ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ತಪಾಸಣೆ ಕೇಂದ್ರ: ಆರಂಭದಲ್ಲೇ ಅಪಸ್ವರ

ತಪಾಸಣೆ– ಪ್ರಮಾಣೀಕರಣಕ್ಕೆ ಬೇಕಿತ್ತೇ ₹ 18 ಕೋಟಿ‌: ಹಲವು ಸಂಘ ಸಂಸ್ಥೆಗಳ ಪ್ರಶ್ನೆ
Last Updated 9 ಜುಲೈ 2021, 2:54 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ರಾಜೀವ್‌ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ₹ 18 ಕೋಟಿ ವೆಚ್ಚದಲ್ಲಿ ಈಚೆಗಷ್ಟೇ ಉದ್ಘಾಟನೆಗೊಂಡ ವಾಹನ ತಪಾಸಣೆ ಹಾಗೂ ಪ್ರಮಾಣೀಕರಣ ಕೇಂದ್ರದ ಕಾರ್ಯವೈಖರಿಗೆ ಹಲವು ಸಂಘ, ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ.

’ಸ್ಪೇನ್‌ ದೇಶದಿಂದ ತರಿಸಲಾಗಿರುವ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿ ವಾಹನಗಳ ಸಾಮರ್ಥ್ಯ ಅಥವಾ ಅರ್ಹತೆಯನ್ನು ಪರಿಶೀಲಿಸಿದರೆ ಜಿಲ್ಲೆಯ ಶೇ 50ಕ್ಕೂ ಹೆಚ್ಚು ವಾಹನಗಳಿಗೆ ‘ಫಿಟ್ನೆಸ್‌ ಸರ್ಟಿಫಿಕೇಟ್’ (ಎಫ್‌.ಸಿ) ಸಿಗುವುದು ಕಷ್ಟ’ ಎಂಬುದು ವಾಹನ ಮಾಲೀಕರ ಆತಂಕ.

ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ, ದಿ ಮೈಸೂರು ಸಿಟಿ ಲಾರಿ ಟ್ರಾನ್ಸ್ ಏಜೆಂಟ್ಸ್ ಅಸೋಸಿಯೇಷನ್, ಮೈಸೂರು, ಚಾಮರಾಜನಗರ ಲಾರಿ ಮಾಲೀಕರ ಸಂಘ, ಮೈಸೂರು ಸಿಟಿ ಗೂಡ್ಸ್ ಮಾಲೀಕರ ಸಂಘ, ಮೈಸೂರು ರೈಲ್ವೆ ಗೂಡ್ಸ್ ಲಾರಿ ಮಾಲೀಕರ ಸಂಘಗಳು ಆಕ್ಷೇಪಕ್ಕೆ ದನಿಗೂಡಿಸಿವೆ.

‘ಹಲವು ವಾಹನಗಳ ಬಿಡಿಭಾಗಗ ಳನ್ನು ತಯಾರಿಸುವಂತಹ ಸಂಸ್ಥೆಗಳು ಕೋವಿಡ್ ಕಾರಣ ದಿಂದ ಕಾರ್ಯಾರಂಭ ಮಾಡಿಲ್ಲ. ಅನೇಕ ವಾಹನಗಳಿಗೆ ಹೊಸ ಬಿಡಿಭಾಗಗಳೇ ದೊರೆ
ಯುತ್ತಿಲ್ಲ. ಹೊಸ ಬಿಡಿಭಾಗಗಳು ಇಲ್ಲ ಎಂದು ತಪಾಸಣೆ ಯಂತ್ರವು ತಿರಸ್ಕರಿಸಿದರೆ ಎಲ್ಲಿಗೆ ಹೋಗು
ವುದು’ ಎಂದು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮ ಪ್ರಶ್ನಿಸುತ್ತಾರೆ.‌

‘ಕೋವಿಡ್ ಕಾರಣದಿಂದ ಶೇ 30ರಷ್ಟು ಮಾತ್ರವೇ ಸರಕು ಸಾಗಣೆ ವಾಹನಗಳು ಸಂಚರಿಸುತ್ತಿವೆ. ಸಂಚರಿಸುತ್ತಿರುವ ಪ್ರಯಾಣಿಕರ ವಾಹನಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ತಿಂಗಳಾನುಗಟ್ಟಲೆ ನಿಲ್ಲಿಸಿರುವ ವಾಹನಗಳೂ ಹೊಸ ವ್ಯವಸ್ಥೆಯಲ್ಲಿ ಪಾಸಾಗುವುದು ಕಷ್ಟ. ಜತೆಗೆ, ಬಿಡಿಭಾಗಗಳ ಬದಲಾವಣೆ ಸೇರಿದಂತೆ ಹಲವು ಹೊಸ ನಿಯಮಗಳನ್ನು ಹೇರಿದರೆ ವೆಚ್ಚ ಭರಿಸುವುದು ಕಷ್ಟ ಸಾಧ್ಯ’ ಎಂದು ಅವರು ಹೇಳುತ್ತಾರೆ.

ಸರ್ಕಾರಿ ವಾಹನಗಳೂ ಪಾಸಾಗುವುದಿಲ್ಲ!: ’ಸದ್ಯ ಇರುವ ಸರ್ಕಾರಿ ವಾಹನಗಳೂ ಈ ಅತ್ಯಾಧುನಿಕ ಯಂತ್ರೋಪಕರಣಗಳ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟ’ ಎಂದು ಕೋದಂಡರಾಮ ಹೇಳುತ್ತಾರೆ.

‘ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗಂತೂ ಈಗ ಇರುವ ಸ್ಥಿತಿಯಲ್ಲಿ ಎಫ್‌.ಸಿ ಸಿಗುವುದಿಲ್ಲ’ ಎಂದು ದಿ ಮೈಸೂರು ಸಿಟಿ ಲಾರಿ ಟ್ರಾನ್ಸ್‌ ಏಜೆಂಟ್ಸ್ ಅಸೋಸಿಯೇಷನ್‌ ಅಧ್ಯಕ್ಷ ಎಸ್.ಸದಾಶಿವ ಹೇಳುತ್ತಾರೆ.

‘ಒಂದು ಜಾಯಿಂಟ್‌ ಅಲ್ಲಾಡಿದರೂ ಎಫ್‌.ಸಿ.ಸಿಗುವುದಿಲ್ಲ. ಲೈನರ್‌ ಕಂಪ್ಲೀಟ್‌ ಆಗಿರಬೇಕು, ಅಲೈನ್‌ಮೆಂಟ್‌, ಜಾಯಿಂಟ್‌, ಕರಾರುವಕ್ಕಾಗಿರಬೇಕು. ಇಲ್ಲದಿದ್ದರೆ, ಹೊಸ ವ್ಯವಸ್ಥೆಯಲ್ಲಿ ಎಫ್‌.ಸಿ ಸಿಗುವುದಿಲ್ಲ. ಸರ್ಕಾರದಿಂದ ಮಾನ್ಯತೆ ಪಡೆದಿರುವ ರೀಬೆಲ್ಟ್‌ ಟೈಯರ್‌ನ್ನು ಸಹ ಇದು ತಿರಸ್ಕರಿಸುತ್ತದೆ. ಹಾಗಾದರೆ, ವಾಹನಗಳ ಮಾಲೀಕರು ಏನು ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ.

‘ಮಾನವ ಹಸ್ತಕ್ಷೇಪ ಇಲ್ಲ’‌: ‘ಅತ್ಯಾಧುನಿಕ ವ್ಯವಸ್ಥೆಯಲ್ಲಿ ಮಾನವ ಹಸ್ತಕ್ಷೇಪ ಇಲ್ಲ. ಶೇ 100ರಷ್ಟು ಕರಾರುವಕ್ಕಾಗಿ ವಾಹನಗಳ ಅರ್ಹತೆಯ ತಪಾಸಣಾ ಕಾರ್ಯ ನಡೆಯುತ್ತದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ್ ಹೇಳುತ್ತಾರೆ.

ವಿವಿಧ ವಾಹನಗಳ ಸಂಘಟನೆಗಳ ಸದಸ್ಯರು ಎತ್ತಿರುವ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಮೊದಲು ಈ ನೂತನ ವ್ಯವಸ್ಥೆ ಜಾರಿಯಾಗಲಿ. ಜಾರಿಯಾದ ಬಳಿಕವಷ್ಟೇ ಇದರ ಸಾಧಕ, ಬಾಧಕಗಳು ಗೊತ್ತಾಗುತ್ತವೆ. ಉದ್ಘಾಟನೆಯಾಗಿರುವ ಕೇಂದ್ರ ಕಾರ್ಯಾರಂಭ ಮಾಡಬಾರದು ಎಂದರೆ ಹೇಗೆ’ ಎಂದು ಅವರು ಪ್ರಶ್ನಿಸುತ್ತಾರೆ.

ಅಪಘಾತಗಳಲ್ಲಿ ಇಳಿಕೆ ಸಾಧ್ಯತೆ: ‘ವಾಹನಗಳು ನೂರಕ್ಕೆ ನೂರರಷ್ಟು ಕರಾರುವಕ್ಕಾಗಿ ಇದ್ದರೆ ಅಪಘಾತಗಳ ಸಂಖ್ಯೆಯೂ ಇಳಿಕೆಯಾಗುತ್ತದೆ. ಗುಣಮಟ್ಟ ಇಲ್ಲದಿರುವ ವಾಹನಗಳೂ ಅಪಘಾತಗಳಿಗೆ ಕಾರಣ. ಹಾಗಾಗಿ, ಅತ್ಯಾಧುನಿಕ ವ್ಯವಸ್ಥೆ ಅನಿವಾರ್ಯವಾಗಿತ್ತು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT