ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ದರ ವಿಧಿಸಿದರೆ ಅಂಗಡಿ ಮುಚ್ಚಿಸಿ

ಅಧಿಕಾರಿಗಳೊಂದಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಸಭೆ l ರಸಗೊಬ್ಬರ, ಬಿತ್ತನೆ ಬೀಜದ ಬಗ್ಗೆ ಮಾಹಿತಿ
Last Updated 17 ಜೂನ್ 2021, 5:42 IST
ಅಕ್ಷರ ಗಾತ್ರ

ಮೈಸೂರು: ‘ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸರಿಯಾದ ಬೆಲೆಯಲ್ಲಿ ನಿಗದಿತ ಸಮಯಕ್ಕೆ ಸಿಗಬೇಕು. ಕೃತಕವಾಗಿ ಅಭಾವ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಅಂಥ ಅಂಗಡಿ ಮುಚ್ಚಿಸಿ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆಯಲ್ಲಿ ಹಾಗೂ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯಾವ ದರದಲ್ಲಿ ಮಾರಾಟವಾಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಕೆಲವೆಡೆ ಅಧಿಕ ಬೆಲೆ ವಿಧಿಸುತ್ತಿರುವ ದೂರುಗಳು ಬರುತ್ತಿವೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ಪರವಾನಗಿಯನ್ನು ಅಮಾನತು ಮಾಡಿ ಕಾನೂನು ಕ್ರಮ ಜರುಗಿಸಿ. ಈ ಋತು
ವಿನಲ್ಲಿ ಮತ್ತೆ ಮಾರಾಟಕ್ಕೆ ಅವಕಾಶ ಕೊಡಬೇಡಿ. ನಕಲಿ ಹಾಗೂ ಗುಣಮಟ್ಟ ಕಾಯ್ದುಕೊಳ್ಳದ ಮಾರಾಟಗಾರರ ವಿರುದ್ಧವೂ ಪ್ರಕರಣ ದಾಖಲಿಸಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ, ಸಾಕಷ್ಟು ದಾಸ್ತಾನು ಇದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದೀರಿ. ಆದರೆ, ಮಾಧ್ಯಮಗಳಲ್ಲಿ ಏಕೆ ಕೊರತೆ ಬಗ್ಗೆ ಸುದ್ದಿಯಾಗುತ್ತಿದೆ. ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಸಗೊಬ್ಬರ ಖರೀದಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಿದೆ. ಹೀಗಾಗಿ, ರೈತರಿಗೆ ₹ 1,200ಕ್ಕೆ ರಸಗೊಬ್ಬರ ಮಾರಲಾಗುತ್ತಿದೆ ಎಂದು ತಿಳಿಸಿದರು.

2021–22ನೇ ಸಾಲಿನಲ್ಲಿ ರೈತರಿಗೆ 30,277 ಟಾರ್ಪಲಿನ್‌ ವಿತರಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ಕೇವಲ 5,137 ಟಾರ್ಪಲಿನ್‌ ನೀಡಲಾಗಿತ್ತು ಎಂದು ಹೇಳಿದರು.

‘ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಉತ್ಪಾದನೆ ಹೆಚ್ಚಿಸಲು ರೈತರಿಗೆ ತೊಗರಿ, ಹೆಸರು, ಶೇಂಗಾ, ಅವರೆ ಬಿತ್ತನೆ ಬೀಜಗಳ ಮಿನಿಕಿಟ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ವಿಪರ್ಯಾಸವೆಂದರೆ ಕೆಲ ಅಧಿಕಾರಿಗಳಿಗೇಈ ಬಗ್ಗೆ ಮಾಹಿತಿ ಇಲ್ಲ. ಮೈಸೂರಿಗೆ 8 ಸಾವಿರ ಕಿಟ್‌ ನೀಡಲಾಗುತ್ತಿದೆ. ಬಹುಧಾನ್ಯ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ’ ಎಂದು ವಿವರಿಸಿದರು.

ರಾಗಿ ಬೆಂಬಲ ಬೆಲೆ ನೀಡಲು ವಿಳಂಬವಾಗುತ್ತಿರುವುದಕ್ಕೆ, ‘18,011 ರೈತರಿಗೆ ನೀಡಬೇಕಿದ್ದು, ಈಗಾಗಲೇ ₹ 250 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನು ₹ 131 ಕೋಟಿ ಬಾಕಿ ಇದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಶಾಸಕ ಅನಿಲ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೇಶ್‌ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

ಜಿಲ್ಲೆಯಲ್ಲಿ ಶೇ 49ರಷ್ಟು ಬಿತ್ತನೆ: ‘ಈ ಬಾರಿ ಮೈಸೂರು ಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ. ಮೈಸೂರು ಜಿಲ್ಲೆಯಲ್ಲಿ ಏ.1ರಿಂದ ಜೂನ್‌ 15ರವರೆಗಿನ ಅವಧಿಯಲ್ಲಿ 251.5 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಈ ವರ್ಷ 212.4 ಮಿ.ಮೀ ಮಳೆಯಾಗಿದೆ. ಶೇ 16ರಷ್ಟು ಅಂದರೆ 39.1 ಮಿ.ಮೀ ಕೊರತೆಯಾಗಿದೆ. ಈ ವರ್ಷ 3.95 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಈವರೆಗೆ 1.95 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ, ಶೇ 49 ರಷ್ಟು ಬಿತ್ತನೆಯಾಗಿದೆ’ ಎಂದು ಬಿ.ಸಿ.ಪಾಟೀಲ ಮಾಹಿತಿ ನೀಡಿದರು.

‘ಮೈಸೂರು ಜಿಲ್ಲೆಯಲ್ಲಿ 39,798 ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಸದ್ಯ 45,275 ಕ್ಚಿಂಟಲ್‌ ಲಭ್ಯವಿದೆ. ಇದುವರೆಗೆ 1,821 ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 727.5 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಇದೆ’ ಎಂದು ವಿವರಿಸಿದರು.

‘ಡಿಎಪಿ, ಎಂಒಪಿ, ಕಾಂಪ್ಲೆಕ್ಸ್‌, ಯೂರಿಯಾ ಸೇರಿ 42,142 ಕ್ವಿಂಟಲ್‌ ರಸಗೊಬ್ಬರಕ್ಕೆ ಬೇಡಿಕೆ ಇದೆ. 44,209 ಕ್ವಿಂಟಲ್‌ ದಾಸ್ತಾನು ಮಾಡಲಾಗಿತ್ತು. 26,459 ಕ್ವಿಂಟಲ್‌ ಮಾರಾಟವಾಗಿದೆ. ಇನ್ನು 17,749 ಕ್ವಿಂಟಲ್‌ ದಾಸ್ತಾನು ಇದೆ’ ಎಂದರು.

79 ನೋಟಿಸ್‌; 4 ಅಂಗಡಿ ರದ್ದು: ಜಿಲ್ಲೆಯಲ್ಲಿ ರಸಗೊಬ್ಬರ, ಕೀಟ ನಾಶಕ ಹಾಗೂ ಬಿತ್ತನೆ ಬೀಜಕ್ಕೆ ಅಧಿಕ ದರ ವಿಧಿಸುವುದು, ಕೃತಕ ಅಭಾವ ಸೃಷ್ಟಿಸುವುದು ಹಾಗೂ ಗುಣಮಟ್ಟ ಕಾಯ್ದುಕೊಳ್ಳದ ಸಂಬಂಧ 2021–22ನೇ ಸಾಲಿನಲ್ಲಿ 79 ಅಂಗಡಿಗಳಿಗೆ ನೋಟಿಸ್‌ ನೀಡಿ, 4 ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಹಾಂತೇಶಪ್ಪ ತಿಳಿಸಿದರು.

’₹ 3.94 ಕೋಟಿ ಮೌಲ್ಯದ 1,101 ಕ್ವಿಂಟಲ್‌ ಬಿತ್ತನೆ ಬೀಜ, ₹ 21.90 ಲಕ್ಷ ಮೌಲ್ಯದ 960 ಕ್ವಿಂಟಲ್ ರಸಗೊಬ್ಬರ ಹಾಗೂ ₹ 7.74 ಲಕ್ಷ ಮೌಲ್ಯದ 479 ಲೀ.ಕೀಟ ನಾಶಕವನ್ನು ವಿವಿಧೆಡೆ ಜಪ್ತಿ ಮಾಡಲಾಗಿದೆ. ಕಳೆದ ವರ್ಷ 69 ಮೊಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿದೆ’ ಎಂದರು.

ಕಪ್ಪು ಪಟ್ಟಿಗೆ ಸೇರಿಸಿ: ‘ರೈತರಿಗೆ ನೀಡುತ್ತಿರುವ ಕೃಷಿ ಯಂತ್ರೋಪಕರಣಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬು ದೂರುಗಳಿವೆ. ಕೆಲ ಸಂಸ್ಥೆಗಳು ಕಳಪೆ ಯಂತ್ರೋಪಕರಣಗಳನ್ನು ಪೂರೈಸುತ್ತಿರುವುದು ಗೊತ್ತಾಗಿದೆ. ಅಂಥ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿ’ ಎಂದು ಸಚಿವರು ಸೂಚನೆ ನೀಡಿದರು.

ರೈತರಿಂದಲೇ ಬೆಳೆ ಸಮೀಕ್ಷೆ: ಈ ಬಾರಿ ಮುಂಗಾರು ಹಂಗಾಮಿನಲ್ಲೂ ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವರು ಹೇಳಿದರು.

2.10 ಕೋಟಿ ಪ್ಲಾಟ್‌ಗಳಲ್ಲಿ ಕಳೆದ ಬಾರಿ 46 ಲಕ್ಷ ರೈತರು ಬೆಳೆ ಮಾಹಿತಿಯನ್ನು ಆ್ಯಪ್‌ ಮೂಲಕ ಮೊಬೈಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಈ ಬಾರಿ 1.5 ಕೋಟಿ ದಾಟುವ ಗುರಿ ಇಟ್ಟುಕೊಳ್ಳಲಾಗಿದೆ. ನಮ್ಮ ಈ ಯೋಜನೆಗೆ ಕೇಂದ್ರದಿಂದಲೂ ಮೆಚ್ಚುಗೆ ಲಭಿಸಿದ್ದು, ಬೇರೆ ರಾಜ್ಯಗಳಲ್ಲೂ ಪ್ರಯೋಗ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT