ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸಕ್ರಿಯ ಪ್ರಕರಣ ಅರ್ಧಕ್ಕರ್ಧ ಇಳಿಕೆ

ಜಿಲ್ಲೆಯಲ್ಲಿ ಜೂನ್‌ 14ರಿಂದಲೂ ಸೋಂಕು ಪೀಡಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚು
Last Updated 23 ಜೂನ್ 2021, 5:02 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ದೃಢಪಡುವ ಪ್ರಕರಣಗಳ ಸಂಖ್ಯೆ ಜೂನ್‌ 14ರಿಂದಲೂ ಜಿಲ್ಲೆಯಲ್ಲಿ ಮೂರಂಕಿಗೆ ಇಳಿದಿದೆ. ತಿಂಗಳ ಆರಂಭದಲ್ಲಿ ದಾಖಲಾಗುತ್ತಿದ್ದ ಸಂಖ್ಯೆಗೆ ಹೋಲಿಸಿದರೆ, ಇದೀಗ ಅರ್ಧದಷ್ಟು ಕಡಿಮೆಯಾಗಿದೆ.

ಸೋಂಕು ದೃಢ ಪ್ರಮಾಣ ಇಂದಿಗೂ ಶೇ 10ರ ಆಸುಪಾಸಿನಲ್ಲೇ ಇರುವುದರಿಂದ, ರಾಜ್ಯದಲ್ಲಿ ಮೈಸೂರಿನಲ್ಲಿ ಮಾತ್ರ ಕೋವಿಡ್‌ ಲಾಕ್‌ಡೌನ್‌ ಮುಂದುವರಿದಿದೆ. ಇದು ಜನಸಾಮಾನ್ಯರ ಬದುಕಿಗೆ ಬಲು ಭಾರವಾಗಿ ಪರಿಣಮಿಸಿದೆ.

ನಿತ್ಯವೂ 500ರ ಆಸುಪಾಸಿನಲ್ಲಿ ಹೊಸ ಸೋಂಕು ಪ್ರಕರಣ ದಾಖಲಾಗುತ್ತಿದ್ದರೆ; ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಒಂದು ಸಾವಿರದ ಆಸುಪಾಸಿನಲ್ಲಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ.

ಏಪ್ರಿಲ್‌ ಅಂತ್ಯದಲ್ಲಿ 10,775 ಸಕ್ರಿಯ ಪ್ರಕರಣಗಳಿದ್ದರೆ, ಕೋವಿಡ್‌ ಉಲ್ಬಣಿಸಿದ್ದ ಮೇ ಕೊನೆಯಲ್ಲಿ 15,085 ಸಕ್ರಿಯ ಪ್ರಕರಣಗಳಿದ್ದವು. ಜೂನ್‌ 1ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 14,606ರಷ್ಟಿತ್ತು. ಇದೀಗ ಜೂನ್‌ 22ರಂದು ಈ ಸಂಖ್ಯೆ 6122ಕ್ಕೆ ಇಳಿದಿದೆ. ಇದು ಜಿಲ್ಲೆಯ ಮಟ್ಟಿಗೆ ಆಶಾದಾಯಕ ಬೆಳವಣಿಗೆ.

ಜೂನ್‌ 22ರ ಮಂಗಳವಾರ ಮೈಸೂರು ನಗರದಲ್ಲಿ 3162 ಸಕ್ರಿಯ ಪ್ರಕರಣಗಳಿದ್ದರೆ, ಮೈಸೂರು ತಾಲ್ಲೂಕಿನಲ್ಲಿ 503, ಎಚ್‌.ಡಿ.ಕೋಟೆ–313, ಹುಣಸೂರು–535, ಕೆ.ಆರ್‌.ನಗರ–471, ನಂಜನಗೂಡು–482, ಪಿರಿಯಾಪಟ್ಟಣ–384 ಹಾಗೂ ತಿ.ನರಸೀಪುರ ತಾಲ್ಲೂಕಿನಲ್ಲಿ 272 ಸಕ್ರಿಯ ಪ್ರಕರಣಗಳಿವೆ.

ಪ್ರಸ್ತುತವಿರುವ ಸಕ್ರಿಯ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣ ಮೈಸೂರು ನಗರದ್ದೇ ಆಗಿವೆ. ಜಿಲ್ಲೆಯ ನಗರ/ಪಟ್ಟಣ/ಗ್ರಾಮೀಣ ಪ್ರದೇಶದಲ್ಲಿ ಸೋಂಕು ಇಂದಿಗೂ ಬಾಧಿಸುತ್ತಿದ್ದು, ಉಳಿದರ್ಧ ಪ್ರಕರಣ ಇಲ್ಲಿಯವೇ. ಇದರಿಂದಾಗಿ ಜಿಲ್ಲೆಯಾದ್ಯಂತ ಸೋಂಕು ಈಗಲೂ ಪಸರಿಸುತ್ತಿದೆ. ಆದರೆ ಹರಡುವಿಕೆಗಿದ್ದ ಹಿಂದಿನ ಶರವೇಗ ತಗ್ಗಿರುವುದೇ ಸಮಾಧಾನಕರ ಸಂಗತಿ ಎಂಬುದು ಗ್ರಾಮೀಣರು ಹಾಗೂ ಕೋವಿಡ್‌ ನಿಯಂತ್ರಣದಲ್ಲಿ ತಲ್ಲೀನರಾಗಿರುವ ಬಹುತೇಕ ಅಧಿಕಾರಿಗಳ ಹೇಳಿಕೆ.

‘ಕೊರೊನಾ ವೈರಸ್‌ ಸೋಂಕು ಹರಡುವಿಕೆಯ ಕ್ಷಿಪ್ರವೇಗ ತಗ್ಗಿದೆ. ಇದೀಗ ಸರ್ಕಾರಿ–ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಉಳಿದಿವೆ. 40–45 ವರ್ಷ ಮೇಲ್ಪಟ್ಟ ಸೋಂಕಿತರು ಮನೆಯಲ್ಲೇ ಉಳಿದು ಚಿಕಿತ್ಸೆ ಪಡೆಯುವ ಬದಲು, ಕೋವಿಡ್‌ ಆರೈಕೆ ಕೇಂದ್ರ ಹಾಗೂ ಚಿಕಿತ್ಸಾ ಕೇಂದ್ರಗಳಿಗೆ ದಾಖಲಾಗುವಂತೆ ಮನವೊಲಿಸಲಾಗುತ್ತಿದೆ. ಇದರಿಂದ ಸೋಂಕು ಹರಡುವಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಡೆಗಟ್ಟಬಹುದು’ ಎನ್ನುತ್ತಾರೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT