ಶುಕ್ರವಾರ, ಅಕ್ಟೋಬರ್ 22, 2021
29 °C

ದಸರೆ ನಾಳೆಯಿಂದ: ಗರಿಗೆದರಿದ ಸಂಭ್ರಮ- ಅಂತಿಮ ಹಂತಕ್ಕೆ ದೀಪಾಲಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನೆಗೆ ಒಂದು ದಿನವಷ್ಟೇ ಉಳಿದಿದ್ದು, ಸಿದ್ಧತೆಗಳು ಗರಿಗೆದರಿವೆ. ಇಲ್ಲಿನ ಅರಮನೆ ಹಾಗೂ ಚಾಮುಂಡಿಬೆಟ್ಟದಲ್ಲಿ ಸಿದ್ಧತಾ ಕಾರ್ಯಗಳು ಮಂಗಳವಾರ ಭರದಿಂದ ನಡೆದಿದ್ದವು. ದಸರಾ ಗಜಪಡೆಯ ಮರದ ಅಂಬಾರಿ ತಾಲೀಮು ಸಹ ಮುಂದುವರಿದಿದೆ.

ಚಾಮುಂಡಿಬೆಟ್ಟಕ್ಕೆ ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶವನ್ನು ಅ. 7ರ ಮಧ್ಯಾಹ್ನದವರೆಗೂ ಸಂಪೂರ್ಣ ನಿರ್ಬಂಧಿಸಲಾಗಿದೆ. ಬೆಟ್ಟದಲ್ಲಿ ಭದ್ರತಾ ತಪಾಸಣೆ ನಡೆಯುತ್ತಿದ್ದು, ವೇದಿಕೆ ನಿರ್ಮಾಣ ಕಾರ್ಯವೂ ಆರಂಭವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರವೇ ನಗರಕ್ಕೆ ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಬಾರಿಯ ದಸರಾ ಉದ್ಘಾಟಕರಾದ ಎಸ್.ಎಂ.ಕೃಷ್ಣ ಸಹ ಬುಧವಾರ ಮಧ್ಯಾಹ್ನ 2 ಗಂಟೆಗೆ ಇಲ್ಲಿಗೆ ಬಂದು ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಮಂಗಳವಾರವೇ ನಗರಕ್ಕೆ ಬಂದು ಜಲದರ್ಶಿನಿ ಅತಿಥಿಗೃಹದಲ್ಲಿ ತಂಗಿದ್ದಾರೆ. ಬುಧವಾರವೇ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಹ ಮಂಗಳವಾರದಿಂದಲೇ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಅರಮನೆಯಲ್ಲೂ ಖಾಸಗಿ ದರ್ಬಾರ್‌ಗಾಗಿ ಭರದ ಸಿದ್ಧತಾ ಕಾರ್ಯಗಳು ನಡೆದಿವೆ. ಕೋವಿಡ್ ಕಾರಣದಿಂದಾಗಿ ಮಾಧ್ಯಮದವರೂ ಸೇರಿದಂತೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದು, ರಾಜವಂಶಸ್ಥರಷ್ಟೇ ದರ್ಬಾರ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಅರಮನೆಯ ವೇದಿಕೆ ಹಾಗೂ ಕಲಾಮಂದಿರದಲ್ಲಿ ದಸರೆಯ ಅಷ್ಟೂ ದಿನಗಳು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ದೀಪಾಲಂಕಾರದ ಪರೀಕ್ಷೆಗಳು ನಗರದ ಹಲವೆಡೆ ಭರದಿಂದ ನಡೆದಿದೆ. ಬಹುತೇಕ ಕಡೆ ದೀಪಾಲಂಕಾರಗಳು ನಡೆದಿದೆ. ವಿವಿಧ ವಿನ್ಯಾಸಗಳ ರಚನಾ ಕಾರ್ಯವೂ ಅಂತಿಮ ಹಂತದಲ್ಲಿದೆ. ಗುಂಡಿ ಮುಚ್ಚುವ ಕಾರ್ಯವೂ ತರಾತುರಿಯಲ್ಲಿ ಅಲ್ಲಲ್ಲಿ ನಡೆದಿರುವ ದೃಶ್ಯಗಳು ಕಂಡು ಬಂದವು.

400 ಜನರಿಗಷ್ಟೇ ಅವಕಾಶ: ಅ. 7ರಂದು ಚಾಮುಂಡಿಬೆಟ್ಟದಲ್ಲಿ ನಡೆಯಲಿರುವ ದಸರಾ ಉದ್ಘಾಟನಾ ಸಮಾರಂಭಕ್ಕೆ  400 ಮಂದಿಗಷ್ಟೇ ಅವಕಾಶ ನೀಡಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಕೇವಲ 100 ಮಂದಿಗಷ್ಟೇ ಅವಕಾಶ ನೀಡಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎಸ್.ಟಿ.ಸೋಮಶೇಖರ್, ‘ಅ.7ರಿಂದ 15 ರವರೆಗೆ ದಸರಾ ನಡೆಯಲಿದೆ. ಉದ್ಘಾಟನೆಯ ನಂತರ ಚಾಮುಂಡಿಬೆಟ್ಟದಲ್ಲಿ ಯಾವುದೇ ನಿರ್ಬಂಧ ಇಲ್ಲ. ದೇವಾಲಯಕ್ಕೆ ಸರ್ವರಿಗೂ ಮುಕ್ತ ಪ್ರವೇಶವಿದೆ’ ಎಂದು ಹೇಳಿದರು.

‘ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಂಬೂ ಸವಾರಿ ನಡೆಯಲಿದೆ. ಅದರ ಹೊರತು ಬೇರೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಜಂಬೂ ಸವಾರಿ ವೀಕ್ಷಣೆಗೆ 500 ಮಂದಿಗೆ ಅವಕಾಶವಿದ್ದು, ಯಾವ ರೀತಿ ಅವಕಾಶ ಕಲ್ಪಿಸಬೇಕು ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು