ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ, ರಾಜಕಾಲುವೆ ಸಮೀಕ್ಷೆ ನಡೆಸಿ ಪುನರ್ವಸತಿ ಕಲ್ಪಿಸಿ: ಸಿ.ಎಂ ಬೊಮ್ಮಾಯಿ

Last Updated 6 ಅಕ್ಟೋಬರ್ 2021, 14:45 IST
ಅಕ್ಷರ ಗಾತ್ರ

ಮೈಸೂರು: ‘ಬೆಂಗಳೂರಿನಲ್ಲಿ ಮಳೆ ಬಂದಾಗ ಪದೇಪದೇ ಸಮಸ್ಯೆ ಉಂಟಾಗುತ್ತಿದ್ದು ಎಲ್ಲೆಲ್ಲಿ ರಾಜಕಾಲುವೆ, ಕೆರೆ ಒತ್ತುವರಿಯಾಗಿದೆ ಎಂಬುದರ ಸಮೀಕ್ಷೆ ನಡೆಸಿ ಆ ಜಾಗದಲ್ಲಿರುವ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಸೂಚಿಸಿರುವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬುಧವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಳೆ ಬಂದಾಗ ತಗ್ಗು ಪ್ರದೇಶಗಳು ಜಲಾವೃತವಾಗುತ್ತವೆ. ಕೆರೆಯ ಆವರಣದಲ್ಲಿರುವ ಬಡಾವಣೆಗಳಿಗೆ, ರಾಜಕಾಲುವೆ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿದೆ. ಎಲ್ಲಿ ಹೆಚ್ಚು ಸಮಸ್ಯೆ ಇದೆ ಎಂಬುದನ್ನು ಗುರುತಿಸುತ್ತಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.

‘ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾಮಗಾರಿ ಸಂಬಂಧ ಕಾರ್ಯಪಡೆ ರಚಿಸಲಾಗಿದೆ. ಒಂದೇ ರಸ್ತೆಯಲ್ಲಿ ಎಷ್ಟು ಬಾರಿ ಕಾಮಗಾರಿ ನಡೆದಿದೆ, ಯಾರು ಆ ಕಾಮಗಾರಿ ನಡೆಸಿದ್ದು ಹಾಗೂ ಅದರ ಗುಣಮಟ್ಟ ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದೇನೆ. ಕಳಪೆಯಾಗಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮಳೆ ನಿಂತು ಮೇಲೆ ವೈಜ್ಞಾನಿಕವಾಗಿ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳಿಸಲಾಗುವುದು. ಪರಿಹಾರ ಕಾರ್ಯಕ್ಕೂ ಸೂಚಿಸಿದ್ದೇನೆ’ ಎಂದು ಹೇಳಿದರು.

ದಸರೆ ಕುರಿತು ಪ್ರತಿಕ್ರಿಯಿಸಿ, ‘ನಾಡಹಬ್ಬ ಆಚರಿಸಲು ಒಬ್ಬ ನಾಗರಿಕನಿಗೆ ಎಷ್ಟು ಖುಷಿಯಾಗಿದೆಯೋ ಅಷ್ಟೇ ಖುಷಿ ನನಗೆ. ಚಾಮುಂಡೇಶ್ವರಿ ಕೃಪೆಯಿಂದ ಈ ಬಾರಿ ದಸರೆ ಮುನ್ನಡೆಸುವ ಅವಕಾಶ ಸಿಕ್ಕಿದೆ. ನಾಡಿನಲ್ಲಿ ಉತ್ತಮ ಮಳೆಯಾಗಿ, ಬೆಳೆ ಚೆನ್ನಾಗಿ ಬಂದು ಜನರಿಗೆ ಒಳ್ಳೆಯದಾಗಲಿ ಎಂಬುದಾಗಿ ಬೇಡಿಕೊಳ್ಳುತ್ತೇನೆ’ ಎಂದರು.

‘ಕೋವಿಡ್‌ ಸಂದರ್ಭದಲ್ಲೂ ದಸರೆಯ ವಿಧಿವಿಧಾನ ಮುಂದುವರಿದಿದೆ. ಆದರೆ, ಜನರು ಪಾಲ್ಗೊಳ್ಳದೆ ನಾಡಹಬ್ಬ ಸಂಪೂರ್ಣವಾಗಲಾರದು. ಹೀಗಾಗಿ, ಸಾರ್ವಜನಿಕರು ದೊಡ್ಡಪ್ರಮಾಣದಲ್ಲಿ ಬರಬೇಕೆಂಬುದು ನಮ್ಮ ಮನಸ್ಸಿನಲ್ಲೂ ಇದೆ. ಆ ದಿನಗಳು ಬರಲಿವೆ’ ಎಂದು ಆಶಿಸಿದರು.

ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದ ದೇಗುಲ ಪುನರ್‌ ನಿರ್ಮಾಣ ಸಂಬಂಧ ಪ್ರತಿಕ್ರಿಯಿಸಿ, ‘ಕೆಲ ನಿಯಮ ರೂಪಿಸಬೇಕಿದೆ. ಆ ಬಳಿಕ ಶಂಕುಸ್ಥಾಪನೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT