ಬುಧವಾರ, ಆಗಸ್ಟ್ 4, 2021
20 °C
ಸಿಐಐಎಲ್‌ಗೆ ಭೇಟಿ ನೀಡಿ ಪರಿಶೀಲಿಸಿದ ಕಸಾಪ ಅಧ್ಯಕ್ಷ ಮನು ಬಳಿಗಾರ

ಶಾಸ್ತ್ರೀಯ ಭಾಷಾ ಕಮ್ಮಟ ಮತ್ತೆ ಆರಂಭಕ್ಕೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಹಾಗೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹಯೋಗದಲ್ಲಿ, ಶಾಸ್ತ್ರೀಯ ಭಾಷಾ ಕಮ್ಮಟವನ್ನು ಎಲ್ಲ ಜಿಲ್ಲೆಗಳಲ್ಲಿ ಮತ್ತೆ ಆರಂಭಿಸಲು ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ನಿರ್ದೇಶಕ ಪ್ರೊ.ಡಿ.ಜಿ.ರಾವ್‌ ಒಪ್ಪಿಗೆ ಸೂಚಿಸಿದ್ದಾರೆ ಎಂದು ಪರಿಷತ್‌ ಅಧ್ಯಕ್ಷ ಮನು ಬಳಿಗಾರ ತಿಳಿಸಿದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ವಾಯತ್ತತೆಗೆ ಸಂಬಂಧಿಸಿದಂತೆ ನಡೆದಿರುವ ಕಾರ್ಯಗಳ ಪರಿಶೀಲನೆಗಾಗಿ ಸಿಐಐಎಲ್‌ಗೆ ಶುಕ್ರವಾರ ಭೇಟಿ ನೀಡಿದ್ದ ಅವರು, ಡಿ.ಜಿ.ರಾವ್‌ ಅವರೊಂದಿಗೆ ಸಭೆ ನಡೆಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಪಿ.ಕೆ.ಖಂಡೋಬಾ ಅವರು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶರಾಗಿದ್ದ ಅವಧಿಯಲ್ಲಿ 15 ಜಿಲ್ಲೆಗಳಲ್ಲಿ ಶಾಸ್ತ್ರೀಯ ಭಾಷಾ ಕಮ್ಮಟಗಳನ್ನು ನಡೆಸಲಾಗಿತ್ತು. ಹೊಸ ತಲೆಮಾರು, ಹಳಗನ್ನಡ ಪಠ್ಯಗಳನ್ನು ಹೇಗೆ ಓದಬೇಕು ಎಂಬುದನ್ನು ವಿವಿಧ ವಿದ್ವಾಂಸರ ಮೂಲಕ ತರಬೇತಿ ನೀಡಲಾಗಿತ್ತು. ಆದರೆ, ಎರಡು ವರ್ಷಗಳ ಹಿಂದೆ ಈ ಕಮ್ಮಟ ನಿಂತು ಹೋಗಿತ್ತು. ಇದನ್ನು ಮತ್ತೆ ಆರಂಭಿಸಲು ಸಿಐಐಎಲ್‌ ನಿರ್ದೇಶಕರು ಒಪ್ಪಿದ್ದಾರೆ’ ಎಂದು ತಿಳಿಸಿದರು.

‘ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವಂತೆ ಪ್ರೊ.ಡಿ.ಜಿ.ರಾವ್‌ ಅವರು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಿದ್ದಾರೆ. ಶಾಸ್ತ್ರೀಯ ತೆಲುಗು, ಮಳಯಾಳಂ, ಒರಿಯಾ ಭಾಷೆಗೆ ಹೋಲಿಸಿದರೆ ಕನ್ನಡಕ್ಕೆ ಸಂಬಂಧಿಸಿದ ಕೆಲಸಗಳು ಚೆನ್ನಾಗಿ ನಡೆದಿವೆ. ಕಿಟೆಲ್‌ ಕೋಶವನ್ನು ಡಿಜಿಟಲೀಕರಣ ಮಾಡಿ ಅದನ್ನು ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಕೆಲ ಹಳಗನ್ನಡ ಪಠ್ಯಗಳನ್ನು ತಮಿಳು, ತೆಲುಗು ಮತ್ತು ಇಂಗ್ಲಿಷ್‌ಗೆ ಭಾಷಾಂತರಿಸುವ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಸಭೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್‌ ಪ್ರೊ.ಎನ್‌.ಎಂ.ತಳವಾರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಭಾಗಿಯಾಗಿದ್ದಾಗಿ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.