ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ: ಮನೆಗಳಲ್ಲೇ ಕಣ್ತುಂಬಿಕೊಂಡರು; ಕೈ ಮುಗಿದು ಶಿರಬಾಗಿದರು...

ಜನ ಸಾಗರದೊಳಗೆ ಸಾಗದ ಜಂಬೂಸವಾರಿ; ಚಾಮುಂಡಿ ಬೆಟ್ಟ–ಅರಮನೆ ಆವರಣಕ್ಕೆ ಸೀಮಿತವಾದ 410ನೇ ದಸರಾ
Last Updated 26 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ನಾಲ್ಕು ಶತಮಾನದ ಐತಿಹ್ಯ ಹೊಂದಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಇದೇ ಮೊದಲ ಬಾರಿಗೆ ವರ್ಚುವಲ್‌ನಲ್ಲೇ ನಡೆಯಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈಯುತ್ತಿದ್ದಂತೆ, ಮನೆಗಳಲ್ಲೇ ಜಂಬೂಸವಾರಿಯ ನೇರ ಪ್ರಸಾರವನ್ನು ಟಿವಿಗಳಲ್ಲಿ ನೋಡುತ್ತಿದ್ದ ಅಪಾರ ಸಂಖ್ಯೆಯ ಜನರು ಕೈ ಮುಗಿದು, ಶಿರಬಾಗಿ ನಮಸ್ಕರಿಸಿದರು. ‘ಕಾಪಾಡು ತಾಯಿ’ ಎಂದು ಪ್ರಾರ್ಥಿಸಿದರು.

ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳು ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಹತ್ತಿರದಿಂದ ಪ್ರದರ್ಶಿಸಿದ್ದನ್ನು ಕಣ್ತುಂಬಿಕೊಂಡರು. ಧನ್ಯತಾಭಾವ ವ್ಯಕ್ತಪಡಿಸಿದರು. ಚಿನ್ನದ ಅಂಬಾರಿಯನ್ನು ಕಂಡು ಪುಳಕಿತರಾದರು. ಗಜಪಡೆಯ ರಾಜಗಾಂಭೀರ್ಯದ ನಡಿಗೆಗೆ ಮೂಕ ವಿಸ್ಮಿತರಾದರು.

ಮೈಸೂರಿಗರ ಬೇಸರ; ಮುನ್ನೆಚ್ಚರಿಕೆಗೆ ಪ್ರಶಂಸೆ

ಪ್ರತಿ ವರ್ಷವೂ ಜನ ಸಾಗರದ ನಡುವೆ ಸಾಗುತ್ತಿದ್ದ ಜಂಬೂಸವಾರಿ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಕೆಲವೇ ಜನರ ಸಮ್ಮುಖ ನಡೆದಿದ್ದಕ್ಕೆ ಹಲವರು ‘ಪ್ರಜಾವಾಣಿ’ ಬಳಿ ಬೇಸರ ವ್ಯಕ್ತಪಡಿಸಿದರು. ಸಾಂಕ್ರಾಮಿಕ ಸೋಂಕು ಕೊರೊನಾ ವೈರಸ್‌ಗೆ ಹಿಡಿಶಾಪ ಹಾಕಿದರು. ಮುಂದಿನ ದಸರಾ ವೇಳೆಗಾದರೂ ಎಲ್ಲವೂ ಸುಲಲಿತವಾಗಲಿ ಎಂದರು.

ಈ ಹಿಂದೆಯೂ ಸರಳ ದಸರಾ ನಡೆದಿತ್ತು. ಆಗಲೂ ಅರಮನೆಯ ಆವರಣಕ್ಕೆ ಸೀಮಿತಗೊಂಡಿತ್ತು. ಆದರೆ ಜಂಬೂಸವಾರಿ ವೀಕ್ಷಣೆಗೆ ಜನಸಾಗರವೇ ನೆರೆದಿತ್ತು ಎಂಬುದನ್ನು ಹಲವರು ನೆನಪಿಸಿಕೊಂಡರು.

‘ಜಂಬೂಸವಾರಿಯನ್ನು ಪ್ರತಿ ವರ್ಷವೂ ತಪ್ಪದೇ ಹತ್ತಿರದಿಂದ ಕಣ್ತುಂಬಿಕೊಳ್ಳುತ್ತಿದೆ. ಎಲ್ಲವೂ ಅಲ್ಲಿ ಸಿಗುತ್ತಿತ್ತು. ಕೋವಿಡ್‌ ಕಾರಣದಿಂದ ಮೊದಲ ಬಾರಿಗೆ ನೋಡಲು ಆಗಲಿಲ್ಲ. ಅನಿವಾರ್ಯವಾಗಿ ಚಂದನ ವಾಹಿನಿಯಲ್ಲಿ ನೋಡಿದೆ. ಚಾಮುಂಡೇಶ್ವರಿಯ ಮೆರವಣಿಗೆಗಿಂತ ಜಾಹೀರಾತೇ ಹೆಚ್ಚು ಪ್ರಸಾರವಾಯ್ತು’ ಎಂದು ಹೂಟಗಳ್ಳಿಯ ರವಿ ‘ಪ್ರಜಾವಾಣಿ’ ಬಳಿ ಬೇಸರ ವ್ಯಕ್ತಪಡಿಸಿದರು.

‘ಜಂಬೂಸವಾರಿಯನ್ನು ನೇರವಾಗಿ ವೀಕ್ಷಿಸಲಾಗಲಿಲ್ಲ ಎಂಬ ಬೇಸರ ಸಾಕಷ್ಟು ಕಾಡಿತು. ಆದರೆ ಸರ್ಕಾರ ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇತ್ತು. ಮನೆಯಲ್ಲೇ ಕುಟುಂಬದವರೆಲ್ಲರೂ ಒಟ್ಟಾಗಿ ಕುಳಿತು ತಾಯಿಯ ಮೆರವಣಿಗೆ ಕಣ್ತುಂಬಿಕೊಂಡೆವು’ ಎಂದು ವಿಜಯನಗರದ ಪರಮೇಶ್‌, ವಿನಯ್ ತಿಳಿಸಿದರು.

‘ಜಂಬೂಸವಾರಿ ವೀಕ್ಷಣೆಗಾಗಿಯೇ ಹಿಂದಿನ ದಿನವೇ ರಾಜ ಮಾರ್ಗದ ರಸ್ತೆಯ ಬದಿ ಜಾಗ ನಿಗದಿ ಪಡಿಸಿಕೊಂಡು ಕಾಯುತ್ತಿದ್ದೆವು. ಮಹಾರಾಜರ ಕಾಲದಿಂದಲೂ ನಮ್ಮ ಹಿರಿಯರು ಈ ಪರಂಪರೆಯನ್ನು ಹತ್ತಿರದಿಂದ ನೋಡಿಕೊಂಡು ಬಂದವರು. ಈ ಹಿಂದೆ ಸರಳ ದಸರಾ ಆಚರಣೆಗೊಂಡಾಗಲೂ ಅರಮನೆಯೊಳಗೆ ಹೋಗಿ ನೋಡಿದ್ದೆವು. ಆದರೆ ಇದೇ ಮೊದಲ ಬಾರಿಗೆ ತಾಯಿಯ ಮೆರವಣಿಗೆಯನ್ನು ನೇರವಾಗಿ ಕಣ್ತುಂಬಿಕೊಳ್ಳಲಾಗಲಿಲ್ಲ’ ಎಂದು ಕುಸುಮಾ, ರಶ್ಮಿ ಬೇಸರ ವ್ಯಕ್ತಪಡಿಸಿದರು.

ಲಕ್ಷ, ಲಕ್ಷ ಜನರಿಂದ ವೀಕ್ಷಣೆ...

‘ಪ್ರಜಾವಾಣಿ’ಯೂ ಸಹ ಈ ಬಾರಿಯ ಸರಳ, ಸಾಂಪ್ರದಾಯಿಕ, ವರ್ಚುವಲ್ ದಸರಾದ ಹಲವು ಕಾರ್ಯಕ್ರಮಗಳನ್ನು ತನ್ನ ಅಂತರ್ಜಾಲ ತಾಣ, ಫೇಸ್‌ಬುಕ್ ಪೇಜ್‌ನಲ್ಲಿ ನೇರ ಪ್ರಸಾರಗೊಳಿಸಿತ್ತು.

ಲಕ್ಷ, ಲಕ್ಷ ಜನರು ಈ ಕಾರ್ಯಕ್ರಮ ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

ಭುವನೇಶ್ವರಿ ದೇಗುಲದಲ್ಲಿ ಬನ್ನಿ ಪೂಜೆ

ಯದು ವಂಶದ ಸಂಪ್ರದಾಯದಂತೆ ವಿಜಯ ದಶಮಿಯಂದು (ಸೋಮವಾರ) ಅರಮನೆಯಲ್ಲಿ ವಿಜಯಯಾತ್ರೆ ನಡೆಯಿತು.

ಆಯುಧಗಳಿಗೆ ಉತ್ತರ ಪೂಜೆ ನೆರವೇರಿಸಲಾಯಿತು. ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆ ನಡೆಸಿದರು.

ಅರಮನೆಯಿಂದ ಭುವನೇಶ್ವರಿ ದೇವಸ್ಥಾನದಲ್ಲಿರುವ ಬನ್ನಿ ಮಂಟಪದವರೆಗೆ ಯದುವೀರ್‌ ಕಾರಿನಲ್ಲೇ ಬಂದರು. ಈ ಬಾರಿ ಕಂಚಿನ ಪಲ್ಲಕ್ಕಿಯನ್ನು ಏರಲಿಲ್ಲ. ಮಂಗಳವಾದ್ಯ ಹಾಗೂ ನಾದಸ್ವರದ ತಂಡ ಕಾರಿನ ಮುಂದೆ ಸಾಗಿದವು.

ಕಂಚಿನ ರಥದಲ್ಲೇ ಬಂದ ಪಟ್ಟದ ಕತ್ತಿ ತೆಗೆದುಕೊಂಡು ಹೋದ ಯದುವೀರ್‌, ಅರಮನೆಯ ಆವರಣದೊಳಗಿರುವ ಭುವನೇಶ್ವರಿ ದೇವಾಲಯದ ಬಳಿಯಿರುವ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಂಗಳವಾದ್ಯ ಮೊಳಗಿದವು. ಪುರೋಹಿತರ ತಂಡ ವೇದ–ಮಂತ್ರ ಪಠಿಸಿತು.

ವಿಜಯಯಾತ್ರೆ ಮುಗಿದ ತಕ್ಷಣವೇ ಚಾಮುಂಡೇಶ್ವರಿ ಅಮ್ಮನವರನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿತೊಟ್ಟಿಗೆ ಕರೆದೊಯ್ಯಲಾಯಿತು.

ಪಟ್ಟದ ಹಸು, ಕುದುರೆ, ಆನೆ ವಿಜಯಯಾತ್ರೆಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.

ಅರಮನೆ ಮುಂಭಾಗದ ಗ್ಯಾಲರಿಯಲ್ಲಿ ಪುತ್ರ ಆದ್ಯವೀರ್ ಜೊತೆ, ಯದುವೀರ್ ಅವರ ವಿಜಯಯಾತ್ರೆಯನ್ನು ತ್ರಿಷಿಕಾ ಕುಮಾರಿ ಕಣ್ತುಂಬಿಕೊಂಡ ಚಿತ್ರಣ ಗೋಚರಿಸಿತು.

ಗಜಪಡೆಗೆ ವಿಶೇಷ ಅಲಂಕಾರ–ಆಹಾರ

ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಸೇರಿದಂತೆ, ಕುಮ್ಕಿ ಆನೆಗಳಾಗಿ ಸಾಥ್ ನೀಡಿದ ಕಾವೇರಿ, ವಿಜಯಾ ಹಾಗೂ ಗೋಪಿ, ವಿಕ್ರಮ ಆನೆಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು.

ಸೋಮವಾರ ಬೆಳಿಗ್ಗೆಯೇ ಈ ಐದು ಆನೆಗಳಿಗೆ ಅರಮನೆ ಆವರಣದಲ್ಲಿನ ವೃತ್ತಾಕಾರದ ಮಜ್ಜನದ ಸ್ಥಳದಲ್ಲಿ ಸ್ನಾನ ಮಾಡಿಸಲಾಯಿತು. ನಂತರ ಕಲಾವಿದ ನಾಗಲಿಂಗಪ್ಪ ನೇತೃತ್ವದ ಹುಣಸೂರು ಮೂಲದ ಐವರು ಕಲಾವಿದರು ಗಜಪಡೆಯನ್ನು ಬಣ್ಣಗಳ ಚಿತ್ತಾರದಿಂದ ಸಿಂಗರಿಸಿ, ಜನಾಕರ್ಷಣೆ ಹೆಚ್ಚುವಂತೆ ಮಾಡಿದರು.

ಪ್ರತಿಯೊಂದು ಆನೆಯ ಕಿವಿ ಮೇಲೆ ಶಂಖ, ಚಕ್ರ, ಸೊಂಡಿಲಿನ ಮೇಲೆ ರಾಜಲಾಂಛನ ಗಂಡಭೇರುಂಡ, ಸೂರ್ಯ–ಚಂದ್ರ, ಹೂವು, ಎಲೆ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ ಹಾಗೂ ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿಯ ಚಿತ್ರಗಳನ್ನು ಬಿಡಿಸಿದರು.

ಕಣ್ಣಿನ ಸುತ್ತಲೂ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ರ ಬಿಡಿಸುವ ಮೂಲಕ ಗಜಪಡೆಯ ಅಂದ ಹೆಚ್ಚಿಸಿದರು. ಕಲಾವಿದ ನಾಗಲಿಂಗಪ್ಪ 16 ವರ್ಷಗಳಿಂದ ದಸರಾ ಗಜಪಡೆಯ ಆನೆಗಳ ಮೈಮೇಲೆ ಬಣ್ಣದ ಚಿತ್ತಾರ ಮೂಡಿಸುತ್ತಿದ್ದಾರೆ.

ಬಣ್ಣದ ಸಿಂಗಾರ ಮುಗಿದ ಕೆಲ ಹೊತ್ತಿನ ಬಳಿಕ, ಅರಣ್ಯ ಇಲಾಖೆಯ ಸಿಬ್ಬಂದಿ ‌ಗಜಪಡೆಗೆ ಹಣೆಪಟ್ಟಿ, ಕಾಲಿನ ಗೆಜ್ಜೆ, ಕೊರಳಿನ ಗಂಟೆ ಸೇರಿದಂತೆವಿವಿಧ ಆಭರಣದ ಮೂಲಕ ಅಲಂಕರಿಸಿತು.

ಮದುಮಗನಂತೆ ಅಭಿಮನ್ಯು, ಗೋಪಿ, ವಿಕ್ರಮ ಕಂಗೊಳಿಸಿದರೆ, ನವವಧುವಿನಂತೆ ಕಾವೇರಿ, ವಿಜಯಾ ಸಿಂಗಾರಗೊಂಡು ನೆರೆದಿದ್ದವರ ಮನ ಸೆಳೆದವು.

ಜಂಬೂಸವಾರಿಯ ಸಮಯದಲ್ಲಿ ಗಜಪಡೆಗೆ ದಣಿವಾಗದಂತೆ ವಿಶೇಷ ಆಹಾರ ತಿನ್ನಿಸಲಾಯಿತು. ಹಸಿ ಹುಲ್ಲಿನ ಕುಸುರೆಗೆ ಅವಲಕ್ಕಿ, ಬೆಲ್ಲ, ಕಾಯಿ, ಧಾನ್ಯಗಳ ಮಿಶ್ರಣ ಬಳಸಿ ಈ ಖಾದ್ಯ ತಯಾರಿಸಿದ್ದು ವಿಶೇಷವಾಗಿತ್ತು.

ಸಂಚಾರ ಸ್ಥಗಿತ: ಭಾರಿ ಬಿಗಿ ಭದ್ರತೆ

ಮೈಸೂರು ಅರಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಸೋಮವಾರ ವಾಹನ ಸಂಚಾರ ನಿಷೇಧಿಸಲಾಗಿತ್ತು. ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲಿತ್ತು.

ಬೆಳಿಗ್ಗೆಯೇ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದ ಐದು ತಂಡಗಳು ಅರಮನೆಯ ಸುತ್ತ ಹಾಗೂ ಒಳ ಭಾಗದಲ್ಲಿ‌ ತಪಾಸಣೆ ನಡೆಸಿದವು. ಅರಮನೆ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಬಸವೇಶ್ವರ ರಸ್ತೆ, ಬನುಮಯ್ಯ ಕಾಲೇಜು ರಸ್ತೆ, ಹಳೆ ಸಂತೆಪೇಟೆ ರಸ್ತೆಯಿಂದ ಅರಮನೆಗೆ ಬರುವ ಎಲ್ಲ ಮಾರ್ಗಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಪಾಲಿಕೆ ಮುಂಭಾಗದ ಪ್ರವೇಶ ದ್ವಾರದಲ್ಲಿ ಬಿಗಿ ತಪಾಸಣೆ ನಡೆಯಿತು. ಪಾಸ್‌ ಇದ್ದವರಿಗೆ ಮಾತ್ರ ಅರಮನೆಯ ಒಳಗಡೆ ಪ್ರವೇಶಕ್ಕೆ ಅವಕಾಶ ನೀಡಲಾಯಿತು.

‘535 ಪೊಲೀಸ್ ಕಾನ್‌ಸ್ಟೆಬಲ್‌, ತಲಾ 30 ಪಿಎಸ್‌ಐ, ಸಿಪಿಐ, ಎರಡು ಕಮಾಂಡೋ ಪಡೆ, 10 ಕೆಎಸ್‌ಆರ್‌ಪಿ ತುಕಡಿಯನ್ನು ಅರಮನೆಯ ಸುತ್ತಲೂ ಭದ್ರತೆಗಾಗಿ ನಿಯೋಜಿಸಿದ್ದೇವೆ. ಅರಮನೆಯ ಒಳಭಾಗದಲ್ಲಿ 50 ಪೊಲೀಸ್ ಸಿಬ್ಬಂದಿಯಷ್ಟೇ ಕರ್ತವ್ಯ ನಿರ್ವಹಿಸಿದರು’ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ಮಾಧ್ಯಮಗಳಿಗೆ ತಿಳಿಸಿದರು.

ಬೆಟ್ಟದಿಂದ ಅರಮನೆಗೆ ಬಂದ ಉತ್ಸವ ಮೂರ್ತಿ

ವಿಜಯದಶಮಿಯ ಜಂಬೂಸವಾರಿಯ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿಯ ಉತ್ಸವ ಮೂರ್ತಿ, ಸೋಮವಾರ ಬೆಟ್ಟದಿಂದ ಅರಮನೆ ಅಂಗಳಕ್ಕೆ ಆಗಮಿಸಿತು.

ದಸರಾ ಉದ್ಘಾಟನೆ ಹಾಗೂ ನವರಾತ್ರಿಯ ಧಾರ್ಮಿಕ ಆಚರಣೆಗಾಗಿಯೇ ಅರಮನೆಯಿಂದ ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿದ್ದ ಉತ್ಸವ ಮೂರ್ತಿ, ಸರ್ವಾಲಂಕೃತಗೊಂಡು ಅರಮನೆಗೆ ಬೆಟ್ಟದಿಂದ ಮರಳಿತು.

ಅರಮನೆಗೂ ಆಗಮಿಸುವ ಮುನ್ನ ಇಟ್ಟಿಗೆಗೂಡು ಬಡಾವಣೆಯಲ್ಲಿನ ರೇಣುಕಾದೇವಿ ದೇಗುಲ, ಸತ್ಯನಾರಾಯಣ ಸ್ವಾಮಿ ದೇಗುಲ ಸೇರಿದಂತೆ ಹಾದಿ ನಡುವಿನ ವಿವಿಧ ದೇಗುಲಗಳಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆಯಾಯಿತು.

ಜಯಮಾರ್ತಾಂಡ ದ್ವಾರದ ಮೂಲಕ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಅರಮನೆ ಪ್ರವೇಶಿಸುತ್ತಿದ್ದಂತೆ, ದಸರಾ ಮಹೋತ್ಸವದ ಸಂಭ್ರಮ ನೂರ್ಮಡಿಗೊಂಡಿತು. ಇದೇ ಸಂದರ್ಭ ವಿಶೇಷ ಪೂಜೆ ಸಲ್ಲಿಕೆಯಾಯ್ತು.

ನೆಮ್ಮದಿಯ ಬದುಕಿಗಾಗಿ ಪ್ರಾರ್ಥಿಸಿದ ಯಡಿಯೂರಪ್ಪ

‘ನಾಡಿನ ಜನರು ಸಕಲ ಸಂಕಷ್ಟದಿಂದ ಪಾರಾಗಿ, ನೆಮ್ಮದಿಯಿಂದ ಬದುಕುವಂತಾಗಲಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದರು.

ಜಂಬೂಸವಾರಿಯಲ್ಲಿ ಭಾಗಿಯಾಗಲಿಕ್ಕಾಗಿಯೇ ಬೆಂಗಳೂರಿನಿಂದ ಮೈಸೂರಿಗೆ ಬಂದ ಮುಖ್ಯಮಂತ್ರಿಯನ್ನು ಮಾಧ್ಯಮದವರು ಭೇಟಿ ಮಾಡುತ್ತಿದ್ದಂತೆಯೇ, ಯಡಿಯೂರಪ್ಪ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಕೋವಿಡ್‌ ಕಾರಣದಿಂದಾಗಿ ಈ ಬಾರಿ ಸರಳ ರೀತಿಯಲ್ಲಿ ದಸರಾ ಆಚರಣೆ ಮಾಡುತ್ತಿದ್ದೇವೆ. ಕೊರೊನಾ ವೈರಸ್‌ ಸೋಂಕು ಮುಕ್ತವಾದ ನಂತರ, ಮುಂದಿನ ವರ್ಷ ದಸರಾವನ್ನು ವಿಜೃಂಭಣೆಯಿಂದ ಆಚರಿಸುವ ಶಕ್ತಿಯನ್ನು ತಾಯಿ ಕೊಡಲಿ’ ಎಂದು ಮೊರೆಯಿಟ್ಟಿರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT