ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಗಜಮುಖನಿಗೂ ‘ಕೋವಿಡ್’ ಮರ್ಮಾಘಾತ

ಸಂಪ್ರದಾಯ ಪಾಲನೆಗಷ್ಟೇ ಗೌರಿ–ಗಣೇಶ; ಸಂಭ್ರಮಕ್ಕಿಲ್ಲ ಅವಕಾಶ
Last Updated 17 ಆಗಸ್ಟ್ 2020, 5:16 IST
ಅಕ್ಷರ ಗಾತ್ರ

ಮೈಸೂರು: ಗೌರಿ–ಗಣೇಶೋತ್ಸವಕ್ಕೆ ಬೆರಳೆಣಿಕೆ ದಿನವಷ್ಟೇ ಬಾಕಿಯಿದೆ. ಈ ವೇಳೆಗೆ ಎತ್ತ ನೋಡಿದರೂ ರಾರಾಜಿಸುತ್ತಿದ್ದ ಹಬ್ಬದ ಸಡಗರ–ಸಂಭ್ರಮ ಈ ಬಾರಿ ಗೋಚರಿಸದಾಗಿದೆ.

ಕೋವಿಡ್–19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲಿಕ್ಕಾಗಿ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವನ್ನೇ ನೀಡಿಲ್ಲ. ಮನೆ–ದೇಗುಲಗಳಲ್ಲಿ ಸಂಪ್ರದಾಯ ಬದ್ಧವಾಗಿ ಗೌರಿ–ಗಣೇಶ ಪ್ರತಿಷ್ಠಾಪನೆ, ವ್ರತಾಚರಣೆಗೆ ಅವಕಾಶ ನೀಡಿದ್ದು, ಹಬ್ಬದ ಸಡಗರ–ಸಂಭ್ರಮವನ್ನೇ ಕಸಿದಿದೆ. ಇದರ ಜೊತೆಗೆ ಯುವ ಸಮುದಾಯದಲ್ಲೂ ನಿರಾಸೆಯ ಕಾರ್ಮೋಡ ಕವಿದಿದೆ.

ಬೀದಿ ಬೀದಿ, ಗಲ್ಲಿ ಗಲ್ಲಿಯಲ್ಲಿ, ರಸ್ತೆ ಬದಿ ನಡೆಯುತ್ತಿದ್ದ ಗಣಪ ಮೂರ್ತಿಗಳ ವಹಿವಾಟಿನ ಅಬ್ಬರ ಇದೀಗ ಎಲ್ಲಿಯೂ ಕಂಡು ಬರುತ್ತಿಲ್ಲ. ಮೈಸೂರಿನ ಕುಂಬಾರಗೇರಿಯ ಮನೆಗಳಲ್ಲಿ ಮಾತ್ರ ವಹಿವಾಟು ನಡೆದಿದೆ.

ಶೇ 20ರಷ್ಟು ತಯಾರಿಕೆ: ‘ಮೈಸೂರಿನ ಕುಂಬಾರಗೇರಿಯಲ್ಲಿ ಪ್ರತಿ ವರ್ಷವೂ ಲಕ್ಷಕ್ಕೂ ಹೆಚ್ಚು ಗೌರಿ–ಗಣೇಶ ಮೂರ್ತಿಗಳು ತಯಾರಾಗುತ್ತವೆ. ಆದರೆ, ಈ ಬಾರಿ ಇವುಗಳ ಸಂಖ್ಯೆ 20 ಸಾವಿರವೂ ದಾಟಿಲ್ಲ’ ಎನ್ನುತ್ತಾರೆ ಗಣಪತಿ ತಯಾರಕ ಎಸ್.ರಾಘವೇಂದ್ರ.

‘ನಾವು ತಯಾರಿಸೋದು ಪರಿಸರ ಸ್ನೇಹಿ ಜೇಡಿಮಣ್ಣಿನ ಗಣಪ. ಈ ವರ್ಷ ಕೊರೊನಾ ವೈರಸ್ ಸೋಂಕಿನ ಅಬ್ಬರವೇ ಹೆಚ್ಚಿದೆ. ಜನರು ಒಂದೆಡೆ ಸೇರುವಂತಿಲ್ಲ. ಮನೆಯಲ್ಲಿ ಪ್ರತಿಷ್ಠಾಪಿಸೋ ಗಣಪನನ್ನು ಬಾವಿ, ಕೆರೆಗಳಲ್ಲಿ ವಿಸರ್ಜಿಸುವಂತಿಲ್ಲ. ಇಂಥ ಹೊತ್ತಲ್ಲಿ ಗಣೇಶನನ್ನು ಖರೀದಿಸೋರು ಯಾರು? ಖರೀದಿಸಿದರೂ ವರ್ಷವಿಡೀ ಮನೆಯಲ್ಲಿಟ್ಟು ಮಣ್ಣಿನ ವಿಗ್ರಹ ಪೂಜಿಸಲು ಸಾಧ್ಯವೇ? ಮೊದಲೇ ಇದು ನಮ್ಮ ಅರಿವಿಗೆ ಬಂದಿದ್ದರಿಂದ ಈ ಬಾರಿ ನಾವು ಹೆಚ್ಚಿನ ಗಣಪನ ಮೂರ್ತಿಗಳನ್ನು ತಯಾರಿಸಲು ಮುಂದಾಗಲಿಲ್ಲ’ ಎಂದು ಅವರು ಹೇಳಿದರು.

‘ಪ್ರತಿ ವರ್ಷವೂ ಇಲ್ಲಿನ ಪ್ರತಿಯೊಂದು ಮನೆಯಲ್ಲಿ ನಾಲ್ಕೈದು ಸಾವಿರ ಗೌರಿ–ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಈ ವೇಳೆಗೆ ಅರ್ಧಕ್ಕರ್ಧ ಖಾಲಿಯಾಗಿರುತ್ತಿದ್ದವು. ಆದರೆ, ಈ ಬಾರಿ ಯಾರೊಬ್ಬರೂ 1 ಸಾವಿರ ಮೂರ್ತಿ ಮಾಡಿಲ್ಲ. ನಾನೇ ಎಲ್ಲ ಸೈಜ್‌ ಸೇರಿ 800 ಮಾಡಿರುವೆ. 20 ಮೂರ್ತಿ ಮಾರಾಟವಾಗಿವೆಯಷ್ಟೇ’ ಎಂದು ರಾಘವೇಂದ್ರ ತಿಳಿಸಿದರು.

ಗಣಪ‍ನೇ ಕಾಪಾಡಬೇಕು: ‘ಕುಂಬಾರಗೇರಿಯಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಗಣಪ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದೆವು. ಪ್ರತಿ ವರ್ಷವೂ ಪಿಒಪಿ, ಪೇಪರ್ ಪಲ್ಪ್ ಗಣಪತಿಗಳು ನಮಗೆ ಹೊಡೆತ ನೀಡುತ್ತಿದ್ದವು. ಆದರೆ, ಈ ಬಾರಿ ಕೊರೊನಾ ಸೋಂಕು ಮರ್ಮಾಘಾತ ನೀಡಿದೆ’ ಎಂದು ಗಣಪತಿ ತಯಾರಕರಾದ ಗೀತಾ, ಡಿ.ರೇವಣ್ಣ ಹೇಳಿದರು.

‘ನಮ್ಮ ಕುಟುಂಬದ ವರ್ಷದ ಬದುಕು ಈ ವಹಿವಾಟನ್ನೇ ಆಧರಿಸಿತ್ತು. ಆದರೆ, ಈ ಬಾರಿ ಎಲ್ಲವೂ ಉಲ್ಟಾ ಆಗಿದೆ. ಉಳಿಯೋ ಗಣಪನ ಮೂರ್ತಿಗಳನ್ನು ವರ್ಷವಿಡೀ ಕಾಪಿಡಬೇಕಿದೆ. ನಮ್ಮ ಸಂಕಷ್ಟ ಕೇಳೋರೇ ಇಲ್ಲವಾಗಿದ್ದಾರೆ. ಆ ಗಣ ನಾಯಕನೇ ನಮ್ಮನ್ನು ಕಾಪಾಡಬೇಕು’ ಎಂದು ಆಗಸದತ್ತ ತಮ್ಮ ಚಿತ್ತ ಹರಿಸಿದರು.

ಅರಿಶಿಣ ಗಣಪ ಅಭಿಯಾನ

‘ಮನೆಯಲ್ಲೇ ಅರಿಶಿಣ ಗಣೇಶ ತಯಾರಿಸಿ. ನಮ್ಮ ಕೆಎಸ್‌ಪಿಸಿಬಿ ಫೇಸ್‌ಬುಕ್‌ ಪುಟಕ್ಕೆ ಪೋಸ್ಟ್‌ ಮಾಡಿ’ (www.facebook.com/kspcboffical) ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಯಾನವೊಂದನ್ನು ಆರಂಭಿಸಿದೆ.

ಮೈಸೂರಿನ ಸ್ಪಂದನ ಸಂಸ್ಥೆಯೂ ಅರಿಶಿಣ ಗಣಪ ಅಭಿಯಾನ ಹಮ್ಮಿಕೊಂಡಿದೆ. ಮನೆಯಲ್ಲೇ ತಯಾರಿಸಿದ ಅರಿಶಿಣ ಗಣಪನಿಗೆ ಅಲಂಕಾರ ಮಾಡಿದ ಒಂದು ಚೆಂದದ ಫೋಟೊವನ್ನು 9740000708 ವಾಟ್ಸ್‌ ಆ್ಯಪ್ ಮಾಡುವಂತೆ ಕೋರಿದೆ.

ಆಯ್ಕೆಯಾದ ಅತ್ಯುತ್ತಮ ಫೋಟೊಗೆ ಬಹುಮಾನ ಮತ್ತು ಸ್ಪಂದನ ವತಿಯಿಂದ ಪ್ರಸಂಶಾ ಪತ್ರವನ್ನು ಸೆ.10ರೊಳಗೆ ನಿಮ್ಮ
ಮನೆಯ ವಿಳಾಸಕ್ಕೆ ಕಳುಹಿಸಿ ಪುರಸ್ಕರಿಸಲಾಗುವುದು. ಆ.22ರಿಂದ 28ರೊಳಗೆ ಫೋಟೊ ಕಳುಹಿಸಿ ಎಂದು ಸ್ಪಂದನ ಅಧ್ಯಕ್ಷ ಎಂ.ಜಯಶಂಕರ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT