ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸರ್ಕಾರದ ಮಧ್ಯಸ್ಥಿಕೆ ಕೋರಿದ ಜಿ.ಪಂ ಸಿಇಒ

ಮಂಡನೆಯಾಗದ ಬಜೆಟ್‌; ಕ್ರಿಯಾಯೋಜನೆಗಳಿಗೆ ಸರ್ಕಾರವೇ ಅನುಮೋದನೆ ನೀಡಲು ಆಗ್ರಹ
Last Updated 16 ಅಕ್ಟೋಬರ್ 2020, 13:19 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ಪಂಚಾಯಿತಿ ಬಜೆಟ್‌ ಮಂಡನೆಯಾಗದ ಹಿನ್ನೆಲೆಯಲ್ಲಿ ಸರ್ಕಾರದ ಅನುದಾನ ವಾಪಸ್‌ ಹೋಗುವ ಅಪಾಯ ಸ್ಥಿತಿ ನಿರ್ಮಾಣವಾಗಿದ್ದು ಇಂತಹ ಸಂದರ್ಭದಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ನಿಭಾಯಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಫಿಕರ್‌ ಉಲ್ಲಾ ಸರ್ಕಾರವನ್ನು ಕೋರಿದ್ದಾರೆ.

ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಅವರು ಪತ್ರ ಬರೆದಿದ್ದಾರೆ. ಕಳೆದೊಂದು ವರ್ಷದಿಂದ ಐದು ಬಾರಿ ಕೋರಂ ಕೊರತೆಯ ಕಾರಣಕ್ಕೆ, ಒಂದು ಬಾರಿ ಕೋವಿಡ್‌ ಕಾರಣಕ್ಕೆ ಜಿ.ಪಂ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ. ಇದರಿಂದಾಗಿ 2020–21ನೇ ಸಾಲಿನ ಬಜೆಟ್‌ ಅನುಮೋದನೆ ಆಗಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರದ ಮಧ್ಯಪ್ರವೇಶ ಅನಿವಾರ್ಯವಾಗಿದೆ ಎಂದು ಸಿಇಒ ಪತ್ರದಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಕ್ರಿಯಾ ಯೋಜನೆಗಳು ಅನುಮೋದನೆ ಆಗಿಲ್ಲ, ಇದರಿಂದಾಗಿ ಜಿಲ್ಲೆಯಾದ್ಯಂತ ಅಭಿವೃದ್ಧಿ ಕುಂಠಿತವಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ₹ 311 ಕೋಟಿ ಮೊತ್ತದ ಕ್ರಿಯಾ ಯೋಜನೆಗಳು ಅನುಮೋದನೆ ಆಗಿಲ್ಲ ತಿಳಿಸಿದ್ದಾರೆ.

ಒಂದು ವೇಳೆ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದರೆ ಅನುಮೋದನೆ ನೀಡುವ ಪ್ರಕ್ರಿಯೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ಈ ಸಾಲಿನ ಬಜೆಟ್‌ ಹಣವನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅನುದಾನ ವಾಪಸ್‌ ಹೋದರೆ ಜಿಲ್ಲೆಯು ಅಭಿವೃದ್ಧಿಯಲ್ಲಿ ಹಿಂದಕ್ಕೆ ಸಾಗುವ ಅಪಾಯ ಇದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಿ ಸಲಹೆ, ಸೂಚನೆ ನೀಡಬೇಕು ಎಂದು ಸಿಇಒ ಕೋರಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆಯ ಅನ್ವಯ ಜಿಲ್ಲಾ ಪಂಚಾಯಿತಿಯು ಯಾವುದೇ ಕರ್ತವ್ಯವನ್ನು ನಿರ್ವಹಣೆ ಮಾಡುವಲ್ಲಿ ತಪ್ಪಿದರೆ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಆ ಕರ್ತವ್ಯವನ್ನು ಸರ್ಕಾರ ನಿರ್ವಹಣೆ ಮಾಡಲು ಅವಕಾಶವಿದೆ. ಈ ಅವಕಾಶ ಬಳಕೆ ಮಾಡಿಕೊಂಡು ಮಂಡ್ಯ ಜಿಲ್ಲಾ ಪಂಚಾಯಿತಿಯಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ಒಂದು ವೇಳೆ ಈ ವಿಚಾರದಲ್ಲಿ ನಿರ್ದೇಶನ ಮಾಡುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬಂದರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಉಲ್ಲೇಖದಲ್ಲಿ ತಿಳಿಸಿರುವಂತೆ ಹಾಗೂ ವಿವಿಧ ಇಲಾಖೆಗಳ ಪ್ರಸ್ತಾವಗಳನ್ನು ಪಡೆದು ಕ್ರಿಯಾ ಯೋಜನೆಯನ್ನು ಸರ್ಕಾರದ ವತಿಯಿಂದಲೇ ಅನುಮೋದನೆ ಮಾಡಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

‘ನಮ್ಮ ಸದಸ್ಯರ ಸಹಕಾರದ ಕೊರತೆಯಿಂದ ಇಲ್ಲಿಯವರೆಗೂ ಬಜೆಟ್‌ ಮಂಡನೆ ಮಾಡಲು ಸಾಧ್ಯವಾಗಿಲ್ಲ. ಜೆಡಿಎಸ್‌ ಸದಸ್ಯರು ಇರುವ ಸ್ಥಾಯಿ ಸಮಿತಿಗಳಿಗೆ ಕೋರಂ ಸಮಸ್ಯೆ ಇಲ್ಲ. ಆದರೆ ನಾನು ಅಧ್ಯಕ್ಷೆಯಾಗಿರುವ ಹಣಕಾಸು ಸ್ಥಾಯಿ ಸಮಿತಿ ಸಭೆಗೂ ಕೋರಂ ಸಿಗಲಿಲ್ಲ. ಸದಸ್ಯರ ದೋರಣೆಯಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ಅನಿವಾರ್ಯವಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಕೋರಲಾಗಿದೆ’ ಎಂದು ಜಿ.ಪಂ ಅಧ್ಯಕ್ಷೆ ನಾಗರತ್ನಾ ಸ್ವಾಮಿ ತಿಳಿಸಿದರು.

*********

ಕೋರಂ ಪಡೆಯುವ ಸಾಮರ್ಥ್ಯ ಇಲ್ಲವೇ?

‘ಚುನಾಯಿತ ಪ್ರತಿನಿಧಿಗಳಿದ್ದರೂ, ಆಡಳಿತ ಮಂಡಳಿ ರಚನೆಯಾಗಿದ್ದರೂ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲು ಸರ್ಕಾರದ ಮೊರೆ ಹೋಗುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ. ಸದಸ್ಯರ ಸಹಕಾರ ಪಡೆದು ಬಜೆಟ್‌ ಮಂಡನೆ ಮಾಡುವ, ಕೋರಂ ಪಡೆಯುವ ಸಾಮರ್ಥ್ಯ ಅಧ್ಯಕ್ಷರಿಗೆ ಇಲ್ಲವೇ’ ಎಂದು ಪಕ್ಷೇತರ ಸದಸ್ಯ ಎನ್‌.ಶಿವಣ್ಣ ಪ್ರಶ್ನಿಸಿದರು.

‘ಕೋರಂ ಕೊರತೆ ಎಂಬ ನೆಪ ಇಟ್ಟುಕೊಂಡು ಸರ್ಕಾರಕ್ಕೆ ಪತ್ರ ಬರೆಯುವುದಾದರೆ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಏಕೆ ಇರಬೇಕು? ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಎಂದು ಸರ್ಕಾರವನ್ನು ಕೋರುವ ಅಧಿಕಾರ ಅಧಿಕಾರಿಗಳಿಗೆ ಇಲ್ಲ. ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕೋರಂ ಪಡೆಯಬೇಕು, ಬಜೆಟ್‌ ಮಂಡಿಸಿ, ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆಯಬೇಕು’ ಎಂದು ಒತ್ತಾಯಿಸಿದರು.

*********

ಅನುದಾನ ವಾಪಸ್‌ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಮಧ್ಯಪ್ರವೇಶಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು

– ಜುಲ್ಫಿಕರ್‌ ಉಲ್ಲಾ, ಜಿ.ಪಂ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT