ಗುರುವಾರ , ಏಪ್ರಿಲ್ 9, 2020
19 °C
ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕರಿಂದ ಅವ್ಯವಹಾರ, ಅಕ್ರಮ, ಕಾನೂನು ಉಲ್ಲಂಘನೆ: ಚೋರನಹಳ್ಳಿ ಶಿವಣ್ಣ ಆರೋಪ

ಅಕ್ರಮಗಳ ಆರೋಪ: ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ವಜಾಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಅಕ್ರಮ ನೇಮಕಾತಿ, ಚಿನ್ನದ ಲೇಪನದಲ್ಲಿ ಅವ್ಯವಹಾರ, ಸಿ.ಸಿ. ಟಿವಿ ಕ್ಯಾಮೆರಾ ಖರೀದಿಯಲ್ಲೂ ಅಕ್ರಮ, ಹಣ ದುರ್ಬಳಕೆ ಸೇರಿದಂತೆ ಹಲವು ಅಕ್ರಮಗಳನ್ನು ಎಸಗಿರುವ ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರನ್ನು ಸೇವೆಯಿಂದ ವಜಾಗೊಳಿಸಿ, ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಚೋರನಹಳ್ಳಿ ಶಿವಣ್ಣ ಆಗ್ರಹಿಸಿದರು.

‘ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರಾಗಿರುವ ಟಿ.ಎಸ್.ಸುಬ್ರಹ್ಮಣ್ಯ ಅಕ್ರಮವಾಗಿ ಪದೋನ್ನತಿ ಹೊಂದಿದ್ದಾರೆ. ಕಾವಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ, ರಾಜಕೀಯ ಮತ್ತು ಹಣ ಬಲದಿಂದ ಅರಮನೆ ಮಂಡಳಿಗೆ ಉಪ ನಿರ್ದೇಶಕರಾಗಿ ನೇಮಕವಾಗಿ, ಅರ್ಹರಲ್ಲದರನ್ನೂ ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆ’ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

‘ಅರಮನೆ ಮಂಡಳಿ ದಿನಗೂಲಿ ನೌಕರ ಮೋಹನ್‍ಕುಮಾರ್ ಎಂಬಾತ ಮರಣ ಹೊಂದಿದ ಬಳಿಕ, ಆತನ ಹುದ್ದೆಯನ್ನು ಕಾಯಂಗೊಳಿಸಲಾಗಿದೆ. ನಂತರ ಸಾವು ತೋರಿಸಿ ಅನುಕಂಪದ ಆಧಾರದಲ್ಲಿ ಮೋಹನ್‌ಕುಮಾರ್‌ ಮಗ ಗಂಗಾಧರಸ್ವಾಮಿ ಅವರನ್ನು ಕಾನೂನು ಬಾಹಿರವಾಗಿ ಅನುಕಂಪದ ಆಧಾರದ ಮೇಲೆ, ದ್ವಿತೀಯ ದರ್ಜೆ ಸಹಾಯಕನಾಗಿ ನೇಮಿಸಿಕೊಳ್ಳಲಾಗಿದೆ’ ಎಂದು ಶಿವಣ್ಣ ಆರೋಪಿಸಿದರು.

‘ಟೆಂಡರ್ ಹರಾಜು ಪ್ರಕ್ರಿಯೆ ನಡೆಸದೆ ₹ 8 ಕೋಟಿ ಮೊತ್ತದ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಖರೀದಿಸಿ ಅವ್ಯವಹಾರ ಎಸಗಿದ್ದಾರೆ. ವಾಹನಗಳ ಪಾರ್ಕಿಂಗ್‍ನಲ್ಲಿ ನಡೆಯುತ್ತಿದ್ದ ದಂಧೆ ತಡೆಗಟ್ಟಲು ಸರ್ಕಾರ ವಿದ್ಯುತ್ ಚಾಲಿತ ಬಾಗಿಲು ಅಳವಡಿಸಿತ್ತು. ಆದರೆ ಎರಡು ತಿಂಗಳು ಕಳೆಯುವುದರೊಳಗಾಗಿ ಯಂತ್ರ ಸ್ಥಗಿತಗೊಳಿಸಿ, ಮತ್ತೆ ತಮ್ಮ ದಂಧೆ ನಡೆಸಿದ್ದಾರೆ’ ಎಂದು ದೂರಿದರು.

‘ಅರಮನೆಯಲ್ಲಿ ಸುಬ್ರಹ್ಮಣ್ಯ ನಡೆಸುತ್ತಿರುವ ಅಕ್ರಮದ ವಿರುದ್ಧ ದಲಿತ ನೌಕರರೊಬ್ಬರು ಜಿಲ್ಲಾಧಿಕಾರಿಗೆ 31 ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ದಲಿತ ಸಂಘಟನೆಗಳು ಹೋರಾಟ ನಡೆಸಿದ್ದರೂ ಸ್ಪಂದಿಸಿಲ್ಲ. ಈ ಭ್ರಷ್ಟ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸದಿದ್ದರೆ, ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಚೋರನಹಳ್ಳಿ ಶಿವಣ್ಣ ತಿಳಿಸಿದರು.

ಕೆ.ವಿ.ದೇವೇಂದ್ರ, ಟಿ.ಎನ್.ಗೋವಿಂದರಾಜು, ಮೂಡಹಳ್ಳಿ ಮಹದೇವ್, ಶಿವರಾಜ್ ಅರಸನ ಕೆರೆ, ಎಡತೊರೆ ಮಹದೇವಯ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)