ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪಾರ್ವತಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ

ಆಷಾಢ ಶುಕ್ರವಾರ: ಬೆಟ್ಟದ ಗ್ರಾಮಸ್ಥರಿಗಷ್ಟೇ ದೇವಿ ದರ್ಶನ
Last Updated 23 ಜುಲೈ 2021, 13:33 IST
ಅಕ್ಷರ ಗಾತ್ರ

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರ ಬೆಟ್ಟದ ಚಾಮುಂಡೇಶ್ವರಿ ತಾಯಿ, ಪಾರ್ವತಿ ಅಲಂಕಾರದಲ್ಲಿ ಕಂಗೊಳಿಸಿದಳು.

ನಸುಕಿನ ನಾಲ್ಕು ಗಂಟೆಗೆ ಆರಂಭವಾದ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ವಿಶೇಷ ಪೂಜೆ ಬೆಳಿಗ್ಗೆ 7 ಗಂಟೆಯ ತನಕವೂ ನಡೆಯಿತು. ನಂತರ ಸ್ಥಳೀಯ ಗ್ರಾಮಸ್ಥರಿಗಷ್ಟೇ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಶಾಸಕರಾದ ಎಸ್‌.ಎ.ರಾಮದಾಸ್‌, ಜಿ.ಟಿ.ದೇವೇಗೌಡ, ಅಖಂಡ ಶ್ರೀನಿವಾಸಮೂರ್ತಿ ಸಹ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಬೆಳಿಗ್ಗೆ 8 ಗಂಟೆಗೆ ಮಹಾಮಂಗಳಾರತಿ ನಡೆಯಿತು. ದೇಗುಲದ ಪ್ರಾಂಗಣದಲ್ಲೇ ದೇವಿಯ ಉತ್ಸವ ಜರುಗಿತು. ನಂತರ ಬಾಗಿಲು ಮುಚ್ಚಲಾಯಿತು.

ಸಂಜೆ 6ರಿಂದ 7.30ರವರೆಗೂ ಅಭಿಷೇಕ, ಪಂಚಾಮೃತಾಭಿಷೇಕ, ವಿಶೇಷ ಪೂಜೆ ನಡೆದವು. ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನೆರವೇರಿಸಿದ ಬಳಿಕ ದೇಗುಲದ ಬಾಗಿಲು ಮುಚ್ಚಲಾಯಿತು ಎಂದು ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಎನ್‌.ಶಶಿಶೇಖರ ದೀಕ್ಷಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಭಕ್ತ ಸಮೂಹದಲ್ಲಿ ನಿರಾಸೆ: ಕೋವಿಡ್‌ ಹರಡುವಿಕೆ ತಡೆಗಟ್ಟಲಿಕ್ಕಾಗಿ, ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ದೇವಿಯ ದರ್ಶನ ಪಡೆಯಲಾಗದ ಅಸಂಖ್ಯಾತ ಭಕ್ತರು ನಿರಾಸೆ ಅನುಭವಿಸಿದರು.

ಬಹಳಷ್ಟು ಭಕ್ತರು ಬೆಟ್ಟದ ಪಾದದಲ್ಲೇ ದೇವಿಗೆ ನಮಿಸಿದರು. ಭಕ್ತರ ಬೆಟ್ಟ ಪ್ರವೇಶ ತಡೆಯಲಿಕ್ಕಾಗಿಯೇ ಬೆಟ್ಟದ ಪಾದ, ಉತ್ತನಹಳ್ಳಿ, ತಾವರೆಕಟ್ಟೆ ಬಳಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ಭಕ್ತರಿಲ್ಲದೆ ಚಾಮುಂಡಿಬೆಟ್ಟ ಬಿಕೋ ಎನ್ನುತಿತ್ತು.

ನಿರ್ಬಂಧ ಮುಂದುವರಿಕೆ: ಚಾಮುಂಡಿಬೆಟ್ಟಕ್ಕೆ ನಿರ್ಬಂಧ ಮುಂದುವರೆದಿದೆ. ಜುಲೈ 30ರ ಆಷಾಢ ಮಾಸದ ಮೂರನೇ ಶುಕ್ರವಾರ ಮತ್ತು ಚಾಮುಂಡೇಶ್ವರಿ ವರ್ಧಂತಿ, ಆ.6ರ ಕೊನೆ ಶುಕ್ರವಾರ ಹಾಗೂ ಆ.8ರ ಭೀಮನ ಅಮಾವಾಸ್ಯೆಯಂದು ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ.

ಆಷಾಢ ಮಾಸದ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಸಹ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಬೆಟ್ಟಕ್ಕೆ ಪ್ರವೇಶ ಇಲ್ಲ. ಅಲ್ಲದೆ, ನಿತ್ಯ ಸಂಜೆ 6 ಗಂಟೆಯ ನಂತರ ಸಾರ್ವಜನಿಕರ ಚಾಮುಂಡಿಬೆಟ್ಟ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT