ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆಯಂಗಡಿ ಬಾಗಿಲ ಮುಂದೆ ಸಂಕಟಗಳ ಸಾಲು

ಎರಡೂವರೆ ತಿಂಗಳ ಲಾಕ್‌ಡೌನ್‌: ಮಳಿಗೆ ಬಾಡಿಗೆ ಕಟ್ಟಲು ಪರದಾಟ l ವ್ಯಾಪಾರಿಗಳು ಕಂಗಾಲು
Last Updated 5 ಜುಲೈ 2021, 6:58 IST
ಅಕ್ಷರ ಗಾತ್ರ

ಮೈಸೂರು: ಎರಡೂವರೆ ತಿಂಗಳ ಲಾಕ್‌ಡೌನ್‌ ಬಳಿಕ ಜುಲೈ 5ರಿಂದ ಬಟ್ಟೆ ಅಂಗಡಿ ತೆರೆಯಲು ಅವಕಾಶ ದೊರಕಿರುವುದು ವರ್ತಕರಲ್ಲಿ, ಕಾರ್ಮಿಕರಲ್ಲಿ ಆಶಾದಾಯಕ ಭಾವನೆ ಮೂಡಿಸಿದೆ. ಆದರೆ ಲಾಕ್‌ಡೌನ್‌ನಿಂದ ಎದುರಾದ ಸಂಕಷ್ಟಗಳು ಪರಿಹಾರವಾಗಲು ಇನ್ನಷ್ಟು ತಿಂಗಳು ಬೇಕು ಎಂಬ ಪರಿಸ್ಥಿತಿ ಎಲ್ಲರ ಮುಂದಿದೆ.

ಏ.21ರಿಂದ ಇಲ್ಲಿಯ ತನಕವೂ ನಗರ ಹಾಗೂ ಜಿಲ್ಲೆಯ ವಿವಿಧೆಡೆಯಿರುವ ಎರಡು ಸಾವಿರಕ್ಕೂ ಹೆಚ್ಚಿನ ಜವಳಿ ಅಂಗಡಿಗಳು ಬಾಗಿಲು ಮುಚ್ಚಿದ್ದವು.

ಉದ್ಯಮಕ್ಕಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿರುವ ಮಾಲೀಕರು ಲಾಕ್‌ಡೌನ್‌ ಹೊಡೆತಕ್ಕೆ ತತ್ತರಿಸಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿ ದಿನ ಕಳೆಯೋದು ಕಷ್ಟಕರವಾಗಿದೆ.

ಮೈಸೂರು ನಗರದ ಮಾರುಕಟ್ಟೆ ಪ್ರದೇಶದಲ್ಲಿ 10X10 ಅಳತೆಯ ಚಿಕ್ಕ ಅಂಗಡಿ ಹೊಂದಿರುವರೂ ದಿನದ ಖರ್ಚು ಭರಿಸೋದು ಕಷ್ಟಸಾಧ್ಯವಾಗಿದೆ. ಇನ್ನೂ ದೊಡ್ಡ ಅಂಗಡಿ ಮಾಲೀಕರ ನೋವಿನ ಕತೆ ಕೇಳುವಂತಿಲ್ಲ. ಕೆಲಸಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಕಸರತ್ತು ನಡೆಸಬೇಕಿದೆ. ಬ್ರ್ಯಾಂಡೆಡ್‌ ಕಂಪನಿಗಳು ಸಹ ಶೋರೂಮಿನ ಬಾಗಿಲು ಮುಚ್ಚಿವೆ.

ಅಂಗಡಿ ಬಾಗಿಲು ತೆರೆಯಲು ಅನುಮತಿ ಸಿಕ್ಕಿದ್ದರೂ ವರ್ತಕರಿಗೆ ಆಶಾದಾಯಕ ವಾತಾವರಣವಿಲ್ಲ. ಜುಲೈ 9ರ ಶುಕ್ರವಾರದಿಂದ ಆಷಾಢ ಮಾಸ ಆರಂಭಗೊಳ್ಳಲಿದ್ದು; ಮುಂದಿನ 20–25 ದಿನ ವಹಿವಾಟು ಅತಿ ಕಡಿಮೆಯಾಗಿರುತ್ತದೆ. ಈ ತಿಂಗಳಲ್ಲಿ ಶುಭ ಸಮಾರಂಭಗಳು ನಡೆಯದೇ ಇರುವುದು ಕೂಡ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಮೈಸೂರಿನಲ್ಲಿ ಡೆಲ್ಟಾ, ಡೆಲ್ಟಾ ಪ್ಲಸ್‌ ವೈರಸ್‌ ಪತ್ತೆಯಾಗಿರುವುದು ಕೂಡ ವರ್ತಕರಲ್ಲಿ ಆತಂಕ ಹೆಚ್ಚಿಸಿದೆ. ‘ಎರಡನೇ ಅಲೆಯ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ, ಮೂರನೇ ಅಲೆ ಶುರುವಾದರೆ ಜನ ಬೀದಿಗಿಳಿಯಲ್ಲ. ಖರೀದಿಗಾಗಿ ಅಂಗಡಿಯತ್ತ ಹೆಜ್ಜೆ ಹಾಕಲ್ಲ. ಶ್ರಾವಣ ಮಾಸದಲ್ಲಿ ಸಾಲು–ಸಾಲು ಹಬ್ಬ ಬಂದರೂ ವ್ಯಾಪಾರ ನಡೆಯುವುದೇ?‌’ ಎಂಬ ಚಿಂತೆ ಕಾಡಲಾರಂಭಿಸಿದೆ.

ಕೆಲಸಗಾರರು ಕಂಗಾಲು: ಜಿಲ್ಲೆಯ ಬಟ್ಟೆ ಅಂಗಡಿಗಳಲ್ಲಿ ಅಂದಾಜು 25 ಸಾವಿರ ಕೆಲಸಗಾರರಿದ್ದಾರೆ. ಪರೋಕ್ಷವಾಗಿ ಇನ್ನೂ 25 ಸಾವಿರ ಮಂದಿಗೆ ಜವಳಿ ಉದ್ಯಮ ಉದ್ಯೋಗ ಕಲ್ಪಿಸಿದೆ. ಕನಿಷ್ಠ 50 ಸಾವಿರ ಕುಟುಂಬಗಳು ಜವಳಿಯನ್ನೇ ನಂಬಿಕೊಂಡಿವೆ.

‘ಕೆಲಸವಿಲ್ಲದ ಕಾರ್ಮಿಕರಿಗೆ ಕೆಲವು ಮಾಲೀಕರು ಸಂಬಳ ಕೊಟ್ಟರೆ, ಹಲವರು ಸಣ್ಣ ಸಹಾಯವನ್ನೂ ಮಾಡಿಲ್ಲ. ಹೊರಗೆ ಹೊಸ ಕೆಲಸವೂ ಸಿಗದಿರುವುದರಿಂದ ಬದುಕು ಭಾರವಾಗಿದೆ’ ಎನ್ನುತ್ತಾರೆ ದಶಕಗಳಿಂದಲೂ ಮೈಸೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸುಕನ್ಯಾ.

‘ನುರಿತ ಕೆಲಸಗಾರರು ಸಿಗೋದೇ ಕಷ್ಟ. ನಮ್ಮಲ್ಲಿರುವ 60 ಮಂದಿ ಹಲವು ವರ್ಷಗಳಿಂದ ಗ್ರಾಹಕರ ಮನಸ್ಥಿತಿಯನ್ನು ಚೆನ್ನಾಗಿ ಬಲ್ಲವರು. ಕೋವಿಡ್‌ನ ಸಂಕಷ್ಟದಲ್ಲೂ ಎಲ್ಲರಿಗೂ ತಲಾ ₹ 10 ಸಾವಿರ ಸಂಬಳ ಕೊಟ್ಟಿದ್ದೇನೆ. ಸಂಬಳ ಕೊಡದಿದ್ದರೆ ಕೆಲಸ ಬಿಡುತ್ತಾರೆ. ಹೊಸಬರನ್ನು ಸೇರಿಸಿಕೊಂಡು ಅವರಿಗೆ ತರಬೇತಿ, ಕುಶಲತೆ ಕಲಿಸಿ ವ್ಯಾಪಾರ ಮಾಡೋದು ಕಷ್ಟ’ ಎಂದು ಯುವರಾಜ ಸಿಲ್ಕ್ಸ್‌ನ ಯುವರಾಜ ತಿಳಿಸಿದರು.

ಹೊಸ ಫ್ಯಾಷನ್‌; ವಿನೂತನ ಟ್ರೆಂಡ್‌

‘ರಮ್ಜಾನ್‌ ಮಾಸದಲ್ಲಿ ನಮಗೆ ಭರ್ಜರಿ ವ್ಯಾಪಾರ. ಲಕ್ಷ, ಲಕ್ಷ ಬಂಡವಾಳ ಸುರಿದು ಆಗಿನ ಟ್ರೆಂಡ್‌ಗೆ ತಕ್ಕಂತೆ ನೂತನ ವಿನ್ಯಾಸದ ಬಟ್ಟೆ ತಂದಿದ್ದೆವು. ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಒಂದು ದಿನವೂ ವ್ಯಾಪಾರವಾಗದೆ ಹೊಸ ಬಟ್ಟೆ ಅಂಗಡಿಯಲ್ಲೇ ಉಳಿದವು’ ಎನ್ನುತ್ತಾರೆ ನಜರಾಬಾದ್‌ನ ಯುವರಾಜ ಸಿಲ್ಕ್ಸ್‌ನ ಮಾಲೀಕ ಯುವರಾಜ. ‘ಇದೀಗ ಅಂಗಡಿ ಬಾಗಿಲು ತೆರೆದರೆ ಸಾಕು. ಬಕ್ರೀದ್‌ಗಾದರೂ ಶೇ 50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕು ಎಂದು ಯೋಚಿಸಿಕೊಂಡಿದ್ದೇವೆ. ಆದರೆ ಈ ಬಟ್ಟೆ ಖರೀದಿಸೋರು ಯಾರು? ಈಗಾಗಲೇ ಹಾಕಿದ ಬಂಡವಾಳ ಕೈಗೆ ಮರಳಿಲ್ಲ’ ಎಂದು ಅವರು ಅಲವತ್ತುಕೊಂಡರು.

‘ಬರಲಿರುವ ಶ್ರಾವಣ ಮಾಸದ ಮೇಲೆ ಭರವಸೆಯಿಟ್ಟು ಮತ್ತೊಮ್ಮೆ ಬಂಡವಾಳ ಹಾಕಬೇಕು.ಆದರೆ ಜನರು ಹೊಸ ಬಟ್ಟೆ ಖರೀದಿಗೆ ಅಂಗಡಿಗೆ ಬರುವರೇ ಎಂಬುದು ತಿಳಿಯುತ್ತಿಲ್ಲ’ ಎಂದರು.

‘ಜಿಎಸ್‌ಟಿ ರಿಟರ್ನ್ಸ್‌; ದುಡ್ಡು ಕೇಳ್ತಿದ್ದಾರೆ’

‘ಮೈಸೂರನ್ನು ಹೊರತುಪಡಿಸಿ ರಾಜ್ಯದ ಎಲ್ಲೆಡೆ ಜವಳಿ ವ್ಯಾಪಾರ ನಡೆದಿದೆ. ಹೊರ ರಾಜ್ಯದಲ್ಲೂ ವಹಿವಾಟು ಶುರುವಾಗಿದೆ. ಅಲ್ಲಿ ವಹಿವಾಟು ಆರಂಭಗೊಳ್ಳುತ್ತಿದ್ದಂತೆ ನಮಗೆ ಬಟ್ಟೆ ನೀಡಿದವರು ದುಡ್ಡು ಕೇಳುತ್ತಿದ್ದಾರೆ. ವ್ಯಾಪಾರವೇ ನಡೆಯದೇ ಹಣ ಕೊಡೊದಾದರೂ ಹೇಗೆ’ ಎಂದು ಬಟ್ಟೆ ವ್ಯಾಪಾರಿ ಪವನ್‌ಕುಮಾರ್‌ ಪ್ರಶ್ನಿಸಿದರು.

‘ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆಯೂ ಇದೀಗ ಆರಂಭವಾಗಿದೆ. ಬೆಂಗಳೂರಿನಿಂದ ನಾವು ಖರೀದಿಸಿದ ಬಟ್ಟೆಗೆ, ಅಲ್ಲಿನ ಅಂಗಡಿಯವರು ತಮ್ಮಲ್ಲಾದ ಮಾರಾಟದ ಮಾಹಿತಿಯನ್ನು ತಾವು ಪಾವತಿಸುವ ಜಿಎಸ್‌ಟಿಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.’

‘ನಮ್ಮಿಂದ ಖರೀದಿಸಿದ ಚಾಮರಾಜನಗರ ಜಿಲ್ಲೆಯ ವಿವಿಧ ಭಾಗದ ವ್ಯಾಪಾರಿಗಳು ಸಹ, ತಮ್ಮ ಖರೀದಿ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದ್ದಾರೆ. ಆದರೆ ನಾವಿನ್ನೂ ನಮ್ಮ ಅಂಗಡಿಗಳ ಬಾಗಿಲು ತೆರೆಯದಿದ್ದರಿಂದ ಖರೀದಿ–ಮಾರಾಟದ ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಗಿಲ್ಲ. ಇದು ಸಹ ನಮಗೆ ತಾಂತ್ರಿಕ ತೊಂದರೆಯಾಗಿ ಕಾಡಲಿದೆ’ ಎನ್ನುತ್ತಾರೆ ಯುವರಾಜ್.

ಇಲಿ ಕಾಟ, ಮಳೆ ಅನಾಹುತ

‘ಬಹಳಷ್ಟು ಬಟ್ಟೆ ಅಂಗಡಿಗಳಲ್ಲಿ ಇಲಿ ಕಾಟವಿದೆ. ಎರಡೂವರೆ ತಿಂಗಳಿನಿಂದ ಬಾಗಿಲು ತೆರೆದಿಲ್ಲ. ಇಲಿಗಳು ಎಷ್ಟು ಬಟ್ಟೆಗಳನ್ನು ತುಂಡರಿಸಿವೆ ಎಂಬುದನ್ನು ಊಹಿಸಲಾಗುತ್ತಿಲ್ಲ’ ಎಂದು ಗಾಂಧಿ ಸ್ಕ್ವೇರ್‌ನ ಉಮಾ ಟಾಕೀಸ್‌ ರಸ್ತೆಯಲ್ಲಿರುವ ನೀಲಕಂಠ ಗಾರ್ಮೆಂಟ್ಸ್‌ನ ಜನಕ್‌ಸಿಂಗ್‌ ಭಾಟಿ ಆತಂಕ ವ್ಯಕ್ತಪಡಿಸಿದರು.

‘ಮಳೆ ಬಂದರೆ ನಮ್ಮ ಅಂಗಡಿ ಸೋರುತ್ತದೆ. ಒಳಗೆ ನೀರು ನುಗ್ಗುತ್ತದೆ. ಬಟ್ಟೆಗೆ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ನೋಡಲು ಕೂಡ ಪೊಲೀಸರು ಅವಕಾಶ ಕೊಡಲಿಲ್ಲ’ ಎಂದು ಪ್ರಕಾಶ್‌ ಅಸಮಾಧಾನ ವ್ಯಕ್ತಪಡಿಸಿದರು.

***

ಸರ್ಕಾರದ ಬಳಿ ನಾವು ಪರಿಹಾರ ಪ್ಯಾಕೇಜ್‌ ಕೇಳಿಲ್ಲ. ಎಲ್ಲ ವಹಿವಾಟಿಗೂ ಅವಕಾಶ ಕೊಟ್ಟಂತೆ ನಮಗೂ ವ್ಯಾಪಾರಕ್ಕೆ ಅವಕಾಶ ಬೇಕು

–ಆರ್.ಎನ್.ರಮೇಶ್‌, ಅಧ್ಯಕ್ಷ, ಮೈಸೂರು ಜವಳಿ-ಸಿದ್ಧ ಉಡುಪುಗಳ ವರ್ತಕರ ಸಂಘ

***

ಉಳಿತಾಯದ ಹಣ ಖರ್ಚಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ನೇಣು ಹಾಕಿಕೊಳ್ಳಬೇಕಾಗುತ್ತೆ. ಹುಡುಗರಿಗೆ ಸಂಬಳ ಕೊಡಲು ಆಗ್ತಿಲ್ಲ

–ಆರ್‌.ಅಜಿತ್‌, ಶ್ರೀರಂಗ ಫ್ಯಾಷನ್‌, ಚಾಮುಂಡಿಪುರಂ‌

***

ಹಿಂದಿನ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ಸಾಲ ಮರು ಪಾವತಿಗೆ ಕಾಲಾವಕಾಶ ಕೊಟ್ಟಿದ್ದರು. ಈ ಬಾರಿ ಪ್ರಸ್ತಾಪವೇ ಇಲ್ಲ. ಪ್ರತಿಭಟಿಸಿದರೂ ಪ್ರಯೋಜನವಿಲ್ಲ

–ಕುಮಾರ್‌, ಸಿದ್ಧೇಶ್ವರ ಗಾರ್ಮೆಂಟ್ಸ್‌

***

ಮೈಸೂರಿನಲ್ಲಿ ಬಟ್ಟೆ ಅಂಗಡಿ ಬಾಗಿಲು ತೆರೆಯದಿರುವುದರಿಂದ ಹಲವರು ಮಂಡ್ಯ, ಬೆಂಗಳೂರಿಗೆ ಹೋಗಿ ಬಟ್ಟೆ ಖರೀದಿಸುತ್ತಿದ್ದಾರೆ

–ಯುವರಾಜ್, ಯುವರಾಜ ಸಿಲ್ಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT