ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಮೈಸೂರು: ಗೌರಿ–ಗಣೇಶ ಮೂರ್ತಿ ಖರೀದಿ ನೀರಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಗೌರಿ–ಗಣಪನ ಮೂರ್ತಿಗಳ ಮಾರಾಟಗಾರರ ಮೇಲೆ ಕವಿದಿರುವ ಕೋವಿಡ್‌ ಕಾರ್ಮೋಡ ಇನ್ನೂ ಮರೆಗೆ ಸರಿದಿಲ್ಲ. ಹಬ್ಬದ ಆಚರಣೆಗೆ ಜಿಲ್ಲಾಡಳಿತ ಕೆಲ ನಿರ್ಬಂಧ ಹೇರಿರುವುದರಿಂದ ಈ ಬಾರಿಯೂ ವ್ಯಾಪಾರ ನೀರಸವಾಗಿದೆ. ವ್ಯಾಪಾರಿಗಳು ಗ್ರಾಹಕರ ನಿರೀಕ್ಷೆಯಲ್ಲಿದ್ದಾರೆ.

ಗಣೇಶ ಚತುರ್ಥಿಗೂ ಮೂರು ದಿನಗಳ ಮುನ್ನ ಗೌರಿ–ಗಣಪನ ಮೂರ್ತಿಗಳ ಖರೀದಿ ಆರಂಭವಾಗುತ್ತದೆ. ನಗರದ ಗಾಂಧಿ ಚೌಕ, ಒಲಂಪಿಯ ಚಿತ್ರಮಂದಿರದ ಬಳಿ, ಕುಂಬಾರಗೇರಿ, ಅಗ್ರಹಾರ, ವಿದ್ಯಾರಣ್ಯಪುರಂ,  ಹೆಬ್ಬಾಳ, ಕುಂಬಾರಕೊಪ್ಪಲು, ದಟ್ಟಗಳ್ಳಿ ಸೇರಿದಂತೆ ನಗರದ ಹಲವೆಡೆ ಬುಧವಾರ ಮೂರ್ತಿಗಳ ಖರೀದಿ ನೀರಸವಾಗಿತ್ತು.

ಈ ಬಾರಿ ಮೂರ್ತಿಗಳ ದರ ಹೆಚ್ಚಾಗಿಲ್ಲ. ಕೆಲ ವ್ಯಾಪಾರಿಗಳು ಶೇ 5ರಷ್ಟು ಬೆಲೆ ಏರಿಸಿದ್ದರೂ, ಗ್ರಾಹಕರ ಕೊರತೆಯಿಂದಾಗಿ ಕಡಿಮೆ ದರಕ್ಕೇ ಮಾರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬುಧವಾರ ಬೆಳಿಗ್ಗೆಯಿಂದ ಎಲ್ಲೆಡೆ ಮೂರ್ತಿಗಳ ಮಾರಾಟಕ್ಕೆ ವರ್ತಕರು ಅಣಿಯಾಗಿದ್ದರು. 4 ಅಡಿವರೆಗಿನ ಮೂರ್ತಿಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೂ, ಬಹುತೇಕ ವ್ಯಾಪಾರಿಗಳು 2 ಅಡಿವರೆಗಿನ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದರು. ಗಾಂಧಿ ಚೌಕದ ಹನುಮಂತರಾವ್‌ ರಸ್ತೆಯಲ್ಲಿ 10ಕ್ಕೂ ಹೆಚ್ಚಿನ ವರ್ತಕರು ಕಂಡರು. ಆದರೆ, ಗ್ರಾಹಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.

ಮೂರ್ತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಪ್ರಸಿದ್ಧಿ ಪಡೆದಿರುವ ಕುಂಬಾರಗೇರಿಯಲ್ಲಿ ಅನೇಕ  ಮನೆಗಳ ಎದುರು, ಗಲ್ಲಿಗಳಲ್ಲಿ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಆದರೆ, ಅಲ್ಲಿಯೂ ಗ್ರಾಹಕರು ಕಡಿಮೆ ಇದ್ದರು.

ಕುಂಬಾರಗೇರಿ 3ನೇ ಅಡ್ಡರಸ್ತೆಯ ನಿವಾಸಿ ಗಾಯತ್ರಿ, ‘ಈ ವರ್ಷ 3 ಇಂಚಿನಿಂದ 1.5 ಅಡಿವರೆಗೂ ಸುಮಾರು 2 ಸಾವಿರ ಮೂರ್ತಿಗಳನ್ನು ತಯಾರಿಸಿದ್ದೇವೆ. ಸಗಟು ವ್ಯಾಪಾರವೂ ಕಡಿಮೆಯಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕುಂಬಾರಗೇರಿಯ ಭಾರತಿ ಈ ಬಾರಿ ಸಗಟು ವ್ಯಾಪಾರವನ್ನೇ ನಿಲ್ಲಿಸಿದ್ದಾರೆ. ಪ್ರತಿ ವರ್ಷ 1 ಸಾವಿರ ಮೂರ್ತಿಗಳನ್ನು ತಯಾರಿಸುತ್ತಿದ್ದವರು ಈ ಬಾರಿ 300 ಮೂರ್ತಿಗಳನ್ನು ತಯಾರಿಸಿದ್ದು, ಮನೆ ಮುಂದೆಯೇ ಮಾರಾಟಕ್ಕೆ ಇಟ್ಟಿದ್ದಾರೆ.

ಹನುಮಂತರಾವ್‌ ರಸ್ತೆಯಲ್ಲಿ ಮೂರ್ತಿಗಳ ಮಾರಾಟದಲ್ಲಿ ತೊಡಗಿದ್ದ ಕುಂಬಾರಕೊಪ್ಪಲಿನ ರಾಜಶ್ರೀ, ಶ್ರೀನಿವಾಸ್‌, ಹೆಬ್ಬಾಳದ ಆರ್‌.ಕುಮಾರ್‌, ರಾಮಸ್ವಾಮಿ ವೃತ್ತದ ವಿನಯ್‌ ಅವರು ಗುರುವಾರ, ಶುಕ್ರವಾರ ವಹಿವಾಟು ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಮನೆಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರು ಮಾತ್ರ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಮೂರ್ತಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ‘ಹಬ್ಬದ ಆಚರಣೆ ಸಾಧಾರಣವಾಗಿದೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಕೋವಿಡ್‌ನಿಂದಾಗಿ ಅದ್ಧೂರಿ ಆಚರಣೆ ಮಾಡುತ್ತಿಲ್ಲ’ ಎಂದು ವಸಂತನಗರದ ನಾಗರಾಜ್‌ ತಿಳಿಸಿದರು.

***

ಮೂರ್ತಿಗಳನ್ನು ನಾವೇ ತಯಾರಿಸಿ ಮಾರಾಟಕ್ಕೆ ಇಟ್ಟಿದ್ದೇವೆ. ನಿರೀಕ್ಷಿತ ಮಟ್ಟದಲ್ಲಿ ಖರೀದಿ ನಡೆದಿಲ್ಲ.

–ತನುಜಾ, ಕುಂಬಾರಕೊಪ್ಪಲು

***

ಯರಗನಹಳ್ಳಿಯಿಂದ ಮೂರ್ತಿಗಳನ್ನು ತಂದಿದ್ದೇವೆ. ಕೋವಿಡ್‌ನಿಂದಾಗಿ ಖರೀದಿ ಕಡಿಮೆಯಾಗಿದೆ.

–ವಿನಯ್‌, ಗಣೇಶ ಮೂರ್ತಿ ವ್ಯಾಪಾರಿ

***

ಬೆಂಗಳೂರಿನಿಂದ ಮೂರ್ತಿಗಳನ್ನು ತಂದಿದ್ದೇನೆ. ಮಧ್ಯಾಹ್ನವಾದರೂ ಖರೀದಿಯೇ ನಡೆದಿಲ್ಲ.

–ವೇಣುಗೋಪಾಲ್‌, ಕುವೆಂಪುನಗರ

***

ಗೌರಿ ಹಬ್ಬ ಆಚರಿಸುವುದರಿಂದ ಗೌರಿ ಮೂರ್ತಿ ಖರೀದಿಗೆ ಬಂದಿದ್ದೇನೆ. ಹಬ್ಬ ಜೋರಾಗಿದೆ.

–ಗಾಯತ್ರಿ, ಹೆಬ್ಬಾಳ

***

ಮನೆಯಲ್ಲಿ 2 ಅಡಿ ಗಣಪತಿ ಪ್ರತಿಷ್ಠಾಪಿಸಲಿದ್ದು, ಒಳ್ಳೆಯ ಮೂರ್ತಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಮುಂಗಡ ನೀಡಿ ಗುರುವಾರ ಖರೀದಿಸುತ್ತೇವೆ.

–ಸರಸ್ವತಿ, ಲಷ್ಕರ್‌ ಮೊಹಲ್ಲಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು