದರು.

ಬಿಜೆಪಿ ಅಭ್ಯರ್ಥಿ ಆರ್‌.ರಘು (ಕೌಟಿಲ್ಯ) ಅವರು ಮೈಸೂರಿನ ಶಾಖಾಮಠದಲ್ಲಿ ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷ ಶಿವಾನಂದಪುರಿ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದರು.

ತಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್‌ ನೇತೃತ್ವದಲ್ಲಿ ಸಭೆ ನಡೆಯಿತು. ಬನ್ನೂರು, ಉಕ್ಕಲಗೆರೆ, ಸೋಮನಾಥಪುರ, ಹೆಗ್ಗೂರು, ಕೇತುಪುರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.

ಕ್ಷೇತ್ರ ವ್ಯಾಪ್ತಿಯ 29 ಪಂಚಾಯಿತಿಯ ಪ್ರಮುಖರ ಜವಾಬ್ದಾರಿಯನ್ನು ತಿಳಿಸಿದರು. ಸದಸ್ಯರನ್ನು ಭೇಟಿ ಮಾಡಿ ಮನವೊಲಿಸುವ ಎರಡೂ ಕಾರ್ಯ ಪ್ರಾರಂಭವಾಗಬೇಕು. ಮೊದಲ ಪ್ರಾಶಸ್ತ್ಯ ಮತವನ್ನು ಬಿಜೆಪಿ ಅಭ್ಯರ್ಥಿಗೆ ಹಾಕಿಸಬೇಕು ಎಂದು ರಾಮದಾಸ್‌ ಕರೆ ನೀಡಿದರು.

ತಿ.ನರಸೀಪುರ ಬಿಜೆಪಿ ಅಧ್ಯಕ್ಷ ಲೋಕೇಶ್, ಮಾಜಿ ವಿಧಾನಪರಿಷತ್ ಸದಸ್ಯ ಸಿ.ರಮೇಶ್, ಪ್ರಮುಖರಾದ ಭಾರತಿಶಂಕರ್, ತೋಟದಪ್ಪ ಬಸವರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು