ಬುಧವಾರ, ಸೆಪ್ಟೆಂಬರ್ 23, 2020
19 °C
ಹೊರರಾಜ್ಯಗಳಿಂದ ಬಂದ ವ್ಯಾಪಾರಿಗಳು

ತುತ್ತಿನಚೀಲಕ್ಕಾಗಿ ದಸರೆಗೆ ಬಂದರು

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ದಸರೆಯ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಒಂದು ಕಡೆ ಜನಸಾಗರವೇ ಬಂದರೆ ಮತ್ತೊಂದು ಕಡೆ ನೂರಾರು ಮಂದಿ ವ್ಯಾಪಾರಿಗಳು ಹೊಟ್ಟೆ ಹೊರೆಯಲು ಬಂದಿದ್ದರು.

ಹೊರ ಜಿಲ್ಲೆಗಳು ಮಾತ್ರವಲ್ಲ; ಹೊರ ರಾಜ್ಯಗಳಿಂದಲೂ ವ್ಯಾಪಾರಿಗಳು ಈ ಬಾರಿ ಬಂದಿರುವುದು ವಿಶೇಷ. ಇವರೆಲ್ಲ ವಿವಿಧ ಬಗೆಯ ವಸ್ತುಗಳನ್ನು ಮಾರಾಟ ಮಾಡಿ ತುತ್ತಿನಚೀಲ ತುಂಬಿಸಿಕೊಂಡರು.

ಈ ಬಾರಿ ಹಾವೇರಿ ಜಿಲ್ಲೆಯಿಂದ ಬಂದ ‘ಉಪ್ಪಿನ ಕಡಲೆ’ ವ್ಯಾಪಾರಿಗಳ ತಂಡ ಮನಸೆಳೆದರು. 24 ಮಂದಿಯ ಈ ತಂಡ ನಗರದ ಹಲವೆಡೆ ಅಲ್ಲಿನ ವಿಶೇಷ ತಿನಿಸಾದ ‘ಉಪ್ಪಿನ ಕಡಲೆ’ಯನ್ನು ಮಾರಾಟ ಮಾಡಿದರು.

‘ನಮ್ಮ ತಂಡದಲ್ಲಿ ಗೆಳೆಯರು ಮತ್ತು ಸಂಬಂಧಿಕರು ಇದ್ದೇವೆ. ಹಾವೇರಿಯಿಂದ ರೈಲು ಮೂಲಕ ವಾರದ ಹಿಂದೆಯೇ ಬಂದಿದ್ದೇವೆ. 10 ಮೂಟೆಯಷ್ಟು ಉಪ್ಪಿನ ಕಡಲೆಯನ್ನು ತಂದಿದ್ದು, ಅದನ್ನು ಮಾರಾಟ ಮಾಡಿಯೇ ಊರಿಗೆ ತೆರಳುವುದು ಎಂದು ನಿರ್ಧರಿಸಿದ್ದೇವೆ’ ಎಂದು ವ್ಯಾಪಾರಿ ವಾಹಿದ್ ‘ಮೆಟ್ರೊ’ಗೆ ತಿಳಿಸಿದರು.

ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದ ‘ಉಪ್ಪಿನ ಕಡಲೆ’ ಈಗ ಮೈಸೂರು ಭಾಗದಲ್ಲಿ ಅಪರೂಪವಾಗಿದೆ. ಜಾತ್ರೆಯಲ್ಲಿ, ಹಳ್ಳಿಯ ಸಂತೆಗಳಲ್ಲಿ ಮಾತ್ರ ಸಿಗುತ್ತಿತ್ತು. ಇದನ್ನು ಅರಿತ ಈ ತಂಡವು ‘ಉಪ್ಪಿನ ಕಡಲೆ’ಯ ರುಚಿಯನ್ನು ದಸರಾದಲ್ಲೂ ಸವಿಯಲು ಅವಕಾಶ ನೀಡಿತು.

ತಂಡದ ಸದಸ್ಯರು ಜಂಬೂ ಸವಾರಿ ಸಾಗಿದ ಮಾರ್ಗದಲ್ಲಿ ವ್ಯಾಪಾರ ಮಾಡಿದರು. ಒಂದು ಪೊಟ್ಟಣವನ್ನು ₹ 10ಕ್ಕೆ ಮಾರಾಟ ಮಾಡುತ್ತಿದ್ದರು. ಬದುಕು ನಡೆಸಲು ದಸರೆ ನಮಗೆ ಆಧಾರವಾಗಿದೆ ಎಂದು ಅವರು ಖುಷಿ ಪಟ್ಟರು.

ಕರ್ಕಶವಾದ ಪೀಪಿ: ಈ ಬಾರಿ ದಸರೆಯಲ್ಲಿ ಕರ್ಕಶ ಧ್ವನಿ ಹೊಮ್ಮಿಸುವ ಪೀಪಿ ಸದ್ದು ಜನರಿಗೆ ಕಿರಿಕಿರಿ ಎನಿಸಿತು. ಯುವದಸರೆ ಸೇರಿದಂತೆ ಅನೇಕ ಕಡೆ ಈ ಬಗೆಯ ಪೀಪಿ ಊದುತ್ತ ಹಲವು ಯುವಕರು ಸಾರ್ವಜನಿಕರಿಗೆ ಬೇಸರ ತರಿಸಿದರು. ರಸ್ತೆಯುದ್ದಕ್ಕೂ ಇದನ್ನು ಊದುತ್ತಾ ಸಾಗಿದ ಅವರು ಸಂಭ್ರಮಿಸಿದರು.

ಉತ್ತರ ಭಾರತದ ಜಾರ್ಖಂಡ್, ಬಿಹಾರದಿಂದ ಬಂದಿದ್ದ ವ್ಯಾಪಾರಿಗಳು ಈ ಪೀಪಿಯನ್ನು ಮಾರಾಟ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.