ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಾ: 5 ವರ್ಷದಿಂದ ಪ್ರಭಾರಿ ಡೀನ್

ಪೂರ್ಣಾವಧಿ ಬೋಧಕರ ಕೊರತೆ–ಸಿಗದ ಪರಿಹಾರ
Last Updated 22 ಮೇ 2022, 20:08 IST
ಅಕ್ಷರ ಗಾತ್ರ

ಮೈಸೂರು: ಐದು ವರ್ಷ ಕಳೆದರೂ ನೇಮಕವಾಗದ ಡೀನ್‌, ಪೂರ್ಣಾವಧಿ ಬೋಧಕರ ಕೊರತೆ, ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಸಿಗದ ಸ್ಟೈಪಂ‌ಡ್, ಕ್ಯಾಂಪಸ್‌ನ ದಾರಿಯಲ್ಲಿ ವಿದ್ಯಾರ್ಥಿನಿಯರಿಗೆ ಪುಂಡರ ಕಾಟ...

ಇಲ್ಲಿನ ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜು (ಕಾವಾ), ಸಾಲು ಸಾಲು ಅಡ್ಡಿಗಳ ನಡುವೆಯೇ ಕಲೆಯ ಶಿಕ್ಷಣ ನೀಡುವ ಕೈಂಕರ್ಯ ಮುಂದುವರಿಸಿದೆ. ಹಲವಾರು ವರ್ಷಗಳಿಂದ ಇರುವ ಸಮಸ್ಯೆಗೆ ಮುಕ್ತಿ ಸಿಗದ ಆಕ್ರೋಶ ವಿದ್ಯಾರ್ಥಿಗಳಲ್ಲಿ ಮನೆಮಾಡಿದೆ.

2017 ರಿಂದಲೂ ಇಲ್ಲಿ ಪ್ರಭಾರಿ ಡೀನ್‌ಗಳದ್ದೇ ಕಾರುಬಾರು. ಬಿ.ಆರ್‌.ಪೂರ್ಣಿಮಾ ಈಗ ಪ್ರಭಾರಿ ಡೀನ್‌ ಆಗಿದ್ದಾರೆ. ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಆಗಿರುವ ಅವರಿಗೆ ಪುರಾತತ್ವ ಇಲಾಖೆ ಅಯುಕ್ತರ ಹೆಚ್ಚುವರಿ ಜವಾಬ್ದಾರಿಯೂ ನೀಡಲಾಗಿದೆ.

ಪೂರ್ಣಾವಧಿ ಬೋಧಕರ ಕೊರತೆಗೆ ಇನ್ನೂ ಪರಿಹಾರ ಸಿಕ್ಕಿ‌ಲ್ಲ. ಹಿರಿಯ ವಿದ್ಯಾರ್ಥಿಗಳೇ ಇಲ್ಲಿ ತಾತ್ಕಾಲಿಕ ಬೋಧಕರು. ಒಟ್ಟು 16 ಕಾಯಂ ಬೋಧಕರ ಹುದ್ದೆಯಲ್ಲಿ ಆರು ಮಂದಿಯಷ್ಟೇ ಇದ್ದಾರೆ. ಆರು ರೀಡರ್‌ಗಳ ಹುದ್ದೆ ಹಲವು ವರ್ಷಗಳಿಂದ ಖಾಲಿಯಿದೆ. ಹಿಂದೆ ಇದ್ದವರು ನಿವೃತ್ತಿಯಾದ ಬಳಿಕ ಹೊಸಬರನ್ನು ನೇಮಿಸಿಯೇ ಇಲ್ಲ!

ಆರು ಕಾಯಂ ಬೋಧಕರಲ್ಲಿ ಒಬ್ಬರಾಗಿರುವ ವೀರಣ್ಣ ಅರ್ಕಸಾಲಿ ಅವರನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ರಾಜ್ಯಮಟ್ಟದಲ್ಲಿ ಕೆಲಸ ಮಾಡಬೇಕಿರುವ ಅವರಿಗೆ ಇಲ್ಲಿನ ಹುದ್ದೆಗೆ ನ್ಯಾಯ ಒದಗಿಸುವುದು ಸವಾಲಿನ ಕೆಲಸ.

‘ಬೇರೆ ಇಲಾಖೆ, ಶೈಕ್ಷಣಿಕ ಹಿನ್ನೆಲೆ ಹೊಂದಿರುವವರನ್ನು ಡೀನ್ ಆಗಿ ನೇಮಿಸಿರುವುದರಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಬೇರೆ 2–3 ಕಡೆ ಜವಾಬ್ದಾರಿ ಇರುವವರನ್ನು ನೇಮಿಸಿದರೆ, ಅವರಿಗೆ ನಮ್ಮ ಕಡೆ ಗಮನಹರಿಸಲು ಆಗುತ್ತಿಲ್ಲ. ಪೂರ್ಣಾವಧಿ ಡೀನ್‌ ನೇಮಕ ಆಗಬೇಕು’ ಎಂಬುದು ವಿದ್ಯಾರ್ಥಿಗಳ ಒತ್ತಾಯ.

‘ಸ್ಟೈಪಂಡ್‌ ಕಾಲ ಕಾಲಕ್ಕೆ ಸಿಗದೇ ಇರುವುದರಿಂದ ಕಲಿಕೆಗೆ ಅಗತ್ಯದ ಪರಿಕರಗಳನ್ನು ಕೊಳ್ಳಲು ಆಗುತ್ತಿಲ್ಲ. ಪ್ರತಿ ತಿಂಗಳು ಸ್ಟೈಪಂಡ್‌ ಸಿಗಬೇಕು. ಸಂಜೆ 4.30 ಆಗುತ್ತಲೇ ಕಾಲೇಜಿಗೆ ಬೀಗ ಹಾಕುವರು. ಈ ಹಿಂದೆಯೆಲ್ಲಾ ರಾತ್ರಿ 8ರ ವರೆಗೂ ನಾವು ಕಾಲೇಜಿನಲ್ಲಿ ಇದ್ದುಕೊಂಡು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆವು. ಅದಕ್ಕೆ ಅವಕಾಶ ನೀಡಬೇಕು’ ಎಂದುಆಗ್ರಹಿಸಿದ್ದಾರೆ.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕಾಟಾಚಾರಕ್ಕೆ ಭೇಟಿ ನೀಡುತ್ತಾರೆ. ಕಾಲೇಜು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಅವರ ಮುಂದೆ ಮುಚ್ಚಿಡಲಾಗುತ್ತದೆ. 10 ರಿಂದ 12 ವರ್ಷಗಳಿಂದ ಇಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವವರನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ, ರಾಜಕೀಯ ಕಾರಣಗಳಿಂದಾಗಿ ಆಗುತ್ತಿಲ್ಲ’ ಎಂಬ ಆರೋಪವೂ ಇದೆ.

ಪುಂಡರ ಕಾಟ
ಮೈಸೂರಿನ ಹೃದಯ ಭಾಗದಲ್ಲಿದ್ದ ‘ಕಾವಾ’ ಏಳು ವರ್ಷಗಳ ಹಿಂದೆ ಬನ್ನೂರು ರಸ್ತೆಯ ಸಿದ್ಧಾರ್ಥನಗರ ಬಡಾವಣೆಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಮುಖ್ಯರಸ್ತೆಯಿಂದ ಸ್ವಲ್ಪ ಒಳಭಾಗದಲ್ಲಿರುವ ಕಾಲೇಜಿಗೆ ಕಾಲ್ನಡಿಗೆಯಲ್ಲಿ ತೆರಳುವ ವಿದ್ಯಾರ್ಥಿನಿಯರು ಪುಂಡರ ಕಾಟ ಎದುರಿಸಬೇಕು.

ಬೈಕ್‌ಗಳಲ್ಲಿ ಬರುವ ಯುವಕರು ಕೀಟಲೆ ಮಾಡುತ್ತಾರೆ ಎಂಬ ವಿದ್ಯಾರ್ಥಿನಿಯರ ದೂರಿಗೆ ಸ್ಪಂದಿಸಿರುವ ಕಾಲೇಜು, ಬೆಳಿಗ್ಗೆ ಮತ್ತು ಸಂಜೆ ವೇಳೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಇಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬುದು ವಿದ್ಯಾರ್ಥಿನಿಯರ ಬೇಡಿಕೆ.

**

ಕಾಯಂ ಬೋಧಕರ ಹುದ್ದೆ ಹಲವು ವರ್ಷಗಳಿಂದ ಖಾಲಿಯಿದೆ. ಅತಿಥಿ ಉಪನ್ಯಾಸಕರ ಮೂಲಕ ಪಾಠ ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ.
–ವಿಜಯ್‌ರಾವ್‌, ಅಕಾಡೆಮಿಕ್ ಮುಖ್ಯಸ್ಥರು, ಕಾವಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT