ಸೋಮವಾರ, ಜೂನ್ 27, 2022
28 °C
ಮೈಸೂರು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ತಲಾ 2 ಸಾವಿರ ಶಂಕಿತರನ್ನು ಪರೀಕ್ಷೆಗೊಳಪಡಿಸುವ ಗುರಿ

ಮೈಸೂರು: ಕೋವಿಡ್‌ ತಪಾಸಣೆ ನಾಳೆಯಿಂದ ಹೆಚ್ಚಳ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ಮೈಸೂರು: ಕೋವಿಡ್‌ ದೃಢಪಡುವ ಪ್ರಮಾಣ ಇಳಿಕೆಯಾಗುತ್ತಿರುವ ಬೆನ್ನಿಗೆ, ಸರ್ಕಾರದ ಸೂಚನೆಯನುಸಾರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಪತ್ತೆಗಾಗಿ ತಪಾಸಣೆಯನ್ನು ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ನೇತೃತ್ವದಲ್ಲಿ ಈಚೆಗಷ್ಟೇ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು ಹಳ್ಳಿಗಳಲ್ಲಿ ಕೋವಿಡ್‌ ತಪಾಸಣೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

ಈ ವಿದ್ಯಮಾನದ ಬೆನ್ನಿಗೆ ಜಿಲ್ಲಾಡಳಿತ ಜಿಲ್ಲೆಯ ಏಳು ತಾಲ್ಲೂಕಿನ ಹಳ್ಳಿಗಳಲ್ಲೂ ತಪಾಸಣೆಗೆ ಮುಂದಾಗಿದೆ. ಇದಕ್ಕೆ ಪೂರಕವಾಗಿ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕಾರ್ಯಪಡೆಯೂ ಕೋವಿಡ್‌ ತಪಾಸಣೆಯನ್ನು ಗ್ರಾಮಗಳಲ್ಲೂ ನಡೆಸುವಂತೆ ಸೂಚಿಸಿದೆ.

ಸರ್ವೆ ಆಧಾರದಲ್ಲಿ ತಪಾಸಣೆ: ‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆ ಸರ್ವೆ ನಡೆಸಲಾಗುತ್ತಿದೆ. ಈ ಸರ್ವೆಯಲ್ಲಿ ಸೋಂಕಿನ ಗುಣಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಮೊದಲು ಇವರನ್ನು ತಪಾಸಣೆಗೊಳಪಡಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೇಶ್‌ ತಿಳಿಸಿದರು.

‘ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕಿನ ಲಕ್ಷಣ ಹೊಂದಿರುವ 50ಕ್ಕೂ ಹೆಚ್ಚು ವ್ಯಕ್ತಿಗಳಿದ್ದಾರೋ, ಅಂತಹ ಗ್ರಾಮಗಳಲ್ಲಿ ಪರೀಕ್ಷೆಗೆ ಮೊದಲ ಒತ್ತು ನೀಡಲಾಗುವುದು. ಇದೀಗ ರ‍್ಯಾಪಿಡ್ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ನಲ್ಲಿ ತಪಾಸಣೆ ನಡೆಸುವುದರಿಂದ ಸ್ಥಳದಲ್ಲಿಯೇ ವರದಿ ಗೊತ್ತಾಗಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು.

‘ಸೋಂಕು ದೃಢಪಟ್ಟ ವ್ಯಕ್ತಿಯ ಮನೆಯಲ್ಲೇ ಐಸೋಲೇಟ್‌ ಆಗುವ ಎಲ್ಲ ಅವಕಾಶ ಇದ್ದರೆ ಮಾತ್ರ, ಅಂತಹವರಿಗೆ ಹೋಂ ಐಸೋಲೇಷನ್‌ ಆಗಲು ಅವಕಾಶ ನೀಡುತ್ತೇವೆ. ಸೌಲಭ್ಯಗಳ ಕೊರತೆಯಿದ್ದರೆ ಸಮೀಪದ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುವುದು’ ಎಂದು ಯೋಗೇಶ್‌ ಮಾಹಿತಿ ನೀಡಿದರು.

‘ಜಿಲ್ಲಾ ಆರೋಗ್ಯ ಇಲಾಖೆಗೆ ಈಗಾಗಲೇ 10 ಸಾವಿರ ಪರೀಕ್ಷಾ ಕಿಟ್ ಬಂದಿವೆ. ಉಳಿದವು ಶೀಘ್ರದಲ್ಲೇ ಬರಲಿವೆ. ಮೊದಲ ಹಂತದಲ್ಲಿ ಪ್ರತಿ ತಾಲ್ಲೂಕಿನಲ್ಲೂ ಸೋಂಕಿನ ಲಕ್ಷಣ ಹೊಂದಿರುವ 2 ಸಾವಿರ ಜನರ ಪರೀಕ್ಷೆ ನಡೆಸಲಾಗುವುದು. ಶುಕ್ರವಾರದಿಂದಲೇ ಜಿಲ್ಲೆಯಾದ್ಯಂತ ತಪಾಸಣೆಗೆ ಚಾಲನೆ ಸಿಗಲಿದೆ’ ಎಂದು ಅವರು ತಿಳಿಸಿದರು.

19 ಕೋವಿಡ್‌ ಆರೈಕೆ ಕೇಂದ್ರ
‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ 19 ಕೋವಿಡ್‌ ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಹೋಬಳಿಗೊಂದು ಕೇಂದ್ರ ಆರಂಭಿಸಲು ಬೇಕಾದ ಸಿದ್ಧತೆ ನಡೆಸಿಕೊಳ್ಳಿ ಎಂದು ತಾ.ಪಂ. ಇಒಗಳಿಗೆ ಸೂಚಿಸಲಾಗಿದೆ’ ಎಂದು ಸಿಇಒ ತಿಳಿಸಿದರು.

‘ಒಂದೊಂದು ತಾಲ್ಲೂಕಿಗೆ ಐದು ತಂಡ ನಿಯೋಜಿಸಲಾಗಿದೆ. 35 ವಾಹನಗಳನ್ನು ಕೊಡಲಾಗಿದೆ. ಈ ಮೊಬೈಲ್‌ ತಪಾಸಣಾ ವಾಹನದಲ್ಲಿ ಮೈಸೂರು ಮೆಡಿಕಲ್‌ ಕಾಲೇಜಿನ ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿ, ಸ್ಟಾಫ್‌ ನರ್ಸ್‌, ಸ್ವ್ಯಾಬ್ ತೆಗೆಯಲು ಎಎನ್‌ಎಂ, ಆಶಾ–ಅಂಗನವಾಡಿ ಕಾರ್ಯಕರ್ತೆ, ಗ್ರೂಪ್‌ ಡಿ ಸಿಬ್ಬಂದಿಯೊಬ್ಬರಿರಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ತಹಶೀಲ್ದಾರ್, ಇಒ, ಟಿಎಚ್‌ಒ ಸೂಚಿಸುವ ಸ್ಥಳಗಳಿಗೆ ಈ ಮೊಬೈಲ್‌ ವಾಹನ ತಂಡಗಳು ತೆರಳಿ ಕೋವಿಡ್‌ ತಪಾಸಣೆ ನಡೆಸಲಿವೆ. ಹಂತ ಹಂತವಾಗಿ ಈ ಸೇವೆ ಹೆಚ್ಚಿಸಲಾಗುವುದು’ ಎಂದು ಯೋಗೇಶ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು