ಶುಕ್ರವಾರ, ಡಿಸೆಂಬರ್ 9, 2022
21 °C
ಕೋವಿಡ್‌ ಬಳಿಕ ಅದ್ಧೂರಿ ದಸರಾ, ವಿದ್ಯುತ್‌ ದೀಪಾಲಂಕಾರದಲ್ಲಿ ಸಾಗಲಿರುವ ಜಂಬೂಸವಾರಿ

ದಸರಾ 2022: ರಾಷ್ಟ್ರಪತಿ ದ್ರೌಪದಿ ಮುರ್ಮು ನಾಡಹಬ್ಬಕ್ಕೆ ಚಾಲನೆ

ಎಂ.ಮಹೇಶ Updated:

ಅಕ್ಷರ ಗಾತ್ರ : | |

ಮೈಸೂರು: ಕೋವಿಡ್‌ ಕಾರಣದಿಂದ ಹಿಂದಿನ ಎರಡು ವರ್ಷ ಸರಳವಾಗಿ ನಡೆದಿದ್ದ ದಸರಾ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿಯಿಂದ ಚಾಲನೆ, ವಿದ್ಯುತ್‌ ದೀಪಾಲಂಕಾರದಲ್ಲಿ ಸಾಗಲಿರುವ ಜಂಬೂಸವಾರಿ, ಯೋಗ ದಸರಾ, ಕೈಗಾರಿಕಾ ದಸರಾ ಹಾಗೂ ವೈದ್ಯಕೀಯ ವಸ್ತುಪ್ರದರ್ಶನದ ಸೇರ್ಪಡೆ...

–ಸೋಮವಾರದಿಂದ (ಸೆ.26) ಆರಂಭವಾಗಲಿರುವ ಮೈಸೂರು ದಸರಾ ಉತ್ಸವದ ವಿಶೇಷಗಳಿವು. ಉತ್ಸವವು ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ.

ಉತ್ಸವದಲ್ಲಿ ನಟ ಪುನೀತ್‌ ರಾಜ್‌ಕುಮಾರ್ ನೆನಪು ಮೇಳೈಸಲಿದೆ. ಸಂಜೆ ವಿದ್ಯುತ್ ದೀಪಾಲಂಕಾರವುಳ್ಳ ರಸ್ತೆಯಲ್ಲಿ ಜಂಬೂಸವಾರಿ ಸಾಗಲಿರುವುದು ಈ ಬಾರಿಯ ವಿಶೇಷ.

26ರಂದು ಬೆಳಿಗ್ಗೆ 9.45ರಿಂದ 10.05ರೊಳಗೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನಾಡಹಬ್ಬವನ್ನು ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

ಅಂಬಾವಿಲಾಸ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ. ‘ರಾಜ್ಯ ಸಂಗೀತ ವಿದ್ವಾನ್‌’ ಪ್ರಶಸ್ತಿಯನ್ನು ವಿದುಷಿ ಲಲಿತ್ ಜೆ.ರಾವ್ ಅವರಿಗೆ ಪ್ರದಾನ ಮಾಡಲಾಗುವುದು. ಚಲನಚಿತ್ರೋತ್ಸವಕ್ಕೆ ನಟ ಶಿವರಾಜ್‌ ಕುಮಾರ್ ಚಾಲನೆ ನೀಡಲಿದ್ದಾರೆ.

ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕುಸ್ತಿ ಪಂದ್ಯಾವಳಿ, ಅರಮನೆ ಆವರಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಬಿಂಬಿಸುವ ಫಲಪುಷ್ಪ ಪ್ರದರ್ಶನ, ಶಿಲ್ಪ, ಚಿತ್ರಕಲಾ ಪ್ರದರ್ಶನವೂ ತೆರೆದುಕೊಳ್ಳಲಿದೆ. ಯುವ ದಸರಾ, ದಸರಾ ದರ್ಶನ, ಕವಿಗೋಷ್ಠಿ, ಪಾರಂಪರಿಕ ದಸರಾ, ಉರ್ದು ಕವಿಗೋಷ್ಠಿ, ರೈತ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ ಏರ್ಪಾಡಾಗಿದೆ. 

ಮೈಸೂರು ರಾಜವಂಶಸ್ಥರ ಖಾಸಗಿ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ‘ಖಾಸಗಿ ದರ್ಬಾರ್‌’ ಸೋಮವಾರವೇ ನಡೆಯಲಿದೆ.

ದಸರಾ ಉದ್ಘಾಟನೆ– ವಿಜಯದಶಮಿ ಮೆರವಣಿಗೆಯನ್ನು ವರ್ಚುವಲ್ ಆಗಿ ವೀಕ್ಷಿಸಲು ಈ ಲಿಂಕ್‌ಗಳನ್ನು ಬಳಸಬಹುದು.

ಫೇಸ್‌ಬುಕ್‌: https://facebook.mysoredasara.gov.in

ಯೂಟ್ಯೂಬ್‌: https://youtube.mysoredasara.gov.in

ವೆಬ್‌ಸೈಟ್‌: https://mysoredasara.gov.in

ಮಡಿಕೇರಿ ದಸರೆಗೆ ಕರಗೋತ್ಸವ ಮುನ್ನುಡಿ

ಮಡಿಕೇರಿ: ‘ಬೆಳಕಿನ ದಸರಾ’ ಮಡಿಕೇರಿ ದಸರೆಗೆ ಸೆ. 26ರಂದು ಕರಗೋತ್ಸವ ಮುನ್ನುಡಿ ಬರೆಯಲಿದೆ. ಶಕ್ತಿ ದೇವತೆಗಳಾದ ಕೋಟೆ ಮಾರಿಯಮ್ಮ, ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿಕಾಮಾಕ್ಷಮ್ಮ ಕರಗಗಳು ಒಟ್ಟಿಗೇ ಹೊರಡಲಿವೆ.

ಆದಿವಾಸಿಗಳೊಂದಿಗೆ ಫೋಟೊ ಶೂಟ್

‘ದಸರಾ ಉದ್ಘಾಟನೆ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಣಸೂರು, ‍‍ಪಿರಿಯಾ‍ಪಟ್ಟಣ ಹಾಗೂ ಎಚ್‌.ಡಿ.ಕೋಟೆ ತಾಲ್ಲೂಕಿನ  ಆದಿವಾಸಿಗಳೊಂದಿಗೆ 10 ನಿಮಿಷಗಳ ಫೋಟೊ ಸೆಷನ್‌ ನಡೆಸಲಿದ್ದಾರೆ.

 ‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರದಿಂದ ಬುಧವಾರದವರೆಗೆ (ಸೆಪ್ಟೆಂಬರ್‌ 26ರಿಂದ 28) ರಾಜ್ಯಕ್ಕೆ ಭೇಟಿ ನೀಡಲಿದ್ದು, ವಿವಿಧ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು