ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡಿನಲ್ಲಿ 3 ಕಡೆ ದರೋಡೆ– ಆತಂಕ

ವರುಣಾ ಸಮೀಪ ಅಪಘಾತ; ಮೃತರ ಸಂಖ್ಯೆ 3ಕ್ಕೆ ಏರಿಕೆ
Last Updated 16 ಡಿಸೆಂಬರ್ 2019, 10:04 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಮೂರು ಕಡೆ 5 ಮಂದಿಯ ತಂಡವು ದರೋಡೆ ನಡೆಸಿದ್ದು, ಆತಂಕ ಸೃಷ್ಟಿಯಾಗಿದೆ. ಪೊಲೀಸರು ದರೋಡೆಕೋರರನ್ನು ಬಂಧಿಸಲು ಬಲೆ ಬೀಸಿದ್ದಾರೆ.

ನಗರದ ಹಳ್ಳದಕೇರಿ ಬಡಾವಣೆಯ ದೇವರಸನಹಳ್ಳಿ ರಸ್ತೆಯ ತಿರುವಿನಲ್ಲಿ ನಿಂತಿದ್ದ 5 ಮಂದಿ ದುಷ್ಕರ್ಮಿಗಳ ತಂಡವು ಶನಿವಾರ ತಡ ರಾತ್ರಿ 12.30ರ ಸಮಯದಲ್ಲಿ ಸಂಬಂಧಿಕರ ಕಡೆಯ ಮದುವೆ ಮುಗಿಸಿಕೊಂಡು ಬೈಕ್‍ನಲ್ಲಿ ಸಿಂಗಾರಿಪುರ ಗ್ರಾಮಕ್ಕೆ ತೆರಳುತ್ತಿದ್ದ ಚಿಕ್ಕರಂಗಯ್ಯ ಹಾಗೂ ಮಲ್ಲೇಶ್ ಎಂಬುವರನ್ನು ಬೆಂಕಿ ಪೊಟ್ಟಣ ಕೇಳುವ ನೆಪದಲ್ಲಿ ತಡೆದು ನಿಲ್ಲಿಸಿದ್ದಾರೆ. ನಿಲ್ಲಿಸುತ್ತಿದ್ದಂತೆ ಚಿಕ್ಕರಂಗಯ್ಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ₹ 10 ಸಾವಿರ ನಗದು, 15 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಕುರಿತು ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಪಾಸ್ ರಸ್ತೆಯಲ್ಲಿ ಆಲಂಬೂರು ಮುಂಟಿಗೆ ಹೋಗುತ್ತಿದ್ದ ಶಾಂತರಾಜು ಎಂಬುವರ ಮೇಲೂ ದಾಳಿ ನಡೆಸಿರುವ ದುಷ್ಕರ್ಮಿಗಳ ತಂಡ ₹ 1,500 ನಗದು ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದೆ.

ತಾಲೂಕಿನ ಮಲ್ಲೂಪುರ ಬಳಿಯ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಗೆ ಕಬ್ಬು ಸಾಗಿಸಿ ವಾಪಾಸ್ ಇಮ್ಮಾವು ಗ್ರಾಮಕ್ಕೆ ಟ್ಯ್ರಾಕ್ಟರ್‌ನಲ್ಲಿ ತೆರಳುತ್ತಿದ್ದ ಚಾಲಕ ಮಲ್ಲೇಶ್‍ನನ್ನು ತಡೆದು ಹಲ್ಲೆ ನಡೆಸಿ ₹ 2,300ನ್ನು ಕಸಿದುಕೊಂಡಿದ್ದಾರೆ.

ಒಂದೇ ತಂಡ ಈ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟಣೆ ನಡೆದ ಸ್ಥಳಗಳಿಗೆ ಡಿ.ವೈ.ಎಸ್.ಪಿ. ಪ್ರಭಾಕರ್ ಶಿಂಧೆ, ಸಿ.ಪಿ.ಐ. ರಾಜಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು ತಾಲೂಕುವರುಣಾದಎಂ.ಸಿ.ಹುಂಡಿ ಸಮೀಪ ಶನಿವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಮೃತಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ನಗರದ ತಾವರೆಕಟ್ಟೆ ನಿವಾಸಿ ರಾಮು (22) ಹಾಗೂ ಕೊಳ್ಳೇಗಾಲದ ಅಖಿಲೇಶ್ (30) ಶನಿವಾರ ಮೃತಪಟ್ಟಿದ್ದರು. ಗಾಯಗೊಂಡಿದ್ದ ತಿಲಕ್‍ನಗರ ಬಂಬೂ ಬಜಾರ್ ನಿವಾಸಿ ಸುರೇಶ್(23) ಅವರು ಭಾನುವಾರ ಸಾವಿಗೀಡಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಕೊಳ್ಳೇಗಾಲದ ಹೇಮಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಪೈಕಿ ಎಲ್ಲರೂ ಹೆಲ್ಮೆಟ್‌ ಹಾಕಿರಲಿಲ್ಲ. ಹೇಮಂತ್ ಮಾತ್ರ ಹೆಲ್ಮೆಟ್‌ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕ ಅದಾಲತ್‍ನಲ್ಲಿ 4,709 ಪ್ರಕರಣ ಇತ್ಯರ್ಥ

ಮೈಸೂರು ಜಿಲ್ಲೆಯ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 4,709 ಪ್ರಕರಣಗಳು ಇತ್ಯರ್ಥಗೊಂಡಿವೆ.

ಇದರಲ್ಲಿ ವಿಚಾರಣೆಗೆ ಬಾಕಿ ಇರುವ 4,352 ಪ್ರಕರಣಗಳು ಹಾಗೂ 357 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿವೆ. ಒಟ್ಟು ₹ 21.77 ಕೋಟಿ ಪರಿಹಾರ ನೀಡಲಾಗಿದೆ. ಮೈಸೂರು ನಗರ ಮತ್ತು ತಿ.ನರಸೀಪುರಗಳಲ್ಲಿ ವಕೀಲರು ಬಹಿಷ್ಕಾರ ನಡೆಸಿದ್ದರೂ ನ್ಯಾಯಾಧೀಶರು ಮತ್ತು ಪಬ್ಲಿಕ್‌ ಪ‍್ರಾಸಿಕ್ಯೂಟರ್ ನೆರವಿನಿಂದ ಅದಾಲತ್ ಯಶಸ್ವಿಯಾಗಿ ನಡೆಯಿತು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT