ಮೈಸೂರು: ‘ಸಮಾಜಕ್ಕೆ ಬೇಕಿರುವುದು ಎರಡೇ ಭಾಗ್ಯ. ಒಂದು ಅನ್ನ ಭಾಗ್ಯ. ಮತ್ತೊಂದು ವಿವೇಕ ಭಾಗ್ಯ’ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಭಾನುವಾರ ಇಲ್ಲಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸ್ನೇಹ ಸಿಂಚನ ಟ್ರಸ್ಟ್, ಕಲ್ಪವೃಕ್ಷ ಟ್ರಸ್ಟ್ ಸಹಯೋಗದೊಂದಿಗೆ, ಕನ್ನಡ ಸಾಹಿತ್ಯ ಪರಿಷತ್‌ನ ನಿರ್ಗಮಿತ ಪದಾಧಿಕಾರಿಗಳಿಗೆ ನಡೆದ ಗೌರವ ಸಮರ್ಪಣೆ, 2021ರ ಕನ್ನಡ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು ಮಾತನಾಡಿದರು.
‘ಅಧ್ಯಾಪಕಕ್ಕಿಂತ ಅನ್ನವೇ ಮುಖ್ಯ ಎಂದು ವಿವೇಕಾನಂದರೇ ಹೇಳಿದ್ದಾರೆ. ಅನ್ನಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ವಿವೇಕ ಭಾಗ್ಯ. ಆದರೆ ಈಗಿನ ಕಾಲಘಟ್ಟದಲ್ಲಿ ಬಹುತೇಕರಲ್ಲಿ ವಿವೇಕವಿಲ್ಲ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಬಗ್ಗೆ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಆದರೆ, ರಾಮಕೃಷ್ಣ ಆಶ್ರಮವನ್ನು ನಿಂದಿಸುವ ಕೆಲಸದಲ್ಲಿ ಅನೇಕರು ತೊಡಗಿವುದು ಅಕ್ಷಮ್ಯ ಅಪರಾಧ’ ಎಂದು ಸಿಪಿಕೆ ಅಸಮಾಧಾನ ವ್ಯಕ್ತಪಡಿಸಿದರು.
‘ನನಗೆ ಅನೇಕ ಪ್ರಶಸ್ತಿ ಸಂದಿವೆ. ಆದರೆ ಇನ್ನೂ ಕೆಲವು ಪ್ರಶಸ್ತಿಗಳನ್ನು ದೊರೆಯದಂತೆ ನೋಡಿಕೊಳ್ಳುವವರು ಬಹಳಷ್ಟು ಜನರಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾದದ್ದು ನನಗೆ ಸಿಕ್ಕಂತಹ ದೊಡ್ಡ ಪ್ರಶಸ್ತಿ’ ಎಂದು ಅವರು ಹೇಳಿದರು.
ಮಾಜಿ ಶಾಸಕ ವಾಸು ಮಾತನಾಡಿದರು.
ಸಾಹಿತಿ ಪ್ರೊ.ಕೆ.ಭೈರವಮೂರ್ತಿ, ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಡಾ.ನಟರಾಜ ಜೋಯಿಸ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಡಾ.ವೈ.ಡಿ.ರಾಜಣ್ಣ, ಸ್ನೇಹ ಸಿಂಚನ ಟ್ರಸ್ಟ್ ಅಧ್ಯಕ್ಷೆ ಲತಾ ಮೋಹನ್, ಕಲ್ಪವೃಕ್ಷ ಟ್ರಸ್ಟ್‌ನ ಉಪಾಧ್ಯಕ್ಷೆ ಬಿ.ಪದ್ಮಾ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.