ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ಡಿ.ಕೋಟೆ: ಹತ್ತಿಗೆ ಬಂಪರ್‌ ಬೆಲೆ; ರೈತರ ಹರ್ಷ

ತಾಲ್ಲೂಕಿನಲ್ಲಿ ಹತ್ತಿ ಬೆಳೆ ಪ್ರಮಾಣ ಕಡಿಮೆ; ಡಿಸಿಎಚ್‌, ಬನ್ನಿ ತಳಿ ಹತ್ತಿಗೆ ಉತ್ತಮ ಬೆಲೆ
Last Updated 9 ಅಕ್ಟೋಬರ್ 2021, 5:58 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಈ ಬಾರಿ ಹತ್ತಿ ಬೆಳೆಗೆ ಬಂಪರ್‌ ಬೆಲೆ ಸಿಕ್ಕಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಹತ್ತಿ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದ್ದು, ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ ಹತ್ತಿ ₹16,061ಕ್ಕೆ ಮಾರಾಟವಾಗಿದೆ. ಇದು ಈವರೆಗಿನ ಸಾರ್ವಕಾಲಿಕ ದಾಖಲೆಯ ದರವಾಗಿದೆ.

ಡಿಸಿಎಚ್‌ ಮತ್ತು ಬನ್ನಿ ತಳಿಯ ಹತ್ತಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ಹರ್ಷಗೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಹತ್ತಿಯನ್ನು ತಾಲ್ಲೂಕಿನಲ್ಲಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಕಡಿಮೆ ಪ್ರಮಾಣದಲ್ಲಿ ಹತ್ತಿಯನ್ನು ಬೆಳೆದಿದ್ದು, ಮುಸುಕಿನಜೋಳ ಮತ್ತು ತರಕಾರಿ ಬೆಳೆಗಳತ್ತ ರೈತರು ಮುಖ ಮಾಡಿದ್ದಾರೆ.

ತಾಲ್ಲೂಕಿನಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವ ಗುರಿ ಇತ್ತು. ಆದರೆ, ಈ ಬಾರಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ತಾಲ್ಲೂಕಿನಾದ್ಯಂತ ಒಂದು ತಿಂಗಳು ತಡವಾಗಿ ಮಳೆ ಬಂದ ಕಾರಣದಿಂದ ಹೆಚ್ಚು ರೈತರು ಹತ್ತಿ ಬಿತ್ತನೆ ಮಾಡಲು ಸಾಧ್ಯವಾಗಿರಲಿಲ್ಲ.

ಖರೀದಿದಾರರು ತಾಲ್ಲೂಕಿನ ಹ್ಯಾಂಡ್‌ ಪೋಸ್ಟ್‌ನಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ, ರೈತರ ಜಮೀನು ಮತ್ತು ಮನೆಗಳಿಗೆ ತೆರಳಿ ಹತ್ತಿ ಖರೀದಿಸುತ್ತಿದ್ದಾರೆ. ಡಿಸಿಎಚ್‌ ತಳಿಗೆ ಪ್ರತಿ ಕ್ವಿಂಟಲ್‌ಗೆ ₹13 ಸಾವಿರ ಮತ್ತು ಆರ್.ಸಿ.ಎಚ್ ತಳಿಗೆ ₹9 ಸಾವಿರಕ್ಕೆ ಖರೀದಿಸಲಾಗುತ್ತಿದೆ.

‘ತಾಲ್ಲೂಕಿನಿಂದ ರಾಣೆಬೆನ್ನೂರು ಮತ್ತು ತಮಿಳುನಾಡಿಗೆ 300 ಲೋಡ್‌ ಹತ್ತಿಯನ್ನು ಕಳುಹಿಸಲಾಗಿದೆ. ಇನ್ನೂ 400 ಲೋಡ್ ಹತ್ತಿಯನ್ನು ರೈತರು ಮಾರಾಟ ಮಾಡಲಿದ್ದಾರೆ’ ಎಂದು ಹತ್ತಿ ವ್ಯಾಪಾರಿ ಕೆಂಡಗಣ್ಣಸ್ವಾಮಿ ತಿಳಿಸಿದರು.

2020ರಲ್ಲಿ ಹತ್ತಿಗೆ ಗರಿಷ್ಠ ₹8 ಸಾವಿರ ದರ ಸಿಕ್ಕಿತ್ತು. 2021ರ ಮಾರ್ಚ್‌ ತಿಂಗಳಲ್ಲಿ ಕ್ವಿಂಟಾಲ್ ಹತ್ತಿ ₹8,800ಕ್ಕೆ ಮಾರಾಟವಾಗಿತ್ತು. ಸೆಪ್ಟೆಂಬರ್‌ನಲ್ಲಿ ಈ ಬೆಲೆ ₹13 ಸಾವಿರಕ್ಕೆ ತಲುಪಿತ್ತು. ಆಗಸ್ಟ್‌ ಮೊದಲ ವಾರವೂ ಹತ್ತಿ ದರದಲ್ಲಿ ಏರಿಕೆ ಆಗುತ್ತಲೇ ಇದೆ ಎಂದು ಎಪಿಎಂಸಿಯ ತೇಜಸ್ವಿ ಹೇಳಿದರು.

ಹತ್ತಿ ಉತ್ಪಾದನೆಯಲ್ಲಿ ಕುಸಿತ
ಚಿತ್ರದುರ್ಗ ಎಪಿಎಂಸಿಯಲ್ಲಿ ದಿನ ಬಿಟ್ಟು ದಿನ ಹತ್ತಿ ಮಾರುಕಟ್ಟೆ ನಡೆಯುತ್ತದೆ. ದಾವಣಗೆರೆ, ತುಮಕೂರು, ಮೈಸೂರು ಹಾಗೂ ಆಂಧ್ರಪ್ರದೇಶದ ಹಲವು ಭಾಗಗಳಿಂದಲೂ ಹತ್ತಿ ಬರುತ್ತದೆ. ದೇಶದ ಹಲವೆಡೆ ಅತಿವೃಷ್ಟಿಗೆ ಮತ್ತು ಮುಂಗಾರು ತಡವಾಗಿ ಆರಂಭವಾದ್ದರಿಂದ ಉತ್ಪಾದನೆಯಲ್ಲಿ ಕುಸಿತವಾಗಿದೆ.

***

ಹತ್ತಿ ಬಿಡಿಸಲು ಸಮಯವಾಗಿದ್ದರೂ ಕೂಲಿಕಾರ್ಮಿಕರ ಕೊರತೆ ಇದೆ. ಗಿಡದಲ್ಲಿರುವ ಹತ್ತಿಯನ್ನು ಕಳ್ಳವು ಮಾಡಲಾಗುತ್ತಿದೆ.
-ಪ್ರಕಾಶ್, ರೈತ, ಕೃಷ್ಣಾಪುರ

***

ಪ್ರತಿ ವರ್ಷವೂ ಹತ್ತಿ ಬೆಳೆಯಿಂದ ನಷ್ಟ ಆಗುತ್ತಿತ್ತು. ಆದರೆ ಈ ಬಾರಿ ಹತ್ತಿಗೆ ಉತ್ತಮ ಬೆಲೆ ಇರುವುದರಿಂದ ಖುಷಿಯಾಗಿದೆ.
-ಕಿಟ್ಟಪ್ಪ, ರೈತ, ಕೃಷ್ಣಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT